Karnataka High Court, X
Karnataka High Court, X 
ಸುದ್ದಿಗಳು

ಖಾತೆ ನಿರ್ಬಂಧ: ಕೇಂದ್ರದ ಆದೇಶ ಅನುಪಾಲನಾ ದಾಖಲೆ ಸಲ್ಲಿಸಲು ಎಕ್ಸ್‌ ಕಾರ್ಪ್‌ಗೆ ಕೊನೆಯ ಅವಕಾಶ ನೀಡಿದ ಹೈಕೋರ್ಟ್‌

Bar & Bench

ಕೇಂದ್ರ ಸರ್ಕಾರವು ಮಾಹಿತಿ ತಂತ್ರಜ್ಞಾನ ಕಾಯಿದೆಯ ಅಡಿ ನಿರ್ದಿಷ್ಟ ಖಾತೆಗಳಿಗೆ ನಿರ್ಬಂಧ ವಿಧಿಸಲು ಹೊರಡಿಸಿದ್ದ ಆದೇಶವನ್ನು ಪಾಲಿಸಿರುವುದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸಲ್ಲಿಸಲು ಎಕ್ಸ್ ಕಾರ್ಪ್‌ಗೆ (ಟ್ವಿಟ್ಟರ್) ಕರ್ನಾಟಕ ಹೈಕೋರ್ಟ್ ಕೊನೆಯ ಅವಕಾಶ ನೀಡಿದೆ.

ಆಯ್ದ ವೈಯಕ್ತಿಕ ಎಕ್ಸ್‌ ಕಾರ್ಪ್‌ ಖಾತೆಗಳನ್ನು ನಿರ್ಬಂಧಿಸಿ ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ಮಾಡಿದ್ದ ಆದೇಶವನ್ನು ಎತ್ತಿ ಹಿಡಿದಿದ್ದ ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಎಕ್ಸ್ ಕಾರ್ಪ್ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್‌ ಕಮಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ವಿಚಾರಣೆ ವೇಳೆ ಪೀಠವು ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪಾಲಿಸಲಾಗಿದೆಯೇ ಎಂಬುದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸಲ್ಲಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚನೆ ನೀಡಿತು. ಇದನ್ನು ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಎಕ್ಸ್‌ ಕಾರ್ಪ್‌ ವಕೀಲರು ಮನವಿ ಮಾಡಿದರು. ಅನುಪಾಲನಾ ವರದಿ ಸಲ್ಲಿಸಲು ಅರ್ಜಿದಾರರಿಗೆ ಕೊನೆಯ ಅವಕಾಶ ನೀಡಲಾಗುತ್ತಿದೆ ಎಂದು ಪೀಠವು ಕಟುವಾಗಿ ನುಡಿಯಿತು. ಜೊತೆಗೆ 50 ಲಕ್ಷ ರೂಪಾಯಿ ದಂಡ ವಿಧಿಸಿರುವುದಕ್ಕೆ ಷರತ್ತಿಗೆ ಒಳಪಟ್ಟು ಮಾಡಿರುವ ಮಧ್ಯಂತರ ತಡೆಯಾಜ್ಞೆಯನ್ನು ಸೆಪ್ಟೆಂಬರ್ 15ಕ್ಕೆ ಮುಂದೂಡಿತು.

ಕೇಂದ್ರ ಸರ್ಕಾರದ ಆದೇಶವನ್ನು ಪ್ರಶ್ನೆ ಮಾಡಿರುವ ಅರ್ಜಿ ಹಾಗೂ ಇದೀಗ ಸಲ್ಲಿಸಿರುವ ಮೇಲ್ಮವಿ ಅರ್ಜಿಯಲ್ಲಿ ಆದೇಶ ಅನುಪಾಲನೆ ಮಾಡಿರುವ ಸಂಬಂಧ ಯಾವುದೇ ಅಂಶ ಉಲ್ಲೇಖಿಸಿಲ್ಲ ಎಂದು ಪ್ರತಿವಾದಿ ಕೇಂದ್ರ ಸರ್ಕಾರ ತಿಳಿಸಿದೆ. ಕೇಂದ್ರದ ಆದೇಶವನ್ನು ಮೇಲ್ಮವಿದಾರರು ಪಾಲನೆ ಮಾಡಿಲ್ಲ. ಈ ಸಂಬಂಧ ಈವರೆಗೂ ವಿವರಣೆ ನೀಡುವ ಹಂತದಲ್ಲಿಯೇ ಇದ್ದೀರಿ, ಹೀಗಿರುವಾಗ ನಿಮ್ಮ ಮೇಲ್ಮವಿಯನ್ನು ಯಾವ ಕಾರಣಕ್ಕಾಗಿ ಪುರಸ್ಕರಿಸಬೇಕು ಎಂದು ಪೀಠವು ಎಕ್ಸ್‌ ಕಾರ್ಪ್‌ ವಕೀಲರನ್ನು ಮೌಖಿಕವಾಗಿ ಪ್ರಶ್ನಿಸಿತು.