BJP 
ಸುದ್ದಿಗಳು

ಕೇಂದ್ರ ಸಚಿವ ಜೋಶಿ ಸಹೋದರನ ವಿರುದ್ಧದ ವಂಚನೆ ಆರೋಪ: ದೂರುದಾರೆಗೆ ₹50 ಲಕ್ಷ ಪಾವತಿ, ₹1.5 ಕೋಟಿ ಪಾವತಿಯ ಭರವಸೆ

ಬಾಕಿ ₹1.5 ಕೋಟಿಯನ್ನು ಪಾವತಿಸುವ ಸಂಬಂಧ ಅರ್ಜಿಯನ್ನು ಫೆಬ್ರವರಿ 25ರಂದು ವಿಚಾರಣೆಗೆ ಪಟ್ಟಿ ಮಾಡಬೇಕು. ಮಧ್ಯಂತರ ಆದೇಶವನ್ನು ಮುಂದಿನ ವಿಚಾರಣೆವರೆಗೆ ವಿಸ್ತರಿಸಲಾಗಿದೆ ಎಂದಿರುವ ನ್ಯಾಯಾಲಯ.

Bar & Bench

ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಭಾರತೀಯ ಜನತಾ ಪಕ್ಷದಿಂದ ಟಿಕೆಟ್‌ ಕೊಡಿಸುವುದಾಗಿ ₹2 ಕೋಟಿ ಸುಲಿಗೆ ಮಾಡಿದ ಪ್ರಕರಣದಲ್ಲಿ ದೂರುದಾರೆಯಾಗಿರುವ ಸುನೀತಾ ಚೌಹಾಣ್‌ ಅವರಿಗೆ ಆರೋಪಿಗಳಲ್ಲಿ ಒಬ್ಬರಾಗಿರುವ ಎಸ್‌ ಜಿ ವಿಜಯ ಲಕ್ಷ್ಮಿ ಜೋಶಿ ಅವರು ಈಚೆಗೆ ₹50 ಲಕ್ಷ ಪಾವತಿಸಿದ್ದಾರೆ. ಅಲ್ಲದೆ, ಬಾಕಿ ₹1.5 ಕೋಟಿಯನ್ನು ಒಂದು ತಿಂಗಳಲ್ಲಿ ಪಾವತಿಸುವ ಭರವಸೆಯನ್ನು ಕರ್ನಾಟಕ ಹೈಕೋರ್ಟ್‌ಗ ನೀಡಿದ್ದಾರೆ.

ಪ್ರಕರಣ ರದ್ದತಿ ಕೋರಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಸಹೋದರ ಗೋಪಾಲ ಜೋಶಿ, ಅವರ ಪುತ್ರ ಅಜಯ್‌ ಜೋಶಿ ಮತ್ತು ಎಸ್‌ ಜಿ ವಿಜಯ ಲಕ್ಷ್ಮಿ ಜೋಶಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠವು ನಡೆಸಿತು.

ನ್ಯಾಯಾಲಯಕ್ಕೆ 28.10.2024ರಂದು ಮುಚ್ಚಳಿಕೆ ನೀಡಿರುವುದರ ಭಾಗವಾಗಿ ಸುನೀತಾ ಚೌಹಾಣ್‌ ಅವರಿಗೆ ₹50 ಲಕ್ಷ ಪಾವತಿಸಿದ್ದು, ಬಾಕಿ ₹1.5 ಕೋಟಿಯನ್ನು ಇಂದಿನಿಂದ 30 ದಿನಗಳಲ್ಲಿ ಪಾವತಿಸಲಾಗುವುದು. ಈ ನೆಲೆಯಲ್ಲಿ ತಮ್ಮ ವಿರುದ್ಧದ ಕ್ರಿಮಿನಲ್‌ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು. ಇದನ್ನು ಆದೇಶದಲ್ಲಿ ದಾಖಲಿಸಿರುವ ಪೀಠವು ಬಾಕಿ ₹1.5 ಕೋಟಿಯನ್ನು ಪಾವತಿಸುವ ಸಂಬಂಧ ಅರ್ಜಿಯನ್ನು ಫೆಬ್ರವರಿ 25ರಂದು ವಿಚಾರಣೆಗೆ ಪಟ್ಟಿ ಮಾಡಬೇಕು. ಮಧ್ಯಂತರ ಆದೇಶವನ್ನು ಮುಂದಿನ ವಿಚಾರಣೆವರೆಗೆ ವಿಸ್ತರಿಸಲಾಗಿದೆ ಎಂದು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್‌ ಕೊಡಿಸುವ ಆಮಿಷವೊಡ್ಡಿ ವಿಜಯಪುರ ಜಿಲ್ಲೆಯ ನಾಗಠಾಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದೇವಾನಂದ್‌ ಫೂಲ್‌ ಸಿಂಗ್‌ ಚವ್ಹಾಣ್‌ ಅವರಿಂದ ₹2 ಕೋಟಿ ಸುಲಿಗೆ ನಡೆಸಿದ್ದ ಆರೋಪದ ಸಂಬಂಧ ಸುನೀತಾ ಚವ್ಹಾಣ್‌ ನೀಡಿದ ದೂರಿನ ಅನ್ವಯ ಬೆಂಗಳೂರಿನ ಬಸವೇಶ್ವರನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ದೇವಾನಂದ್‌ ಚವ್ಹಾಣ್‌ ಅವರು ಗೋಪಾಲ ಜೋಶಿ ಅವರನ್ನು ಹುಬ್ಬಳ್ಳಿಯ ನಿವಾಸದಲ್ಲಿ ಭೇಟಿ ಮಾಡಿದ್ದರು. ಸೋಮಶೇಖರ್‌ ನಾಯಕ್‌ ಅವರು ಗೋಪಾಲ ಜೋಶಿ ಅವರನ್ನು ಭೇಟಿ ಮಾಡಿಸಿದ್ದರು. ಕೇಂದ್ರದಲ್ಲಿ ನನ್ನ ಸಹೋದರ ಪ್ರಲ್ಹಾದ್‌ ಜೋಶಿ ಅವರ ವರ್ಚಸ್ಸು ಚೆನ್ನಾಗಿದ್ದು, ವಿಜಯಪುರ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಗೋಪಾಲ ಜೋಶಿ ಆಮಿಷವೊಡ್ಡಿದ್ದರು. ಇದಕ್ಕಾಗಿ ₹5 ಕೋಟಿ ಸಿದ್ಧತೆ ಮಾಡಿಕೊಳ್ಳುವಂತೆಯೂ ಸೂಚಿಸಿದ್ದರು. ಗೋಪಾಲ ಜೋಶಿ ಸೂಚಿಸಿದ್ದ ವಿಜಯ ಲಕ್ಷ್ಮಿ ಜೋಶಿ ಅವರ ಖಾತೆಗೆ ₹1.25 ಕೋಟಿ ಹಾಗೂ ಮನೆಗೆ ₹75 ಲಕ್ಷ ತಲುಪಿಸಲಾಗಿತ್ತು. ಅಲ್ಲದೇ, ₹5 ಕೋಟಿ ಮೌಲ್ಯ ನಮೂದಿಸಿದ್ದ ಚೆಕ್‌ ಸಹ ಪಡೆದುಕೊಂಡಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಟಿಕೆಟ್‌ ಸಂಬಂಧ ಅಮಿತ್‌ ಶಾ ಅವರ ಆಪ್ತ ಸಹಾಯಕರ ಜೊತೆಗೆ ಮಾತನಾಡಿರುವುದಾಗಿ ಗೋಪಾಲ ಜೋಶಿ ಹೇಳಿದ್ದರು. ಆದರೆ, ಟಿಕೆಟ್‌ ಕೊಡಿಸದೇ ವಂಚಿಸಿದ್ದಾರೆ. ಅದಾದ ಮೇಲೆ ಬಸವೇಶ್ವರನಗರದ ವಿಜಯಲಕ್ಷ್ಮಿ ಜೋಶಿ ಅವರ ಮನೆಗೆ ಕರೆಸಿಕೊಂಡು ಚೆಕ್‌ ವಾಪಸ್‌ ನೀಡಿದ್ದರು. ₹25 ಲಕ್ಷ ವಾಪಸ್‌ ನೀಡುವಂತೆ ಕೇಳಿದಾಗ ₹200 ಕೋಟಿ ಮೊತ್ತದ ಯೋಜನೆಗಳ ಬಿಲ್‌ ತೋರಿಸಿ ₹1.75 ಕೋಟಿ ನೀಡಿದರೆ 20 ದಿನಗಳಲ್ಲಿ ಎಲ್ಲಾ ಹಣವನ್ನೂ ವಾಪಸ್‌ ನೀಡುವುದಾಗಿ ಹೇಳಿದ್ದರು. ಅವರ ಮಾತು ನಂಬಿ ಹಂತ ಹಂತವಾಗಿ ₹1.75 ಕೋಟಿ ನೀಡಿದ್ದೆ ಎಂದು ದೇವಾನಂದ್‌ ಚವ್ಹಾಣ್‌ ಅವರ ಪತ್ನಿ ಸುನೀತಾ ಚವ್ಹಾಣ್‌ ನೀಡಿರುವ ದೂರಿನಲ್ಲಿ ವಿವರಿಸಿರುವುದನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರಿನ ಬಸವೇಶ್ವರ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ಗಳಾದ 126(2), 115(2), 118(1), 316(2), 318(4), 61, 3(5) ಎಸ್‌ಸಿ/ಎಸ್‌ಟಿ ದೌರ್ಜನ್ಯ ನಿಷೇಧ ಕಾಯಿದೆ ಸೆಕ್ಷನ್‌ 3(1)(R) (S), 3(2)(V-A) ಅಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.