ಸುದ್ದಿಗಳು

ಪಶ್ಚಿಮ ಬಂಗಾಳ ಚುನಾವಣೋತ್ತರ ಹಿಂಸಾಚಾರ: ಸಿಬಿಐ ತನಿಖೆ ಕೋರಿ ಸುಪ್ರೀಂ ಮೊರೆ ಹೋದ ಬಿಜೆಪಿ ವಕ್ತಾರ

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅನ್ಯ ಪಕ್ಷಗಳಿಗೆ ಮತ ಚಲಾಯಿಸಿದವರ ವಿರುದ್ಧ ತೃಣಮೂಲ ಕಾಂಗ್ರೆಸ್ ಹಿಂಸಾಚಾರ ನಡೆಸಿದೆ ಎಂದು ಭಾಟಿಯಾ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.

Bar & Bench

ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ, ಕೊಲೆ ಹಾಗೂ ಅತ್ಯಾಚಾರ ಘಟನೆಗಳು ನಡೆಯುತ್ತಿದ್ದು ಈ ಬಗ್ಗೆ ಸಿಬಿಐ ತನಿಖೆ ಕೋರಿ ಬಿಜೆಪಿ ವಕ್ತಾರ, ಹಿರಿಯ ವಕೀಲ ಗೌರವ್‌ ಭಾಟಿಯಾ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅನ್ಯ ಪಕ್ಷಗಳಿಗೆ ಮತ ಚಲಾಯಿಸಿದವರ ವಿರುದ್ಧ ತೃಣಮೂಲ ಕಾಂಗ್ರೆಸ್‌ ಹಿಂಸಾಚಾರ ನಡೆಸಿದೆ ಎಂದು ಭಾಟಿಯಾ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಕೊಲ್ಕತ್ತಾದಲ್ಲಿ ಅವಿಜಿತ್‌ ಸರ್ಕಾರ್‌ ಎಂಬುವವರ ಕೊಲೆ ನಡೆದಿರುವುದನ್ನು ಉಲ್ಲೇಖಿಸಿರುವ ಬಿಜೆಪಿ ನಾಯಕ ಭಾಟಿಯಾ, “ಟಿಎಂಸಿ ರಕ್ಷಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಪ್ರಜಾಪ್ರಭುತ್ವದ ರುದ್ರನರ್ತನ ಹೇಗಿದೆ ಎಂಬುದಕ್ಕೆ ಇದು ಸಾಕ್ಷಿ” ಎಂದಿದ್ದಾರೆ.

“ಸರ್ಕಾರ್ ಸಾವಿಗೆ ಮುನ್ನ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊವೊಂದರಲ್ಲಿ ಟಿಎಂಸಿ ಕಾರ್ಯಕರ್ತರು ಆತನ ಮನೆ ಮತ್ತು ಎನ್‌ಜಿಒವನ್ನು ಮಾತ್ರ ಧ್ವಂಸಗೊಳಿಸದೆ ಮೂಕ ಪ್ರಾಣಿಗಳಾದ ನಾಯಿಮರಿಗಳನ್ನೂ ಹೇಗೆ ನಿರ್ದಯವಾಗಿ ಕೊಂದಿದ್ದಾರೆ ಎಂಬುದನ್ನು ನೋಡಬಹುದು…” ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಸರಣಿ ಹಿಂಸಾರದ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳು, ಬಂಧನಗಳು ಮತ್ತು ಅಪರಾಧಗಳ ವಿರುದ್ಧ ಕೈಗೊಂಡ ಕ್ರಮಗಳಿಗೆ ಸಂಬಂಧಿಸಿದಂತೆ ಸ್ಥಿತಿಗತಿ ವರದಿ ಸಲ್ಲಿಸುವಂತೆಯೂ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಭಾಟಿಯಾ ಕೋರಿದ್ದಾರೆ.

ಪೊಲೀಸರು ಮತ್ತು ಇತರೆ ಸಂಸ್ಥೆಗಳ ಮೇಲೆ ಟಿಎಂಸಿ ಅನಗತ್ಯ ಪ್ರಭಾವ ಬೀರುತ್ತಿದೆ ಎಂಬುದು ಸ್ಪಷ್ಟ. ಕೃತ್ಯ ಎಸಗಿದ ಪಕ್ಷದ ಕಾರ್ಯಕರ್ತರ ವಿರುದ್ಧ ಯಾವುದೇ ಎಫ್‌ಐಆರ್‌ ದಾಖಲಾಗಿಲ್ಲ. ಮಾಧ್ಯಮಗಳ ವರದಿಗಳ ಪ್ರಕಾರ ಆಡಳಿತ ಪಕ್ಷ ತನ್ನ ಕಾರ್ಮಿಕರ ಮೂಲಕ ಹಿಂಸಾಚಾರವನ್ನು ನೇರವಾಗಿ ಪ್ರಾಯೋಜಿಸುತ್ತಿದ್ದು, ಅನ್ಯ ಪಕ್ಷಗಳ ಪರವಾಗಿ ಮತ ಚಲಾಯಿಸಿದ ತನ್ನ ಪ್ರಜೆಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಯತ್ನಿಸುತ್ತಿದೆ. ತನ್ನ ರಾಜಕೀಯ ವಿರೋಧಿಗಳನ್ನು ಅದರಲ್ಲಿಯೂ ಬಿಜೆಪಿ ಮತ್ತು ಅದರ ಸದಸ್ಯರನ್ನು ಫ್ಯಾಸಿಸ್ಟರು ಮತ್ತು ಧರ್ಮಾಂಧರು ಎಂದು ಬಣ್ಣಿಸಿ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ ಎಂದು ದೂರಲಾಗಿದೆ.