A1
ಸುದ್ದಿಗಳು

ಪ್ರಕರಣ ವಜಾಗೊಂಡಿದ್ದಕ್ಕೆ ಕಿರಿಯ ವಕೀಲನ ಮೇಲೆ ಗೂಬೆ ಕೂರಿಸಿದ ಹಿರಿಯ ನ್ಯಾಯವಾದಿಗೆ ಬಾಂಬೆ ಹೈಕೋರ್ಟ್ 'ವಿಶಿಷ್ಟ ದಂಡʼ

ದಂಡ ವಿಧಿಸುವ ಬದಲಿಗೆ ಪೀಠ, ಸದ್ಭಾವನೆಯ ಸೂಚಕವಾಗಿ ಕಾನೂನು ಕ್ಷೇತ್ರಕ್ಕೆ ಸಂಬಂಧಿಸಿದ ಗ್ರಂಥವೊಂದನ್ನು ಕಿರಿಯ ವಕೀಲನಿಗೆ ಉಡುಗೊರೆ ನೀಡುವಂತೆ ಹಿರಿಯ ನ್ಯಾಯವಾದಿಗೆ ಸೂಚಿಸಿತು.

Bar & Bench

ಮೊಕದ್ದಮೆ ವಜಾಗೊಂಡಿದ್ದರ ಹೊಣೆ ಹೊರುವಂತೆ ತನ್ನ ಕಿರಿಯ ವಕೀಲನನ್ನು ಒತ್ತಾಯಿಸಿದ ಹಿರಿಯ ನ್ಯಾಯವಾದಿಯ ವರ್ತನೆಗೆ ಬಾಂಬೆ ಹೈಕೋರ್ಟ್ ಇತ್ತೀಚೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಆದರೆ, ಇದೇ ವೇಳೆ ಹಿರಿಯ ನ್ಯಾಯವಾದಿ ಜಯೇಶ್ ಪಟೇಲ್ ಅವರ ಕ್ಷಮಾಪಣೆಯನ್ನು ಅಂಗೀಕರಿಸಿದ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ಆರಿಫ್ ಡಾಕ್ಟರ್ ಅವರಿದ್ದ ವಿಭಾಗೀಯ ಪೀಠ ಕಿರಿಯ ವಕೀಲನಿಗೆ ಗ್ರ್ಯಾನ್‌ವಿಲ್ಲೆ ಆಸ್ಟಿನ್ ಅವರ 'ದಿ ಇಂಡಿಯನ್ ಕಾನ್‌ಸ್ಟಿಟ್ಯೂಷನ್: ಕಾರ್ನರ್‌ಸ್ಟೋನ್ ಆಫ್ ಎ ನೇಷನ್' ಗ್ರಂಥವನ್ನು ಉಡುಗೊರೆಯಾಗಿ ನೀಡುವಂತೆ ಸೂಚಿಸಿತು.

ತನ್ನ ಈ ನಿರ್ಧಾರವನ್ನು ಹಿರಿಯ ನ್ಯಾಯವಾದಿ ಒಪ್ಪುತ್ತಾರೆ ಎಂದು ಭಾವಿಸುವುದಾಗಿ ನ್ಯಾಯಾಲಯ ನುಡಿಯಿತು.

ತನ್ನ ಕಕ್ಷಿದಾರ ಮೆಮನ್ ಕೋ-ಆಪರೇಟಿವ್ ಬ್ಯಾಂಕ್ (ಪ್ರಕರಣದಲ್ಲಿ ಮೇಲ್ಮನವಿದಾರ) ಹಾಜರಾಗದ ಕಾರಣ ವಜಾಗೊಳಿಸಲಾದ ಮೇಲ್ಮನವಿಯನ್ನು ಮತ್ತೆ ಆಲಿಸುವಂತೆ ಕೋರಿ ಪಟೇಲ್  ಅವರು ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿತು. ಪ್ರಕರಣದ ಕುರಿತಾಗಿ ತನ್ನ ಕಿರಿಯ ವಕೀಲ ತನಗೆ ಮಾಹಿತಿ ನೀಡದೆ ಇದ್ದುದರಿಂದ ತಾನು ಪ್ರಕರಣದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಪಟೇಲ್‌ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಇದಕ್ಕೆ ಪೂರಕವಾಗಿ ಕಿರಿಯ ವಕೀಲನಿಂದ ಅಫಿಡವಿಟ್ ಕೂಡ ಸಲ್ಲಿಕೆಯಾಗುವಂತೆ ಮಾಡಿದ್ದರು.