Mumbai air pollution  
ಸುದ್ದಿಗಳು

ಮುಂಬೈನಲ್ಲಿಯೂ ದೆಹಲಿಯಂತಹ ಮಾಲಿನ್ಯ: ಕಟ್ಟಡ ಕಾರ್ಮಿಕರ ಆರೋಗ್ಯ ರಕ್ಷಣೆಗೆ ಬಾಂಬೆ ಹೈಕೋರ್ಟ್ ಸೂಚನೆ

ಕಾರ್ಯನಿರ್ವಹಿಸದ ಮಾಲಿನ್ಯ ಉಪಕರಣಗಳು ಮತ್ತು ನಿರ್ಮಾಣ ಸ್ಥಳಗಳಲ್ಲಿನ ಕಳಪೆ ಮೇಲ್ವಿಚಾರಣೆ ಗಮನಿಸಿದ ನ್ಯಾಯಾಲಯ ಕಡ್ಡಾಯ ಧೂಳು ನಿಯಂತ್ರಣ ಸುರಕ್ಷತಾ ಕ್ರಮಗಳಿಲ್ಲದೆ ನೂರಾರು ಕೆಲಸಗಳು ಮುಂದುವರೆದಿರುವುದಾಗಿ ಆತಂಕ ವ್ಯಕ್ತಪಡಿಸಿತು.

Bar & Bench

ಮುಂಬೈನಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ಮತ್ತು ನಿರ್ಮಾಣ ಸ್ಥಳಗಳಲ್ಲಿ ಕಂಡುಬರುತ್ತಿರುವ ಅಸುರಕ್ಷಿತ ಪರಿಸ್ಥಿತಿಗಳ ಬಗ್ಗೆ ಇಂದು ಕಳವಳ ವ್ಯಕ್ತಪಡಿಸಿರುವ ಬಾಂಬೆ ಹೈಕೋರ್ಟ್‌, ಅಧಿಕಾರಿಗಳು ನಿರ್ಣಾಯಕವಾಗಿ ಕಾರ್ಯನಿರ್ವಹಿಸಲು ವಿಫಲವಾದರೆ ನಗರದಲ್ಲಿಯೂ ದೆಹಲಿಯಂತಹ ವಾಯು ಗುಣಮಟ್ಟ ಬಿಕ್ಕಟ್ಟು ತಲೆದೋರಬಹುದು ಎಂದು ಎಚ್ಚರಿಕೆ ನೀಡಿದೆ [ಬಾಂಬೆ ಹೈಕೋರ್ಟ್ ದಾಖಲಸಿಕೊಂಡ ಸ್ವಯಂ ಪ್ರೇರಿತ ಪ್ರಕರಣ].

ನಗರದ ಗಾಳಿಯ ಗುಣಮಟ್ಟ ಹದಗೆಡುತ್ತಿರುವ ಬಗ್ಗೆ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ  ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಅಂಖಡ್‌ ಅವರಿದ್ದ ಅವರ ವಿಭಾಗೀಯ ಪೀಠ ಈ ವಿಚಾರ ತಿಳಿಸಿತು.   

ಪರಿಸ್ಥಿತಿ ಕೈ ಮೀರಿ ಹೋದರೆ ಏನಾಗುತ್ತದೆ ಎಂಬುದನ್ನು ಕಂಡಿದ್ದೇವೆ. ಯಾವುದೂ ನಿಯಂತ್ರಣದಲ್ಲಿ ಇರುವುದಿಲ್ಲ. ಕಳೆದ 2ರಿಂದ 5 ವರ್ಷಗಳಲ್ಲಿ ದೆಹಲಿಯಲ್ಲಿ ಏನಾಯಿತು ಎಂಬುದು ಗೊತ್ತಿದೆ ಎಂದು ಅದು ಹೇಳಿತು.

ಕಾರ್ಯನಿರ್ವಹಿಸದ ಮಾಲಿನ್ಯ ಮಾಪನ ಉಪಕರಣಗಳು ಮತ್ತು ನಿರ್ಮಾಣ ಸ್ಥಳಗಳಲ್ಲಿನ ಕಳಪೆ ಮೇಲ್ವಿಚಾರಣೆ ಗಮನಿಸಿದ ನ್ಯಾಯಾಲಯ ಕಡ್ಡಾಯ ಧೂಳು ನಿಯಂತ್ರಣ ಸುರಕ್ಷತಾ ಕ್ರಮಗಳಿಲ್ಲದೆ ನೂರಾರು ಕೆಲಸಗಳು ಮುಂದುವರೆದಿದಿವೆ. ಮಾರ್ಗಸೂಚಿಗಳು ಕೇವಲ ಕಾಗದದ ಮೇಲಷ್ಟೇ ಉಳಿದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಅಪಾಯಕಾರಿ ಧೂಳಿಗೆ ಒಡ್ಡಿಕೊಂಡ ನಿರ್ಮಾಣ ಕಾರ್ಮಿಕರ ಆರೋಗ್ಯವನ್ನು ರಕ್ಷಿಸಲು ಅವರು ಯಾವ ತಕ್ಷಣದ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂಬುದನ್ನು ವಿವರಿಸುವಂತೆ ಅಧಿಕಾರಿಗಳಿಗೆ ಸೂಚಿಸಿತು.

ಕಾರ್ಮಿಕರನ್ನು ಆರೋಗ್ಯ ಸಮಸ್ಯೆಗಳಿಗೆ ಒಡ್ಡಲಾಗುತ್ತದೆ. ಅಧಿಕಾರಿಗಳು ಬಡವರನ್ನು ನೋಡಿಕೊಳ್ಳುವುದಿಲ್ಲ. ಅದೇ ಆಗುವುದು. ಅವರಿಗೂ ಆರೋಗ್ಯದ ಹಕ್ಕಿಲ್ಲವೇ? ಎಂದು ಅದು ಪ್ರಶ್ನಿಸಿತು.

ಬೃಹನ್ಮುಂಬೈ ಮಹಾನಗರ ಪಾಲಿಕೆ ಹಾಗೂ ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಸ್ಪಷ್ಟ ಹಾಗೂ ತಕ್ಷಣ ಜಾರಿಗೆ ಬರಬಹುದಾದ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ನಿರ್ದೇಶಿಸಿತು.

ಅಭಿವೃದ್ಧಿ ಕಾರ್ಯಗಳಿಗೆ ತನ್ನ ವಿರೋಧ ಇಲ್ಲವಾದರೂ ಅಂತಹ ಚಟುವಟಿಕೆ ನಡೆಸುವಾಗ ಪರಿಸರಕ್ಕೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದಿತು.