ಬಿಟ್‌ಕಾಯಿನ್ ಹಗರಣದ ರೂವಾರಿ ಎನ್ನಲಾದ ಶ್ರೀಕಿ ಅಲಿಯಾಸ್ ಶ್ರೀ ಕೃಷ್ಣ ಸಹೋದರ ಸುದರ್ಶನ್ ರಮೇಶ್ ಅವರು ತಾನು ಉದ್ಯೋಗದ ನಿಮಿತ್ತ ನೆದರ್‌ಲ್ಯಾಂಡ್‌ಗೆ ಪ್ರಯಾಣ ಕೈಗೊಳ್ಳಲು ಅನುಮತಿಸುವಂತೆ ಕೋರಿ ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಕೇಂದ್ರ ಸರ್ಕಾರ, ಬ್ಯೂರೊ ಆಫ್ ಇಮಿಗ್ರೇಷನ್ ಮತ್ತು ಜಾರಿ ನಿರ್ದೇಶನಾಲಯಕ್ಕೆ ಸೋಮವಾರ ನೋಟಿಸ್ ಜಾರಿ ಮಾಡಿದೆ.
ಜಾರಿ ನಿರ್ದೇಶನಾಲಯವು ವಿದೇಶ ಪ್ರವಾಸ ಕೈಗೊಳ್ಳುವುದನ್ನು ಕಾನೂನುಬಾಹಿರವಾಗಿ ನಿರ್ಬಂಧಿಸಿದೆ ಎಂದು ಆಕ್ಷೇಪಿಸಿ ಸುದರ್ಶನ್ ರಮೇಶ್ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು. ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿರುವ ಪೀಠವು ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ.
ತಂದೆ ಹೈಪರ್‌ಟೆನ್ಷನ್ ಮತ್ತು ಪಾರ್ಕಿನ್‌ಸನ್‌ನಿಂದ ಬಳಲುತ್ತಿದ್ದು, ಸದ್ಯಕ್ಕೆ ಕೋಮಾದಲ್ಲಿದ್ದಾರೆ. ನಿರಂತರವಾಗಿ ಅವರಿಗೆ ವೈದ್ಯಕೀಯ ಉಪಚಾರದ ಅಗತ್ಯವಿದೆ. ಇದನ್ನು ನಿಭಾಯಿಸಲು ಹಣದ ಅವಶ್ಯಕತೆ ಇದ್ದು, ಕುಟುಂಬಸ್ಥರು ಜೀವನ ನಡೆಸಲು ನನ್ನನ್ನು ಆಧರಿಸಿದ್ದಾರೆ. ಹೀಗಾಗಿ, ಉದ್ಯೋಗಕ್ಕಾಗಿ ನೆದರ್‌ಲ್ಯಾಂಡ್‌ಗೆ ತೆರಳಲು ಎಲ್ಲಾ ಸಿದ್ಧತೆ ಮಾಡಿಕೊಂಡು ಜನವರಿ 13ರಂದು ಬೆಂಗಳೂರು ವಿಮಾನ ನಿಲ್ದಾಣದಿಂದ ತೆರಳುವ ವೇಳೆ ಇಮಿಗ್ರೇಷನ್ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರವಾಸಕ್ಕೆ ಅಡ್ಡಿಪಡಿಸಿದ್ದಾರೆ. ತಮ್ಮ ಪಾಸ್‌ಪೋರ್ಟ್ ಅನ್ನು ನಿರ್ಬಂಧಿಸಲಾಗಿದೆ. ಪ್ರವಾಸ ನಿರ್ಬಂಧಕ್ಕೆ ಸಂಬಂಧಿಸಿದಂತೆ ಪ್ರತಿವಾದಿಗಳು ಯಾವುದೇ ಮಾಹಿತಿ ನೀಡಿಲ್ಲ ಎಂದು ಮೆಕ್ಯಾನಿಕಲ್ ಎಂಜಿನಿಯರ್ ಆದ ಸುದರ್ಶನ್ ರಮೇಶ್ ಮನವಿಯಲ್ಲಿ ಆಕ್ಷೇಪಿಸಿದ್ದಾರೆ.
ಜಾರಿ ನಿರ್ದೇಶನಾಲಯವು ಜನವರಿ 13ರಂದು ಹೊರಡಿಸಿರುವ ಆಕ್ಷೇಪಾರ್ಹವಾದ ಆದೇಶವನ್ನು ರದ್ದುಪಡಿಸಿಬೇಕು. ಇದಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ದಾಖಲೆಗಳನ್ನು ಪೂರೈಸಲು ಆದೇಶಿಸಬೇಕು. ಅರ್ಜಿದಾರರು ಪ್ರವಾಸ ಕೈಗೊಳ್ಳಲು ಅನುಮತಿಸಬೇಕು. ಪ್ರತಿವಾದಿಗಳ ವಿರುದ್ಧ ತನಿಖೆ ಆದೇಶಿಸಬೇಕು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಅರ್ಜಿದಾರರಿಗೆ ನ್ಯಾಯಾಲಯ ನಿರ್ಧರಿಸಿದ ಪರಿಹಾರ ವಿತರಿಸಲು ಆದೇಶ ಮಾಡಬೇಕು ಎಂದು ಕೋರಿದ್ದಾರೆ.
ಮಧ್ಯಂತರ ಪರಿಹಾರದ ಭಾಗವಾಗಿ ನ್ಯಾಯದಾನದ ದೃಷ್ಟಿಯಿಂದ ಅರ್ಜಿದಾರರು ನೆದರ್‌ಲ್ಯಾಂಡ್‌ಗೆ ಪ್ರವಾಸ ಕೈಗೊಳ್ಳಲು ವಿಧಿಸಿರುವ ನಿರ್ಬಂಧ ತೆರವು ಮಾಡುವಂತೆ ಪ್ರತಿವಾದಿಗಳಿಗೆ ಆದೇಶಿಸಬೇಕು. ಅರ್ಜಿದಾರರ ವಿರುದ್ಧ ದುರುದ್ದೇಶಪೂರಿತ ಕ್ರಮಕ್ಕೆ ಮುಂದಾಗದಂತೆ ನಿರ್ದೇಶಿಸಬೇಕು ಎಂದು ಸುದರ್ಶನ್ ರಮೇಶ್ ಮನವಿಯಲ್ಲಿ ಕೋರಿದ್ದಾರೆ.
ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಳೆದ ವರ್ಷದ ಡಿಸೆಂಬರ್ 29 ಮತ್ತು 30 ಹಾಗೂ ಪ್ರಸಕ್ತ ವರ್ಷದ ಜನವರಿ 1ರಂದು ಸಮನ್ಸ್ ಜಾರಿಗೊಳಿಸಿದ್ದರು. ಈ ವಿಚಾರಣೆಯಲ್ಲಿ ಭಾಗಿಯಾಗಿದ್ದು, ತನಗೂ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ. ಶ್ರೀಕಿ ಸುತ್ತಲೂ ಸುತ್ತಿಕೊಂಡಿರುವ ಬಿಟ್ ಕಾಯಿನ್ ಹಗರಣ ಬೆಳಕಿಗೆ ಬಂದ ಸಂದರ್ಭದಲ್ಲಿ ತಾನು ಭಾರತದಲ್ಲೇ ಇರಲಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾಗಿ ಅವರು ಮನವಿಯಲ್ಲಿ ವಿವರಿಸಿದ್ದಾರೆ.