Republic / Arnab Goswami
Republic / Arnab Goswami 
ಸುದ್ದಿಗಳು

ಪ್ರಸಾರಕ್ಕೆ ತಡೆ ವಿಧಿಸಲು ಆಪರೇಟರ್‌ಗಳಿಗೆ ಶಿವಸೇನೆ ಬೆದರಿಕೆ ಆರೋಪ: ರಿಪಬ್ಲಿಕ್ ಅರ್ಜಿ ವಿಚಾರಣೆಗೆ ಹೈಕೋರ್ಟ್ ನಕಾರ

Bar & Bench

ರಿಪರ್ಬಿಕ್ ಟಿವಿ ನೆಟ್‌ವರ್ಕ್‌ಗೆ ಹಿನ್ನಡೆಯಾಗುವ ಬೆಳವಣಿಗೆಯೊಂದು ಘಟಿಸಿದೆ. ಡಿಜಿಟಲ್ ಮಲ್ಟಿ ಸಿಸ್ಟಂ ಆಪರೇಟರ್ (ಕೇಬಲ್ ಟಿವಿ ಆಪರೇಟರ್ಸ್) ವಿರುದ್ಧ ರಿಪಬ್ಲಿಕ್ ಟಿವಿ ಮತ್ತು ರಿಪಬ್ಲಿಕ್ ಭಾರತ್ ಪ್ರವರ್ತಕರು, ಎಆರ್ ಜಿ ಔಟ್ಲೈರ್ಸ್ ದಾಖಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ.

ಚಾನೆಲ್ ಪ್ರಸಾರಕ್ಕೆ ತಡೆ ವಿಧಿಸಿವುದರಿಂದ ಹಿಂದೆ ಸರಿಯುವಂತೆ ಕೇಬಲ್ ಆಪರೇಟರ್‌ಗಳಿಗೆ ಸೂಚಿಸುವಂತೆ ರಿಪಬ್ಲಿಕ್ ಟಿವಿಯು ನ್ಯಾಯಾಲಯಕ್ಕೆ ಮೊರೆ ಇಟ್ಟಿತ್ತು. (ಎಆರ್‌ ಜಿ ಔಟ್ಲೈರ್ ಮೀಡಿಯಾ ಪ್ರೈ. ಲಿ ಮತ್ತು ಇತರರು).

ರಿಪಬ್ಲಿಕ್ ಟಿವಿ ಚಾನೆಲ್ ಪ್ರಸಾರ ನಿರ್ಬಂಧಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ “ಶಿವ ಕೇಬಲ್ ಸೇನಾ” ಬೆದರಿಕೆಯೊಡ್ಡಿದೆ ಎಂದು ರಿಪಬ್ಲಿಕ್ ಟಿವಿ ಆರೋಪಿಸಿದ್ದು, ಇದರಿಂದ ಕೇಬಲ್ ಟಿವಿ ಆಪರೇಟರ್‌ಗಳು ಚಾನೆಲ್ ಪ್ರಸಾರಕ್ಕೆ ನಿರ್ಬಂಧ ವಿಧಿಸಬಹುದು ಎಂದು ಅದು ಆತಂಕ ವ್ಯಕ್ತಪಡಿಸಿತ್ತು.

ಸೇನೆ ಖಾಸಗಿ ಘಟಕವಾಗಿರುವುದರಿಂದ ಶಿವ ಸೇನಾ ವಿರುದ್ಧ ರಿಟ್ ಸಲ್ಲಿಸಿರುವುದು ಸರಿಯಲ್ಲ ಎಂದು ಸರ್ಕಾರಿ ವಕೀಲೆ ಜ್ಯೋತಿ ಚವ್ಹಾಣ್ ವಾದಿಸಿದರು. ಸೇನಾ ಬೆದರಿಕೆ ವಿರುದ್ಧ ರಿಪಬ್ಲಿಕ್ ನೆಟ್‌ವರ್ಕ್ ನಿರ್ದಿಷ್ಟ ಇಲಾಖೆಯನ್ನು ಸಂಪರ್ಕಿಸಬಹುದು ಎಂದು ನ್ಯಾಯಮೂರ್ತಿಗಳಾದ ಮಿಲಿಂದ್ ಜಾಧವ್ ಮತ್ತು ನಿತಿನ್ ಜಾಮ್ದಾರ್ ನೇತೃತ್ವದ ವಿಭಾಗೀಯ ಪೀಠ ಹೇಳಿತು.

“ಅರ್ಜಿದಾರರಿಗೆ ನೀಡಲಾಗಿರುವ ಪರವಾನಗಿಯನ್ನು ರದ್ದುಗೊಳಿಸುವ ಅಥವಾ ಕೇಬಲ್ ನೆಟ್‌ವರ್ಕ್ ಆಪರೇಟರ್‌ಗಳು ಮತ್ತು ಅರ್ಜಿದಾರರ ನಡುವಿನ ಒಪ್ಪಂದ/ಶಾಸನಬದ್ಧ ಸಂಬಂಧದಲ್ಲಿ ಮಧ್ಯಪ್ರವೇಶಿಸುವ ಶಾಸನಬದ್ಧ ಸಂಸ್ಥೆಯೂ ಶಿವ ಕೇಬಲ್ ಸೇನೆಯಲ್ಲ. ಈ ಸಂಬಂಧ ಬಿಡುಗಡೆಗೊಳಿಸಲಾಗಿರುವ ಹೇಳಿಕೆಗೆ ಕಾನೂನಿನಲ್ಲಿ ಯಾವುದೇ ಮಾನ್ಯತೆ ಇಲ್ಲ” ಎಂದು ನ್ಯಾಯಾಲಯ ಹೇಳಿದೆ.

ನಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಟೆಲಿಕಾಂ ವಿವಾದ ಇತ್ಯರ್ಥ ಮೇಲ್ಮನವಿ ನ್ಯಾಯಾಧಿಕರಣವನ್ನು ಸಂಪರ್ಕಿಸಬೇಕಿದೆ. ಆದರೆ, ಸೆಪ್ಟೆಂಬರ್ 18ರ ವರೆಗೆ ನ್ಯಾಯಾಧಿಕರಣವನ್ನು ಮುಚ್ಚಲಾಗಿದೆ ಎಂದು ರಿಪಬ್ಲಿಕ್ ಟಿವಿ ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ನಿಖಿಲ್ ಸಖರದಂಡೆ ಹೇಳಿದರು. ಇದರ ನಡುವೆಯೂ, ನ್ಯಾಯಾಧಿಕರಣ ಕಾರ್ಯಾರಂಭ ಮಾಡುವವರೆಗೆ ಚಾನೆಲ್ ಪ್ರಸಾರಕ್ಕೆ ನಿರ್ಬಂಧ ವಿಧಿಸದಂತೆ ಕೇಬಲ್ ಆಪರೇಟರ್‌ಗಳಿಗೆ ಸೂಚಿಸುವಂತೆ ರಿಪಬ್ಲಿಕ್ ನೆಟ್‌ವರ್ಕ್ ನ್ಯಾಯಾಲಯಕ್ಕೆ ಮನವಿ ಮಾಡಿತು.

ಕೇಬಲ್ ಟಿವಿ ಆಪರೇಟರ್‌ಗಳು ಚಾನೆಲ್ ಪ್ರಸಾರಕ್ಕೆ ನಿರ್ಬಂಧ ವಿಧಿಸಿಲ್ಲ. ಸದರಿ ವಿಚಾರವನ್ನು ಅರ್ಜಿದಾರರು ದಾಖಲೆಯಲ್ಲಿ ಸಲ್ಲಿಸದೇ ಇರುವುದರಿಂದ ನ್ಯಾಯಾಲಯವು ಅದರ ಬಗ್ಗೆ ಗಮನವಿಟ್ಟಿಲ್ಲ ಎಂದಿತು. ಒಂದೊಮ್ಮೆ ಆಪರೇಟರ್‌ಗಳು ಚಾನೆಲ್ ಪ್ರಸಾರಕ್ಕೆ ನಿರ್ಬಂಧ ವಿಧಿಸಿದರೂ ಅದು ಶಿವಸೇನೆಯ ಬೆದರಿಕೆಯಿಂದಲೇ ಆಗಿದೆ ಎಂದು ಹೇಳಲಾಗದು ಎಂದು ಹೇಳಿದ ನ್ಯಾಯಾಲಯವು ಅರ್ಜಿಯನ್ನು ವಿಲೇವಾರಿ ಮಾಡಿತು.