ಸುದ್ದಿಗಳು

ಬಿಟ್‌ ಕಾಯಿನ್‌ ಹಗರಣ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ಕಾಂಗ್ರೆಸ್‌ ಆಗ್ರಹಿಸುತ್ತಿರುವುದೇಕೆ?

ಹ್ಯಾಕರ್‌ ಶ್ರೀಕೃಷ್ಣನಿಂದ ವಶಪಡಿಸಿಕೊಂಡ ಬಿಟ್‌ ಕಾಯಿನ್‌ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಹಗರಣದಲ್ಲಿ ಪೊಲೀಸರು, ಸರ್ಕಾರದಲ್ಲಿ ಉನ್ನತ ಸ್ಥಾನದಲ್ಲಿರುವವರು ಸೇರಿದಂತೆ ಪ್ರಭಾವಿಗಳು ಭಾಗಿಯಾಗಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್.

Bar & Bench

ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ ಬಿಟ್‌ ಕಾಯಿನ್‌ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್‌ ಆಗ್ರಹಿಸುತ್ತಿದೆ. ಪ್ರಕರಣದ ಕುರಿತಾಗಿ ಕೇಂದ್ರೀಯ ಅಪರಾಧ ವಿಭಾಗದ ತನಿಖೆಯ ಬಗ್ಗೆ ಅದು ಸಂಪೂರ್ಣ ಅತೃಪ್ತಿ ವ್ಯಕ್ತಪಡಿಸಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಶನಿವಾರ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಅವರು ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿಯಿಂದ ವಶಪಡಿಸಿಕೊಂಡ ಬಿಟ್‌ ಕಾಯಿನ್‌ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಹಗರಣದಲ್ಲಿ ಪೊಲೀಸರು, ಸರ್ಕಾರದಲ್ಲಿ ಉನ್ನತ ಸ್ಥಾನದಲ್ಲಿರುವವರು ಸೇರಿದಂತೆ ಪ್ರಭಾವಿಗಳು ಭಾಗಿಯಾಗಿದ್ದಾರೆ. ಇಡೀ ಹಗರಣವನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ನೇತೃತ್ವದ ತನಿಖಾ ಸಂಸ್ಥೆಗೆ ವಹಿಸದಿದ್ದರೆ ಈ ಸಂಬಂಧ ಕಾಂಗ್ರೆಸ್ ಪಕ್ಷವು ಸರ್ವೋಚ್ಚ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಆರಂಭಿಸಲಿದೆ ಎಂದಿದ್ದಾರೆ.

ಅಷ್ಟಕ್ಕೂ, ಶಾಸಕ ಪ್ರಿಯಾಂಕ್‌ ಖರ್ಗೆ ಎತ್ತಿರುವ ಪ್ರಶ್ನೆಗಳೇನು? ಇಲ್ಲಿದೆ ವಿವರ:

  • ಆರೋಪಿ ಕಸ್ಟಡಿಯಲ್ಲಿದ್ದಾಗಲೂ ಆತನಿಗೆ ಡ್ರಗ್ಸ್‌ ಒದಗಿಸಲಾಗಿದೆ. ಆತ ಕಸ್ಟಡಿಯಲ್ಲಿ ಡ್ರಗ್ಸ್‌ ಹೇಗೆ ಪಡೆದುಕೊಂಡ? ಆರೋಪಿಯನ್ನು ಮಂಪರಿನಲ್ಲಿ ಇಟ್ಟಿದ್ದೇಕೆ? (ಆರೋಪಿಗೆ ಡ್ರಗ್ಸ್‌ ನೀಡುವ ಮೂಲಕ ನ್ಯಾಯಾಲಯಕ್ಕೆ ವಂಚಿಸಿರುವ ಪ್ರಯತ್ನಗಳು ಎದ್ದು ಕಾಣುತ್ತಿವೆ. ಆರೋಪಿಯ ರಕ್ತ ಮತ್ತು ಮೂತ್ರದ ಮಾದರಿ ಪರೀಕ್ಷೆಯ ಕುರಿತು ಮ್ಯಾಜಿಸ್ಟ್ರೇಟ್‌ ಆದೇಶ ಮಾಡಿದ್ದರೂ ಅದರ ವರದಿಯನ್ನು ಸಲ್ಲಿಸಲಾಗಿಲ್ಲ).

  • ಅಪರಾಧ ಸಂಖ್ಯೆ 45/2020ರ ಮೂರನೇ ಪಂಚನಾಮೆಯ ಸ್ಕ್ರೀನ್‌ಶಾಟ್‌ನಲ್ಲಿ ತೋರಿಸಲಾಗಿರುವಂತೆ ನೂರಾರು ಕೋಟಿ ರೂಪಾಯಿ ಮೌಲ್ಯದ 31.8 + 186 ಬಿಟ್‌ ಕಾಯಿನ್‌ಗಳು ಈಗ ಎಲ್ಲಿವೆ? ಯಾರ ಬಳಿ ಇವೆ?

  • ತನ್ನ ಬಳಿ 5 ಸಾವಿರ ಕ್ರಿಪ್ಟೊ ಕರೆನ್ಸಿಗಳಿವೆ ಎಂದು ಆರೋಪಿಯು ಸ್ವಯಂಪ್ರೇರಿತವಾಗಿ ಹೇಳಿಕೆ ನೀಡಿದರೂ ಉದ್ದೇಶಪೂರ್ವಕವಾಗಿ ಮೂರು ತಿಂಗಳ ಕಾಲ ಜಾರಿ ನಿರ್ದೇಶನಾಲಯ, ಕೇಂದ್ರೀಯ ತನಿಖಾ ದಳ ಮತ್ತು ಇಂಟರ್‌ಪೋಲ್‌ಗೆ ಮಾಹಿತಿ ನೀಡಿಲ್ಲವೇಕೆ? (ರಾಜ್ಯದ ವ್ಯಾಪ್ತಿ ಮೀರಿದ ಆರ್ಥಿಕ ಅಪರಾಧಗಳನ್ನು ಉನ್ನತ ತನಿಖಾ ಸಂಸ್ಥೆಗಳ ಗಮನಕ್ಕೆ ತರಬೇಕು ಎಂದು ಸರ್ಕಾರದ ಶಾಸನಬದ್ಧ ಆದೇಶದಲ್ಲಿ ಹೇಳಲಾಗಿದೆ)

  • ಆರೋಪ ಪಟ್ಟಿಯು ಅಪರಿಪೂರ್ಣ ತನಿಖೆಯ ಅಂಶಗಳಿಂದ ತುಂಬಿದೆ. ಆರೋಪ ಪಟ್ಟಿಯಲ್ಲಿ ಸ್ಕೈಪ್‌ ಚಾಟ್‌ಗಳು, ಫೇಸ್‌ಬುಕ್‌ ಚಾಟ್‌ಗಳು, ಲಾಗ್‌ಗಳನ್ನು ಉಲ್ಲೇಖಿಸಲಾಗಿಲ್ಲ. ಆರೋಪಿಯನ್ನು 100 ದಿನಗಳಿಗೂ ಹೆಚ್ಚು ಕಾಲ ಪೊಲೀಸ್‌ ವಶದಲ್ಲಿಟ್ಟುಕೊಂಡಿದ್ದರೂ ಹ್ಯಾಕ್‌ ಮಾಡಲಾದ ಯಾವುದೇ ಬಿಟ್‌ ಕಾಯಿನ್‌ಗಳನ್ನು ವಶಪಡಿಸಿಕೊಳ್ಳಲಾಗಿಲ್ಲ. 2016ರಲ್ಲಿ ನೆಟ್‌4ಇಂಡಿಯಾ ಹ್ಯಾಕ್‌ ವಿಚಾರವನ್ನು ದೆಹಲಿಯ ಆರ್ಥಿಕ ಅಪರಾಧ ದಳಕ್ಕೆ ತಿಳಿಸಲಾಗಿಲ್ಲ.

  • 80 ಸಾವಿರ ಯುರೊಗಳನ್ನು ವರ್ಗಾವಣೆ ಮಾಡಿರುವ ಆರ್ಥಿಕ ಅಪರಾಧದ ತನಿಖೆ ಮಾಡಲಾಗಿಲ್ಲ. ಇಲ್ಲವೇ ಅದನ್ನು ಜಾರಿ ನಿರ್ದೇಶನಾಲಯಕ್ಕೆ ತಿಳಿಸಲಾಗಿಲ್ಲ. ಮಾದಕ ವಸ್ತು ಕಳ್ಳಸಾಗಣೆಗೆ ಸಂಬಂಧಿಸಿದ ಫೇಸ್‌ಬುಕ್‌ ಚಾಟ್‌ಗಳನ್ನು ತನಿಖೆ ಮಾಡಲಾಗಿಲ್ಲ. ಇಲ್ಲವೇ ಅದನ್ನು ರಾಷ್ಟ್ರೀಯ ಮಾದಕವಸ್ತು ಸಂಸ್ಥೆಯ (ಎನ್‌ಸಿಬಿ) ಗಮನಕ್ಕೆ ತರಲಾಗಿಲ್ಲ.

  • 5 ಸಾವಿರ ಬಿಟ್‌ ಕಾಯಿನ್‌ ಬಗ್ಗೆ ಉಲ್ಲೇಖವಿಲ್ಲ (ಇಂದಿನ ಮೌಲ್ಯದಲ್ಲಿ ಅದು 2,500 ಕೋಟಿ ರೂಪಾಯಿ ಬೆಲೆ ಹೊಂದಿದೆ). ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್‌ ವೆಬ್‌ಸೈಟ್‌ ಹ್ಯಾಕ್‌ ಮಾಡಿ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿರುವುದರ ಕುರಿತು ನಿಗಾ ಇಡಲಾಗಿಲ್ಲ (ಆರೋಪಿಯು ಈ ಕುರಿತು ಸ್ವಯಂಪ್ರೇರಿತವಾಗಿ ಹೇಳಿಕೆ ನೀಡಿದ್ದಾನೆ).