ಕಳೆದ ವರ್ಷ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರಾಷ್ಟ್ರ ರಾಜಧಾನಿ ದೆಹಲಿ ಸುತ್ತಮುತ್ತ ವ್ಯಾಪಕವಾಗಿ ನಡೆದಿದ್ದ ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಹಲವು ಖಾತೆಗಳನ್ನು ನಿರ್ಬಂಧಿಸುವಂತೆ ಕೇಂದ್ರ ಸರ್ಕಾರವು ತನಗೆ ನಿರ್ದೇಶಿಸಿತ್ತು ಎಂದು ಟ್ವಿಟರ್ ಸೋಮವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿತು.
ವ್ಯಕ್ತಿಗತವಾಗಿ ಖಾತೆಗಳನ್ನು ನಿರ್ಬಂಧಿಸುವಂತೆ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಹೊರಡಿಸಿರುವ ನಿರ್ಬಂಧಕ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.
ಟ್ವಿಟರ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಅರವಿಂದ್ ದಾತಾರ್ ಅವರು “ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 69ಎನಲ್ಲಿ ಒಟ್ಟಾಗಿ ಹಲವು ಖಾತೆಗಳನ್ನು ನಿರ್ಬಂಧಿಸಲು ಅವಕಾಶ ನೀಡಿಲ್ಲ. ಉದಾಹರಣೆಗೆ ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಕೇಂಧ್ರ ಸರ್ಕಾರವು ಖಾತೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುವಂತೆ ಆದೇಶಿಸಿತ್ತು. ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳು ವರದಿ ಮಾಡುತ್ತಿರುವಾಗ ನಮ್ಮನ್ನು ಮಾತ್ರ ಎಲ್ಲಾ ಟ್ವಿಟರ್ ಖಾತೆ ನಿರ್ಬಂಧಿಸುವಂತೆ ಹೇಳಿದ್ದೇಕೆ” ಎಂದು ಪ್ರಶ್ನಿಸಿದರು.
“ಸಂವಿಧಾನದ 19 (1)(ಎ) ವಿಧಿಯ ಆಶಯವೇ ಟೀಕಿಸುವ ಹಕ್ಕು.. ಸರ್ಕಾರವನ್ನು ಟೀಕಿಸುವುದು ವಾಕ್ ಸ್ವಾತಂತ್ರ್ಯದಲ್ಲಿ ಸೇರಿದೆ. ಕಾನೂನಿನ ವ್ಯಾಪ್ತಿಯಲ್ಲಿ ಸರ್ಕಾರವನ್ನು ಟೀಕಿಸಬಹುದು, ಅಭಿಪ್ರಾಯ ವ್ಯಕ್ತಪಡಿಸಬಹುದು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ” ಎಂದರು.
“ಮಧ್ಯಸ್ಥಿಕೆದಾರ ವೇದಿಕೆ (ಇಂಟರ್‌ಮೀಡಿಯರಿ) ಜೊತೆಗೆ ಖಾತೆ ಹೊಂದಿದವರಿಗೂ ಖಾತೆ ನಿರ್ಬಂಧ ನೋಟಿಸ್ ಜಾರಿ ಮಾಡಬೇಕು. ಕೇಂದ್ರ ಸರ್ಕಾರದ ಆಕ್ಷೇಪಾರ್ಹವಾದ ಆದೇಶಗಳಲ್ಲಿ ಕಾನೂನು ಪ್ರಕ್ರಿಯೆಯ ಅಗತ್ಯ ಪಾಲನೆಯಾಗಿಲ್ಲ” ಎಂದರು.
“ಸರ್ಕಾರವು ನಿರ್ಬಂಧ ಆದೇಶ ಮಾಡಿದಾಗ ಅದು ಮಧ್ಯಸ್ಥಿಕೆದಾರ ವೇದಿಕೆ ಮತ್ತು ನಿರ್ದಿಷ್ಟ ಖಾತೆ ಹೊಂದಿದವರಿಗೆ ಸಮಸ್ಯೆ ಉಂಟು ಮಾಡುತ್ತದೆ. ಟ್ವಿಟರ್‌ಗೆ ಮಾಹಿತಿ ಪೂರೈಸುವುದಕ್ಕೆ ನಿರ್ಬಂಧ ಹೇರುತ್ತದೆ” ಎಂದರು.
ವಿಚಾರಣೆಯ ಅಂತ್ಯದಲ್ಲಿ ನ್ಯಾ. ದೀಕ್ಷಿತ್ ಅವರು ಇಂಥದ್ದೇ ವಿಷಯಗಳಿಗೆ ಸಂಬಂಧಿಸಿದಂತೆ ವಿಶ್ವದ ಬೇರೆ ಕಡೆಗಳಲ್ಲಿನ ತುಲನಾತ್ಮಕ ವಿಶ್ಲೇಷಣೆ ಸಲ್ಲಿಸುವಂತೆ ದಾತಾರ್ ಅವರಿಗೆ ಸೂಚಿಸಿದರು. “ಪರಿಶೀಲನಾ ಸಮಿತಿಗೆ ವಿಚಾರ ಮುಟ್ಟಿದೆಯೇ? ಕಾನೂನು ಚೌಕಟ್ಟು ಹೇಗಿದೆ? ಇತರೆ ವ್ಯಾಪ್ತಿ ಹೊಂದಿರುವ ಕಡೆ, ಉದಾಹರಣೆಗೆ ಅಮೆರಿಕನ್ ಕಾನೂನು ವ್ಯಾಪ್ತಿಯಲ್ಲಿ ಹೇಗೆ ನಿರ್ವಹಿಸಲಾಗಿದೆ? ” ಎಂದು ನ್ಯಾ. ದೀಕ್ಷಿತ್ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಲು ಕಾಲಾವಕಾಶ ನೀಡುವಂತೆ ದಾತಾರ್ ಅವರು ಪೀಠಕ್ಕೆ ಮನವಿ ಮಾಡಿದರು. ಹೀಗಾಗಿ, ವಿಚಾರಣೆಯನ್ನು ಪೀಠವು ಅಕ್ಟೋಬರ್ 17ಕ್ಕೆ ಮುಂದೂಡಿತು.