BITCOIN and Karntanata HC 
ಸುದ್ದಿಗಳು

ಬಿಟ್‌ ಕಾಯಿನ್‌ ಅಕ್ರಮ ಮಾಹಿತಿ ವರ್ಗಾವಣೆ, ನಾಶದ ಆರೋಪ: ಪಿಎಸ್‌ಐಗೆ ನಿರೀಕ್ಷಣಾ ಜಾಮೀನು ನಿರಾಕರಣೆ

“ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ವರದಿ ಮತ್ತು ಸೆಂಟರ್‌ ಫಾರ್‌ ಡೆವಲಪ್‌ಮೆಂಟ್‌ ಆಫ್‌ ಅಡ್ವಾನ್ಸ್‌ ಕಂಪ್ಯೂಟಿಂಗ್‌ (ಸಿ–ಡಾಕ್‌) ವರದಿಗಳ ಅನುಸಾರ ಅರ್ಜಿದಾರರ ವಿರುದ್ಧದ ಆರೋಪಗಳ ತನಿಖೆಯ ಅಗತ್ಯವಿದೆ” ಎಂದಿರುವ ನ್ಯಾಯಾಲಯ.

Bar & Bench

ಸುಮಾರು ₹ 850 ಕೋಟಿ ಮೌಲ್ಯದ ಬಿಟ್‌ ಕಾಯಿನ್‌ ಮಾಹಿತಿಯನ್ನು ತಮ್ಮ ವೈಯಕ್ತಿಕ ಕಂಪ್ಯೂಟರ್‌ಗೆ ವರ್ಗಾವಣೆ ಮಾಡಿ ಆನಂತರ ಎಫ್‌ಐಆರ್‌ ದಾಖಲಾದ್ದರಿಂದ ಅದನ್ನು ಅಳಿಸಿ ಹಾಕಿದ ಆರೋಪ ಎದುರಿಸುತ್ತಿರುವ ಪೊಲೀಸ್ ಇನ್‌ಸ್ಪೆಕ್ಟರ್‌ ಡಿ ಎಂ ಪ್ರಶಾಂತ್ ಬಾಬುಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರಾಕರಿಸಿದೆ.

ಬೆಂಗಳೂರಿನ ಡಿ ಎಂ ಪ್ರಶಾಂತ್ ಬಾಬು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ, ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ ಜಿ ಉಮಾ ಅವರ ಏಕಸದಸ್ಯ ಪೀಠ ಪ್ರಕಟಿಸಿದೆ.

“ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ವರದಿ ಮತ್ತು ಸೆಂಟರ್‌ ಫಾರ್‌ ಡೆವಲಪ್‌ಮೆಂಟ್‌ ಆಫ್‌ ಅಡ್ವಾನ್ಸ್‌ ಕಂಪ್ಯೂಟಿಂಗ್‌ (ಸಿ–ಡಾಕ್‌) ವರದಿಗಳ ಅನುಸಾರ ಅರ್ಜಿದಾರರ ವಿರುದ್ಧದ ಆರೋಪಗಳ ತನಿಖೆಯ ಅಗತ್ಯವಿದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಪ್ರಕರಣದಲ್ಲಿ ಮತ್ತೊಬ್ಬ ಪೊಲೀಸ್‌ ಅಧಿಕಾರಿ ಶ್ರೀಧರ್‌ ಪೂಜಾರ್‌ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದ್ದು, ಅದೇ ನಿಯಮವನ್ನು ತಮಗೂ ಅನ್ವಯಿಸಬೇಕು ಎಂಬ ಅರ್ಜಿದಾರರ ಕೋರಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದೆ.

“ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ಸತ್ರ ನ್ಯಾಯಾಲಯ ತಿರಸ್ಕರಿಸಿರುವ ಕಾರಣ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು” ಎಂದು ಕೋರಿ ಪ್ರಶಾಂತ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಬಿಟ್‌ ಕಾಯಿನ್‌ಗಳ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮತ್ತಿತರರ ವಿರುದ್ಧ ಕೆ ಜಿ ನಗರ, ಸೈಬರ್‌ ಅಪರಾಧ ಠಾಣೆ, ಕಾಟನ್‌ ಪೇಟೆ ಮತ್ತು ಅಶೋಕ್‌ ನಗರ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಈ ನಾಲ್ಕು ಅಪರಾಧ ಪ್ರಕರಣಗಳು ಬೇರೆಬೇರೆ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದು, ಆನಂತರ ರಾಜ್ಯ ಸರ್ಕಾರ ಎಲ್ಲಾ ಪ್ರಕರಣಗಳನ್ನು ಎಸ್‌ಐಟಿ ವರ್ಗಾಯಿಸಿತ್ತು.

ಈ ಪ್ರಕರಣಗಳಲ್ಲಿ ಜಪ್ತಿ ಮಾಡಲಾದ ಲ್ಯಾಪ್‌ಟಾಪ್‌ ಮತ್ತಿತರ ಸಾಧನಗಳಿಂದ ಹಲವು ಮಿರರ್‌ ಇಮೇಜ್‌ ಸೃಷ್ಟಿಸಲಾಗಿದೆ ಎಂದು ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ತಾಂತ್ರಿಕ ಬೆಂಬಲ ಕೇಂದ್ರದಲ್ಲಿ ಪಿಎಸ್‌ಐ ಆಗಿದ್ದ ಪ್ರಶಾಂತ್‌ ಅವರ ಮನೆಯಲ್ಲೂ ಶೋಧ ನಡೆಸಲಾಗಿತ್ತು. ಮುಂದೆ ಬಿಟ್‌ ಕಾಯಿನ್‌ಗೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಪ್ರಶಾಂತ್‌ ಅವರನ್ನು ಏಳು ದಿನ ಪೊಲೀಸ್‌ ಕಸ್ಟಡಿಗೆ ಪಡೆದು ವಿಚಾರಣೆಯನ್ನೂ ನಡೆಸಲಾಗಿತ್ತು. ಈಚೆಗೆ 2024ರ ಜೂನ್‌ 28ರಂದು ತನಿಖಾಧಿಕಾರಿಯು ವಿಚಾರಣೆಗೆ ಹಾಜರಾಗುವಂತೆ ಸಿಆರ್‌ಪಿಸಿ ಸೆಕ್ಷನ್‌ 41ಎ ಅಡಿ ನೋಟಿಸ್‌ ನೀಡಿದ್ದರು. ತನಿಖಾಧಿಕಾರಿ ಬಂಧಿಸುವ ಭೀತಿಯಿಂದ ಪ್ರಶಾಂತ್‌ ನಿರೀಕ್ಷಣಾ ಜಾಮೀನು ಕೋರಿದ್ದರು.

ಕೆ ಜಿ ನಗರ ಠಾಣೆಯಲ್ಲಿ ಡಾರ್ಕ್‌ ವೆಬ್‌ನಲಿ ಬಿಟ್‌ಕಾಯಿನ್‌ ಮೂಲಕ ಮಾದಕ ದ್ರವ್ಯ ಖರೀದಿಸುತ್ತಿದ್ದ ಆರೋಪದಲ್ಲಿ ಶ್ರೀಕಿ ಮತ್ತು ಇತರರ ವಿರುದ್ಧ 2020ರಲ್ಲಿ ಪ್ರಕರಣ ದಾಖಲಾಗಿದೆ. ಈ ಸಂದರ್ಭದಲ್ಲಿ ಶ್ರೀಕಿಯಿಂದ ಮ್ಯಾಕ್‌ಬುಕ್‌ ವಶಕ್ಕೆ ಪಡೆಯಲಾಗಿತ್ತು. ಆನಂತರ ಶ್ರೀಕಿ ಮನೆಯಲ್ಲಿ ಶೋಧ ನಡೆಸಿದ್ದಾಗ ಇನ್ನೂ ಕೆಲವು ಮ್ಯಾಕ್‌ಬುಕ್‌ ದೊರೆತಿದ್ದವು. ಇವುಗಳ ಮಿರರ್‌ ಇಮೇಜಿಂಗ್‌ ನಡೆಸಲು ನ್ಯಾಯಾಲಯದ ಅನುಮತಿ ಪಡೆಯಲಾಗಿತ್ತು. ಆನಂತರ ಅವುಗಳನ್ನು ಮುಚ್ಚಿದ ಲಕೋಟೆಯಲ್ಲಿ ಅಂದು ಸಿಸಿಬಿ ತಾಂತ್ರಿಕ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದ ಪ್ರಶಾಂತ್‌ ಬಾಬುಗೆ ನೀಡಲಾಗಿತ್ತು.

2023ರ ಜುಲೈನಲ್ಲಿ ಮುಚ್ಚಿದ ಲಕೋಟೆಯಲ್ಲಿದ್ದ ಆಪಲ್‌ ಮ್ಯಾಕ್‌ಬುಕ್‌, ಪೆನ್‌ಡ್ರೈವ್‌, ಹಾರ್ಡ್‌ಡ್ರೈವ್‌ಗೆ ಸಂಬಂಧಿಸಿದ ಎಫ್‌ಎಸ್‌ಎಲ್‌ ವರದಿ ಬಂದಿದ್ದು, ಅವುಗಳನ್ನು 17.11.2020 ರಿಂದ 21.11.2020ರ ಅವಧಿಯಲ್ಲಿ ತೆರೆಯಲಾಗಿದೆ ಎಂಬ ಮಾಹಿತಿ ದೊರೆತಿದೆ. ಈ ಅವಧಿಯಲ್ಲಿ ಆ ಸಾಧನಗಳು ಮುಚ್ಚಿದ ಲಕೋಟೆಯಲ್ಲಿರಬೇಕಿತ್ತು. ಈ ಸಂದರ್ಭದಲ್ಲಿ ಹಲವು ಕಡತಗಳನ್ನು ಸೃಷ್ಟಿಸಲಾಗಿದ್ದು, ಇಲ್ಲಿ ಅಕ್ರಮವಾಗಿ ಸಾಧನಗಳನ್ನು ಬಳಕೆ ಮಾಡಲಾಗಿದೆ. 2024ರ ಮೇ 21 ಸಿ-ಡ್ಯಾಕ್‌ ವರದಿಯ ಪ್ರಕಾರ ಆಪಲ್‌ ಮ್ಯಾಕ್‌ಬುಕ್‌ನಲ್ಲಿದ್ದ ಮಾಹಿತಿಯನ್ನು ಪ್ರಶಾಂತ್‌ಬಾಬು ಅವರ ವೈಯಕ್ತಿಕ ಕಂಪ್ಯೂಟರ್‌ಗೆ ವರ್ಗಾಯಿಸಲಾಗಿದೆ. ಆನಂತರ ಪ್ರಶಾಂತ್‌ ಬಾಬು ಅವರು ಇತರೆ ಆರೋಪಿಗಳ ಜೊತೆಗೂಡಿ ಕ್ರಿಪ್ಟೊ ಹಾರ್ಡ್‌ವೇರ್‌ ವಾಲೆಟ್‌, ಎಲೆಕ್ಟ್ರಮ್‌ ವಾಲೆಟ್‌ ಅಪ್ಲಿಕೇಶನ್‌ ಮತ್ತು ಡೇಟಾ ವೈಪಿಂಗ್‌ ಅಪ್ಲಿಕೇಶನ್‌ಗಳನ್ನು ಅಳವಡಿಸಿಕೊಂಡಿದ್ದಾರೆ. ಆನಂತರ ಪ್ರಕರಣ ದಾಖಲಾದ ಬೆನ್ನಿಗೇ ಅವುಗಳನ್ನು ತಮ್ಮ ಕಂಪ್ಯೂಟರ್‌ನಿಂದ ನಾಶಪಡಿಸಿದ್ದಾರೆ ಎಂಬುದು ಪ್ರಾಸಿಕ್ಯೂಷನ್‌ ವಾದವಾಗಿದೆ.

ಅರ್ಜಿದಾರರ ಪರವಾಗಿ ವಕೀಲರಾದ ತೇಜಸ್‌ ಎನ್‌, ಶ್ರೇಯಸ್‌ ಬಿ ಎಸ್‌ ಹಾಗೂ ಎಸ್‌ಐಟಿ ಪರವಾಗಿ ಪಿ ಪ್ರಸನ್ನಕುಮಾರ್‌ ವಾದಿಸಿದ್ದರು.

Prashanth Babu D M Vs State of Karnataka.pdf
Preview