ಬಿಟ್‌ ಕಾಯಿನ್‌ ಹಗರಣ: ಆರೋಪಪಟ್ಟಿ ಸಲ್ಲಿಕೆ ಬೆನ್ನಿಗೇ ಸಿಸಿಬಿ ತನಿಖೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ ಕಾಂಗ್ರೆಸ್‌

ನೂರಾರು ಕೋಟಿ ರೂಪಾಯಿ ಮೌಲ್ಯದ 31.8 + 186 ಬಿಟ್‌ ಕಾಯಿನ್‌ಗಳು ಯಾರ ಬಳಿ ಇವೆ? 5 ಸಾವಿರ ಕ್ರಿಪ್ಟೊ ಕರೆನ್ಸಿಗಳಿವೆ ಎಂದು ಆರೋಪಿ ಸ್ವಯಂಪ್ರೇರಿತ ಹೇಳಿಕೆ ನೀಡಿದರೂ 3 ತಿಂಗಳ ಕಾಲ ರಾಷ್ಟ್ರೀಯ ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡಿಲ್ಲವೇಕೆ?
Accused Sri Krishna alias Shriki
Accused Sri Krishna alias Shriki

ರಾಷ್ಟ್ರಮಟ್ಟದಲ್ಲಿ ಸಂಚಲನ ಸೃಷ್ಟಿಸಿರುವ ಬಿಟ್‌ ಕಾಯಿನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಸೇರಿದಂತೆ ಐವರ ವಿರುದ್ಧ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬೆಂಗಳೂರಿನ ಮೊದಲನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಈಚೆಗೆ ಆರೋಪ ಪಟ್ಟಿ ಸಲ್ಲಿಸಿರುವ ಬೆನ್ನಿಗೇ, ಪೊಲೀಸರ ತನಿಖೆಗೆ ಸಂಬಂಧಿಸಿದಂತೆ ಪ್ರತಿಪಕ್ಷ ಕಾಂಗ್ರೆಸ್‌ ಗಂಭೀರ ಆರೋಪಗಳನ್ನು ಮಾಡಿದೆ (ಪೊಲೀಸ್‌ ಇನ್‌ಸ್ಪೆಕ್ಟರ್‌ ಶ್ರೀಧರ್‌ ಪೂಜಾರಾ ವರ್ಸಸ್‌ ಶ್ರೀಕೃಷ್ಣ ರಮೇಶ್‌ ಅಲಿಯಾಸ್‌ ಶ್ರೀಕಿ).

ಪ್ರಕರಣವು ನ್ಯಾಯಾಲಯದ ವ್ಯಾಪ್ತಿಯಲ್ಲಿರುವಾಗಲೇ ಪೊಲೀಸರ ತನಿಖೆಗೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಶಾಸಕ ಪ್ರಿಯಾಂಕ್‌ ಖರ್ಗೆ ಹಾಗೂ ಪ್ರದೇಶ ಕಾಂಗ್ರೆಸ್‌ ಸಮಿತಿಯ ಕಾನೂನು ಘಟಕದ ಮುಖ್ಯಸ್ಥ ಹಾಗೂ ಮಾಜಿ ಅಡ್ವೊಕೇಟ್‌ ಜನರಲ್‌ ಎ ಎಸ್‌ ಪೊನ್ನಣ್ಣ ಅವರು ಶುಕ್ರವಾರ ಮಾಧ್ಯಮ ಗೋಷ್ಠಿ ನಡೆಸಿದ್ದು, ಕೆಳಗಿನ ಪ್ರಶ್ನೆಗಳನ್ನು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಹಾಕಿದ್ದಾರೆ:

  • ಆರೋಪಿ ಕಸ್ಟಡಿಯಲ್ಲಿದ್ದಾಗ ಡ್ರಗ್ಸ್‌ ಹೇಗೆ ಪಡೆದುಕೊಂಡ? ಆರೋಪಿಯನ್ನು ಮಂಪರಿನಲ್ಲಿ ಇಟ್ಟಿದ್ದೇಕೆ? (ಆರೋಪಿಗೆ ಡ್ರಗ್ಸ್‌ ನೀಡುವ ಮೂಲಕ ನ್ಯಾಯಾಲಯಕ್ಕೆ ವಂಚಿಸಿರುವ ಪ್ರಯತ್ನಗಳು ಎದ್ದು ಕಾಣುತ್ತಿವೆ. ಆರೋಪಿಯ ರಕ್ತ ಮತ್ತು ಮೂತ್ರದ ಮಾದರಿ ಪರೀಕ್ಷೆಯ ಕುರಿತು ಮ್ಯಾಜಿಸ್ಟ್ರೇಟ್‌ ಆದೇಶ ಮಾಡಿದ್ದರೂ ಅದರ ವರದಿಯನ್ನು ಸಲ್ಲಿಸಲಾಗಿಲ್ಲ).

  • ಪೊಲೀಸರು ಹಿಂಪಡೆಯದೇ ಇರುವುದರಿಂದ ಅಪರಾಧ ಸಂಖ್ಯೆ 45/2020ರ ಮೂರನೇ ಪಂಚನಾಮೆಯ ಸ್ಕ್ರೀನ್‌ಶಾಟ್‌ನಲ್ಲಿ ತೋರಿಸಲಾಗಿರುವಂತೆ ನೂರಾರು ಕೋಟಿ ರೂಪಾಯಿ ಮೌಲ್ಯದ 31.8 + 186 ಬಿಟ್‌ ಕಾಯಿನ್‌ಗಳು ಎಲ್ಲಿವೆ? ಈಗ ಅವುಗಳು ಯಾರ ಬಳಿ ಇವೆ?

  • ತನ್ನ ಬಳಿ 5 ಸಾವಿರ ಕ್ರಿಪ್ಟೊ ಕರೆನ್ಸಿಗಳಿವೆ ಎಂದು ಆರೋಪಿಯು ಸ್ವಯಂಪ್ರೇರಿತವಾಗಿ ಹೇಳಿಕೆ ನೀಡಿದರೂ ಉದ್ದೇಶಪೂರ್ವಕವಾಗಿ ಮೂರು ತಿಂಗಳ ಕಾಲ ಜಾರಿ ನಿರ್ದೇಶನಾಲಯ, ಕೇಂದ್ರೀಯ ತನಿಖಾ ದಳ ಮತ್ತು ಇಂಟರ್‌ಪೋಲ್‌ಗೆ ಮಾಹಿತಿ ನೀಡಿಲ್ಲವೇಕೆ? (ರಾಜ್ಯದ ವ್ಯಾಪ್ತಿ ಮೀರಿದ ಆರ್ಥಿಕ ಅಪರಾಧಗಳನ್ನು ಉನ್ನತ ತನಿಖಾ ಸಂಸ್ಥೆಗಳ ಗಮನಕ್ಕೆ ತರಬೇಕು ಎಂದು ಸರ್ಕಾರದ ಶಾಸನಬದ್ಧ ಆದೇಶದಲ್ಲಿ ಹೇಳಲಾಗಿದೆ)

  • ಆರೋಪ ಪಟ್ಟಿಯು ಅಪರಿಪೂರ್ಣ ತನಿಖೆಯ ಅಂಶಗಳಿಂದ ತುಂಬಿದೆ. ಆರೋಪ ಪಟ್ಟಿಯಲ್ಲಿ ಸ್ಕೈಪ್‌ ಚಾಟ್‌ಗಳು, ಫೇಸ್‌ಬುಕ್‌ ಚಾಟ್‌ಗಳು, ಲಾಗ್‌ಗಳನ್ನು ಉಲ್ಲೇಖಿಸಲಾಗಿಲ್ಲ. ಆರೋಪಿಯನ್ನು 100 ದಿನಗಳಿಗೂ ಹೆಚ್ಚು ಕಾಲ ಪೊಲೀಸ್‌ ವಶದಲ್ಲಿಟ್ಟುಕೊಂಡಿದ್ದರೂ ಹ್ಯಾಕ್‌ ಮಾಡಲಾದ ಯಾವುದೇ ಬಿಟ್‌ ಕಾಯಿನ್‌ಗಳನ್ನು ವಶಪಡಿಸಿಕೊಳ್ಳಲಾಗಿಲ್ಲ. 2016ರಲ್ಲಿ ನೆಟ್‌4ಇಂಡಿಯಾ ಹ್ಯಾಕ್‌ ವಿಚಾರವನ್ನು ದೆಹಲಿಯ ಆರ್ಥಿಕ ಅಪರಾಧ ದಳಕ್ಕೆ ತಿಳಿಸಲಾಗಿಲ್ಲ.

  • 80 ಸಾವಿರ ಯುರೊಗಳನ್ನು ವರ್ಗಾವಣೆ ಮಾಡಿರುವ ಆರ್ಥಿಕ ಅಪರಾಧದ ತನಿಖೆ ಮಾಡಲಾಗಿಲ್ಲ. ಇಲ್ಲವೇ ಅದನ್ನು ಜಾರಿ ನಿರ್ದೇಶನಾಲಯಕ್ಕೆ ತಿಳಿಸಲಾಗಿಲ್ಲ. ಮಾದಕ ವಸ್ತು ಕಳ್ಳಸಾಗಣೆಗೆ ಸಂಬಂಧಿಸಿದ ಫೇಸ್‌ಬುಕ್‌ ಚಾಟ್‌ಗಳನ್ನು ತನಿಖೆ ಮಾಡಲಾಗಿಲ್ಲ. ಇಲ್ಲವೇ ಅದನ್ನು ರಾಷ್ಟ್ರೀಯ ಮಾದಕವಸ್ತು ಸಂಸ್ಥೆಯ (ಎನ್‌ಸಿಬಿ) ಗಮನಕ್ಕೆ ತರಲಾಗಿಲ್ಲ.

  • 5 ಸಾವಿರ ಬಿಟ್‌ ಕಾಯಿನ್‌ ಬಗ್ಗೆ ಉಲ್ಲೇಖವಿಲ್ಲ (ಇಂದಿನ ಮೌಲ್ಯದಲ್ಲಿ ಅದು 2,500 ಕೋಟಿ ರೂಪಾಯಿ ಬೆಲೆ ಹೊಂದಿದೆ). ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್‌ ವೆಬ್‌ಸೈಟ್‌ ಹ್ಯಾಕ್‌ ಮಾಡಿ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿರುವುದರ ಕುರಿತು ನಿಗಾ ಇಡಲಾಗಿಲ್ಲ (ಆರೋಪಿಯು ಈ ಕುರಿತು ಸ್ವಯಂಪ್ರೇರಿತವಾಗಿ ಹೇಳಿಕೆ ನೀಡಿದ್ದಾನೆ).

ಪ್ರಕರಣ ಕಾಲಾನುಕ್ರಮ

2020ರ ನವೆಂಬರ್‌ 14: ಗೋಪಾಲ್‌ ರಮೇಶ್‌ ಎಂಬವರ ಪುತ್ರ 25 ವರ್ಷದ ಶ್ರೀಕೃಷ್ಣ ಬೆಂಗಳೂರಿನ ರೇಸ್‌ ಕೋರ್ಸ್‌ ರಸ್ತೆಯಲ್ಲಿರುವ ಮೌರ್ಯ ಹೋಟೆಲ್‌ನಲ್ಲಿ ರಾಬಿನ್‌ ಖಂಡೇಲ್‌ವಾಲ್‌ ಜೊತೆ ತನಿಖಾಧಿಕಾರಿ ಶ್ರೀಧರ್‌ ಪೂಜಾರ್‌ ಅವರಿಗೆ ಶರಣಾಗುತ್ತಾನೆ (ಈ ಸಂಬಂಧ ಮೂರು ದಿನಗಳಾದರೂ ಯಾವುದೇ ವರದಿಯಿಲ್ಲ).

2020ರ ನವೆಂಬರ್‌ 17: ಇ-ಪ್ರೊಕ್ಯೂರ್‌ಮೆಂಟ್‌ ಪೋರ್ಟಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ತೋರಿಸಲಾಗಿದ್ದು, 2020ರ ನವೆಂಬರ್‌ 30ರ ವರೆಗೆ 14 ದಿನಗಳ ಕಾಲ ಸಿಸಿಬಿ ಪೊಲೀಸ್‌ ವಶಕ್ಕೆ ನೀಡಲಾಗಿತ್ತು.

2020ರ ಡಿಸೆಂಬರ್‌ 2: ಮಾದಕ ವಸ್ತು ಪ್ರಕರಣದಲ್ಲಿ ಡಿಸೆಂಬರ್‌ 2ರಂದು ಶ್ರೀಕಿಯನ್ನು ಮತ್ತೆ ಬಂಧಿಸಿ 12 ದಿನಗಳ ಕಾಲ ರಿಮ್ಯಾಂಡ್‌ಗೆ ನೀಡಲಾಗಿತ್ತು.

2020ರ ಡಿಸೆಂಬರ್‌ 14: ಪೆಸಿಫಿಕ್‌ ಗೇಮಿಂಗ್‌ ಪ್ರೈವೇಟ್‌ ಲಿಮಿಟೆಡ್‌ನ ಆನ್‌ಲೈನ್‌ ಪೋಕರ್‌ ಪ್ರಕರಣದಲ್ಲಿ ಶ್ರೀಕೃಷ್ಣನನ್ನು ಡಿಸೆಂಬರ್‌ 14ರಂದು ಮತ್ತೆ ಬಂಧಿಸಲಾಗಿದ್ದು, ಡಿಸೆಂಬರ್‌ 28ರ ವರೆಗೆ ಪೊಲೀಸ್‌ ಕಸ್ಟಡಿಯ ಜೊತೆಗೆ 2021ರ ಜನವರಿ 7ರ ವರೆಗೆ ಹೆಚ್ಚುವರಿಯಾಗಿ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

2020ರ ಡಿಸೆಂಬರ್‌ 18: ಬಿಟ್‌ ಕಾಯಿನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಶ್ರೀಕಿಯನ್ನು ಬಂಧಿಸಿ 2021ರ ಜನವರಿ 10ರ ವರೆಗೆ 14 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ವಹಿಸಲಾಗಿತ್ತು.

2021ರ ಜನವರಿ 8: ತನಿಖಾಧಿಕಾರಿಯಾದ ಚಂದ್ರಶೇಖರ್‌ ಅವರು ಬಿಟ್‌ ಕಾಯಿನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚನಾಮೆ ನಡೆಸಲು ಇಬ್ಬರು ಅಧಿಕಾರಿಗಳನ್ನು ನಿಯೋಜಿಸುವಂತೆ ಎಸ್‌ 20 ಉಪ ವಿಭಾಗದ ಸಹಾಯಕ ಎಲೆಕ್ಟ್ರಿಕ್‌ ಎಂಜಿನಿಯರ್‌ ಜಗದೀಶ್‌ ಅವರಿಗೆ ಪತ್ರ ಬರೆದಿದ್ದರು. ಕಿರಿಯ ಲೈನ್‌ಮ್ಯಾನ್‌ ಮತ್ತು ಪವರ್‌ ಮ್ಯಾನ್‌ ಅವರನ್ನು ಪಂಚನಾಮೆಗೆ ನಿಯೋಜಿಸಲಾಗಿತ್ತು. ಇದಕ್ಕೆ ಸಂಬಂಧಿಸದ ವ್ಯಕ್ತಿಗಳು ಇದರಲ್ಲಿ ಭಾಗಿಯಾಗಿದ್ದರು. ಆರೋಪ ಪಟ್ಟಿಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ಮೊದಲ ಆರು ಪುಟಗಳ ವರದಿ ಕಾಣಿಸುತ್ತಿಲ್ಲ.

2021ರ ಜನವರಿ 11: ಆರೋಪಿ ಶ್ರೀಕೃಷ್ಣನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಸಂದರ್ಭದಲ್ಲಿ ಆತನ ತಂದೆ ಗೋಪಾಲ್‌ ರಮೇಶ್‌ ಅವರು ಸಿಆರ್‌ಪಿಸಿ ಸೆಕ್ಷನ್‌ 190(1) (ಸಿ) ಅಡಿ ಮನವಿ ಸಲ್ಲಿಸಿದ್ದು, ಇದರಲ್ಲಿ ಪೊಲೀಸ್‌ ಮತ್ತು ಜಂಟಿ ಆಯುಕ್ತರು ಕಾನೂನುಬಾಹಿರವಾಗಿ ಶ್ರೀಕಿಗೆ ವ್ಯಾಕುಲತೆಗೆ ಒಳಗಾಗುವ ಅಲ್ಪ್ರಾಜೋಲಮ್‌ ಮಾದಕ ವಸ್ತು ನೀಡಿದ್ದಾರೆ ಎಂದು ಆರೋಪಿಸಿದ್ದರು.

ಈ ಸಂದರ್ಭದಲ್ಲಿ ಮ್ಯಾಜಿಸ್ಟ್ರೇಟ್‌ ಮುಂದೆ ಪೊಲೀಸ್‌ ಕಸ್ಟಡಿಯಲ್ಲಿ ಇರುವಾಗ ತನಗೆ ಅಲ್ಪ್ರಾಜೋಲಮ್‌ ನೀಡಲಾಗಿದೆ ಎಂಬುದನ್ನು ಆರೋಪಿ ಶ್ರೀಕಿ ಒಪ್ಪಿಕೊಂಡಿದ್ದ. ಆಗ ಆರೋಪಿಯ ರಕ್ತ ಮತ್ತು ಮೂತ್ರದ ಪರೀಕ್ಷೆ ನಡೆಸುವಂತೆ ಆದೇಶಿಸಿದ್ದ ಮ್ಯಾಜಿಸ್ಟ್ರೇಟ್‌, ಆತನ ಪೊಲೀಸ್‌ ಕಸ್ಟಡಿಯನ್ನು ಜನವರಿ 12ರ ವರೆಗೆ ವಿಸ್ತರಿಸಿದ್ದರು.

2021ರ ಜನವರಿ 12: ನ್ಯಾಯಾಲಯದ ಆದೇಶ ಉಲ್ಲಂಘಿಸಿ ಪೊಲೀಸರು ಆರೋಪಿ ಶ್ರೀಕಿಯ ಹೊಟ್ಟೆ ಶುಚಿಗೊಳಿಸುತ್ತಾರೆ (ಇದು ಸಂಪೂರ್ಣವಾಗಿ ಕಾನೂನುಬಾಹಿರ). ಆರೋಪಿಯ ತಂದೆ ರಿಟ್‌ ಮನವಿಯಲ್ಲಿ ಇದನ್ನು ಪ್ರಶ್ನಿಸಿದ್ದಾರೆ. ಆರೋಪಿಯ ರಕ್ತ ಮತ್ತು ಮೂತ್ರದ ಪರೀಕ್ಷೆ ನಡೆಸಲಾಗಿಲ್ಲ. ಈ ನಡುವೆ ಮತ್ತೊಮ್ಮೆ ಆತನನ್ನು ಬಂಧಿಸಿದ್ದು, ಜನವರಿ 16ರ ವರೆಗೆ ಸಿಐಡಿ ಪೊಲೀಸರ ವಶಕ್ಕೆ ನೀಡಲಾಗಿತ್ತು (ರಿಟ್‌ ಮನವಿಯಲ್ಲಿ ಹೇಳಲಾಗಿರುವಂತೆ ಬೌರಿಂಗ್‌ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಲಾಗಿದ್ದು, ಶ್ರೀಕಿಯನ್ನು ಜನವರಿ 30ರ ವರೆಗೆ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ ಎಂದು ತನಿಖಾಧಿಕಾರಿಯು ಹೇಳಿದ್ದಾರೆ).

ಶ್ರೀಕೃಷ್ಣನಿಂದ ಒಂಭತ್ತು ಕೋಟಿ ರೂಪಾಯಿ ಮೌಲ್ಯದ 31 ಬಿಟ್‌ ಕಾಯಿನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ಪೊಲೀಸರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

2021ರ ಜನವರಿ 18: ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತರಿಗೆ ತನಿಖಾಧಿಕಾರಿ ಚಂದ್ರಶೇಖರ್‌ ಅವರು ಪತ್ರ ಬರೆದು ಎರಡನೇ ಪಂಚನಾಮೆ ನಡೆಸಲು ಇಬ್ಬರು ಅಧಿಕಾರಿಗಳನ್ನು ನೇಮಿಸುವಂತೆ ಕೋರಿದ್ದಾರೆ. ವರ್ಗಾವಣೆ ಯಶಸ್ವಿಯಾಗಿದೆ ಎಂದು ವರದಿ.

2021ರ ಜನವರಿ 22: 186 ಬಿಟ್‌ ಕಾಯಿನ್‌ಗಳಿಗೆ ಸಂಬಂಧಿಸಿದ ಮೂರನೇ ಪಂಚನಾಮೆ ವಿಫಲ. ಅಪ್ಲಿಕೇಶನ್‌ ದೋಷಪೂರಿತವಾಗಿದ್ದು, ತಪ್ಪಾದ ರಸೀದಿ ನೀಡಿದೆ ಎಂದು ಪಂಚನಾಮೆಯನ್ನು ಪೂರ್ಣಗೊಳಿಸಲಾಗಿದೆ. ಬಳಿಕ ಯುನೊಕಾಯಿನ್‌ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯು ಹಿಂದಿನ 31 ಬಿಟ್‌ ಕಾಯಿನ್‌ಗಳ ವರ್ಗಾವಣೆಯು ನಕಲಿಯಾಗಿದ್ದು, ಒಟ್ಟಾರೆ ಪೊಲೀಸರ ಕೈನಲ್ಲಿ ಯಾವುದೇ ಬಿಟ್‌ ಕಾಯಿನ್‌ ಇಲ್ಲ ಎಂದು ಷರಾ ಬರೆದಿತ್ತು.

2021ರ ಫೆಬ್ರವರಿ 5: ಶ್ರೀಕಿ ತಂದೆ ಗೋಪಾಲ್‌ ರಮೇಶ್‌ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಆರು ಮನವಿಗಳನ್ನು ಒಳಗೊಂಡ ಅರ್ಜಿ ಸಲಿಸಿದ್ದರು. ಬಿಟ್‌ ಕಾಯಿನ್‌ ಹ್ಯಾಕಿಂಗ್‌ಗೆ ಸಂಬಂಧಿಸಿದಂತೆ ಮಾಧ್ಯಮ ವರದಿಯನ್ನು ಗಮನಿಸಿ ವಿವರಣೆ ಕೇಳಿ ಪತ್ರ ಬರೆದ ಜಾರಿ ನಿರ್ದೇಶನಾಲಯ.

2021ರ ಮಾರ್ಚ್‌ 3: 31 ಬಿಟ್‌ ಕಾಯಿನ್‌ಗಳಿಗೆ ಸಂಬಂಧಿಸಿದಂತೆ ತನಿಖಾಧಿಕಾರಿಯ ವರದಿಯನ್ನು ಒಳಗೊಂಡ ಪತ್ರವನ್ನು ಜಾರಿ ನಿರ್ದೇಶನಾಲಯಕ್ಕೆ ಬರೆದ ಐಪಿಎಸ್‌ ಅಧಿಕಾರಿ ಸಂದೀಪ್‌ ಪಾಟೀಲ್‌.

2021ರ ಏಪ್ರಿಲ್‌ 17: ಪೊಲೀಸ್‌ ಕಸ್ಟಡಿಯಿಂದ ಆರೋಪಿ ಶ್ರೀಕೃಷ್ಣ ಬಿಡುಗಡೆ.

2021ರ ಏಪ್ರಿಲ್‌ 24: ಅಗತ್ಯ ಕ್ರಮಕೈಗೊಳ್ಳುವ ಸಂಬಂಧ ಇಂಟರ್‌ಪೋಲ್‌ ಅಥವಾ ಸಂಬಂಧಪಟ್ಟ ಸಂಸ್ಥೆಗೆ ತಿಳಿಸುವಂತೆ ಸಿಬಿಐನ ಇಂಟರ್‌ಪೋಲ್‌ ಸಮನ್ವಯ ಅಧಿಕಾರಿಗೆ ಪತ್ರ ಬರೆದಿರುವ ಪೊಲೀಸ್‌ ಆಯುಕ್ತರು.

Also Read
[ಕನ್ನಡ ಕಡ್ಡಾಯ] ಶಿಕ್ಷಣದಲ್ಲಿ ರಾಜಕೀಯ ಏಕೆ ಬೆರೆಸುತ್ತೀರಿ? ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

ಪ್ರಕರಣದ ಹಿನ್ನೆಲೆ: ಬಿಟ್‌ ಕಾಯಿನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕಿ, ರಾಬಿನ್‌ ಖಂಡೇಲ್‌ವಾಲ್‌, ಸುರೇಶ್‌ ಹೆಗ್ಡೆ ಅಲಿಯಾಸ್‌ ಸುನೇಶ್‌, ಪ್ರಸೀದ್‌ ಶೆಟ್ಟಿ ಅಲಿಯಾಸ್‌ ಚಿಕ್ಕಣ್ಣ ಅಲಿಯಾಸ್‌ ಚಿಕ್ಕು ಮತ್ತು ಸುಜಯ್‌ ರಾಜ್‌ ವಿರುದ್ಧ ಕಾಟನ್‌ ಪೇಟೆ ಪೊಲೀಸ್‌ ಠಾಣೆಯಲ್ಲಿ ಪೊಲೀಸ್‌ ಇನ್‌ಸ್ಪೆಕ್ಟರ್‌ ಶ್ರೀಧರ್‌ ಕೆ ಪೂಜಾರ್‌ ದೂರು ಆಧರಿಸಿ ಎಫ್‌ಐಆರ್‌ ದಾಖಲಿಸಲಾಗಿದೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 379 (ಕಳವು), 384 (ಸುಲಿಗೆ), 420 (ವಂಚನೆ), 465 (ನಕಲಿ ದಾಖಲೆ ಸೃಷ್ಟಿ), 468 (ವಂಚಿಸಲು ನಕಲಿ ದಾಖಲೆ ಸೃಷ್ಟಿ), 471(ನಕಲಿ ದಾಖಲೆಯ ಬಳಕೆ), 34, 120ಬಿ (ಕ್ರಿಮಿನಲ್‌ ಪಿತೂರಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್‌ಗಳಾದ 66 (ಕಂಪ್ಯೂಟರ್‌ ಸಂಬಂಧಿತ ಅಪರಾಧಗಳು), 66ಸಿ (ಗುರುತಿನ ಕಳ್ಳತನ) ಅಡಿ ಪ್ರಕರಣ ದಾಖಲಿಸಲಾಗಿದೆ. ಒಂದನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ವಿಚಾರಣೆಯನ್ನು ಡಿಸೆಂಬರ್‌ 17ಕ್ಕೆ ಮುಂದೂಡಿದೆ.

ಅಕ್ಟೋಬರ್‌ 22ರಂದು ನಡೆದ ವಿಚಾರಣೆಯಲ್ಲಿ ಆರೋಪಿಗಳಾದ ಶ್ರೀಕಿ, ರಾಬಿನ್‌ ಖಂಡೇಲ್‌ವಾಲ್‌ ಮತ್ತು ಪ್ರಸೀದ್‌ ಶೆಟ್ಟಿ ಭಾಗಿಯಾಗಿದ್ದರು. ಆರೋಪಿಗಳಾದ ಸುರೇಶ್‌ ಹೆಗ್ಡೆ ಮತ್ತು ಸುಜಯ್‌ ರಾಜ್‌ ಅವರು ವಿಚಾರಣೆಯಲ್ಲಿ ಭಾಗಿಯಾಗಿರಲಿಲ್ಲ. ಆರೋಪಿಗಳ ಪರ ವಕೀಲರಿಗೆ ಆರೋಪ ಪಟ್ಟಿ ಒದಗಿಸುವಂತೆ ತನಿಖಾಧಿಕಾರಿಗೆ ನ್ಯಾಯಾಲಯ ಆದೇಶಿಸಿದೆ. ಪ್ರಕರಣದಲ್ಲಿ ಎಲ್ಲಾ ಐವರು ಆರೋಪಿಗಳಿಗೆ ಜಾಮೀನು ದೊರೆತಿದೆ.

Related Stories

No stories found.
Kannada Bar & Bench
kannada.barandbench.com