ಬಹುಕೋಟಿ ಮೌಲದ್ಯ ಬಿಟ್ ಕಾಯಿನ್ ಕಳವು ಪ್ರಕರಣದ ಆರೋಪಿಗಳಾಗಿ ನ್ಯಾಯಾಂಗ ಬಂಧನದಲ್ಲಿರುವ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ರಮೇಶ್ ಹಾಗೂ ರಾಬಿನ್ ಖಂಡೇಲ್ ವಾಲಾಗೆ ತುಮಕೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಶ್ರೀಕಿ ಮತ್ತು ರಾಬಿನ್ ಖಂಡೇಲ್ ವಾಲಾ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ತುಮಕೂರಿನ ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಎನ್ ಸುಬ್ರಹ್ಮಣ್ಯ ಅವರು ಸೋಮವಾರ ಪ್ರಕಟಿಸಿದರು.
ಪ್ರಕರಣದ ಒಂದನೇ ಆರೋಪಿ ಶ್ರೀಕಿ ₹50 ಸಾವಿರ ಮೊತ್ತದ ಬಾಂಡ್ ಹಾಗೂ ಒಬ್ಬರ ಭದ್ರತೆ ನೀಡಬೇಕು ಮತ್ತು ಎರಡನೇ ಆರೋಪಿ ರಾಬಿನ್ ಖಂಡೇಲ್‌ವಾಲಾ ₹25 ಸಾವಿರ ಮೊತ್ತದ ನಗದು ಭದ್ರತೆ ನೀಡಬೇಕು ಎಂಬುದೂ ಸೇರಿದಂತೆ ಇತರೆ ಷರತ್ತುಗಳನ್ನು ವಿಧಿಸಲಾಗಿದೆ.
ಸರ್ಕಾರ ತಮ್ಮ ವಿರುದ್ಧ ಕೋಕಾ (ಕರ್ನಾಟಕ ಸಂಘಟಿತ ಅಪರಾಧ ತಡೆ) ಕಾಯಿದೆ–2000 ಅನ್ನು ಅನ್ವಯಿಸಿತ್ತು. ಇತ್ತೀಚೆಗಷ್ಟೇ ಹೈಕೋರ್ಟ್, ಕೋಕಾ ಕಾಯಿದೆ ಹೇರಿ ಹೊರಡಿಸಲಾಗಿದ್ದ ಆದೇಶವನ್ನು ರದ್ದುಪಡಿಸಿದೆ. ಅಂತೆಯೇ, ಪ್ರಕರಣದ ತನಿಖೆ ನಡೆಸಿರುವ, ವಿಶೇಷ ತನಿಖಾ ತಂಡ (ಎಸ್ಐಟಿ) 60 ದಿನಗಳ ಒಳಗಾಗಿ ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಬೇಕಿತ್ತು. ಆದರೆ, 60 ದಿನ ಕಳೆದರೂ ಯಾವುದೇ (ಪ್ರಾಥಮಿಕ ಅಥವಾ ಅಂತಿಮ ವರದಿ) ಆರೋಪ ಪಟ್ಟಿ ಸಲ್ಲಿಸಿಲ್ಲ. ಹೀಗಾಗಿ, ಸುಪ್ರೀಂ ಕೋರ್ಟ್ ತೀರ್ಪುಗಳ ಪ್ರಕಾರ ನಾವು ಕಾನೂನು ಬದ್ಧ ಜಾಮೀನು ಪಡೆಯಲು ಅರ್ಹರಾಗಿದ್ದು ಜಾಮೀನು ಮಂಜೂರು ಮಾಡಬೇಕು ಎಂದು ಅರ್ಜಿದಾರರು ಕೋರಿದ್ದರು.
ಬಹುಕೋಟಿ ಮೌಲ್ಯದ ಬಿಟ್ ಕಾಯಿನ್ ಕಳವು ಮಾಡಿ ಅವುಗಳನ್ನು ಪಶ್ಚಿಮ ಬಂಗಾಳದ ತನ್ನ ಸಹಚರ ರಾಬಿನ್ ಖಂಡೇಲ್ ವಾಲಾಗೆ ವರ್ಗಾವಣೆ ಮಾಡಿದ ಆರೋಪ ಶ್ರೀಕಿ ಮೇಲಿದೆ. ಶ್ರೀಕಿ ಮತ್ತು ರಾಬಿನ್ ಇಬ್ಬರೂ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾ ಕೈದಿಗಳಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಶ್ರೀಕಿ ಪರ ಅರುಣ್ ಶ್ಯಾಮ್ ಅಸೋಸಿಯೇಟ್ಸ್‌ನ ವಕೀಲರಾದ ನಿಶಾಂತ್ ಕುಶಾಲಪ್ಪ, ಎಚ್ ಎಸ್ ರಾಜು, ತುಷಾರ್ ಹಾಗೂ ರಾಬಿನ್ ಖಂಡೇಲ್ ವಾಲಾ ಪರ ಎಸ್ ಸುನಿಲ್ ಕುಮಾರ್ ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ: ಬಿಟ್ ಕಾಯಿನ್ ಖರೀದಿ, ಮಾರಾಟ ಮತ್ತು ಸಂಗ್ರಹ ಕುರಿತಾದ ಕ್ರಿಪ್ಟೊ ಕರೆನ್ಸಿಗೆ ಸಂಬಂಧಿಸಿದ ಭಾರತದ ಪ್ರಮುಖ ಕಂಪೆನಿಗಳಲ್ಲಿ ಒಂದಾದ ಯುನೊಕಾಯಿನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಅನಧಿಕೃತವಾಗಿ ಅನಾಮಿಕರು ದತ್ತಾಂಶ, ಕಂಪ್ಯೂಟರ್ ಹಿಡಿತಕ್ಕೆ ಪಡೆದು 1.14 ಕೋಟಿ ರೂಪಾಯಿ ಮೌಲ್ಯದ 60.06 ಬಿಟಿಸಿಗಳನ್ನು ಕಳವು ಮಾಡಿದ್ದರು.
ಇದನ್ನು ಆಧರಿಸಿ ತುಮಕೂರು ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ 2017ರಲ್ಲಿ ಐಪಿಸಿ ಸೆಕ್ಷನ್ 420, ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ಗಳಾದ 66, 67 ಮತ್ತು 68ರ ಅಡಿ ಪ್ರಕರಣ ದಾಖಲಿಸಲಾಗಿತ್ತು. ಇದರಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಸಿ ರಿಪೋರ್ಟ್ ಸಲ್ಲಿಸಿ, ಅಪರಾಧ ನಡೆದಿರುವುದು ನಿಜ. ಆದರೆ, ಯಾರು ಅಪರಾಧಿಗಳು ಎಂಬುದು ಪತ್ತೆಯಾಗಿಲ್ಲ ಎಂದು ತಿಳಿಸಿದ್ದರು. ನಂತರ ಇದನ್ನು ಸೈಬರ್ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿತ್ತು. 2023ರಲ್ಲಿ ರಾಜ್ಯ ಸರ್ಕಾರ ಜುಲೈನಲ್ಲಿ ವಿಶೇಷ ತನಿಖಾ ತಂಡ ರಚಿಸಿತ್ತು. ತದನಂತರ ಶ್ರೀಕಿಯನ್ನು ಬಂಧಿಸಲಾಗಿತ್ತು.