ಶಾಲೆಗೆ ತೆರಳುವುದಕ್ಕಾಗಿ ಹಾವುಗಳೇ ತುಂಬಿರುವ ಅಣೆಕಟ್ಟಿನ ಜಲಾಶಯವನ್ನು ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಭಿವ್ ಧನೋರಾ ಗ್ರಾಮದ ಮಕ್ಕಳು ಥರ್ಮಾಕೋಲ್ ತೆಪ್ಪ ಬಳಸಿ ದಾಟುತ್ತಿರುವುದಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಔರಂಗಾಬಾದ್ ಪೀಠ ಈಚೆಗೆ ಸ್ವಯಂಪ್ರೇರಿತ ವಿಚಾರಣೆಗೆ ಮುಂದಾಗಿದೆ.
ಈ ಸಂಬಂಧ ಆಂಗ್ಲಪತ್ರಿಕೆ ಟೈಮ್ಸ್ ಆಫ್ ಇಂಡಿಯಾ ಆಗಸ್ಟ್ 27ರಂದು ಪ್ರಕಟಿಸಿದ್ದ ಸುದ್ದಿಯನ್ನುನ್ಯಾಯಮೂರ್ತಿಗಳಾದ ರವೀಂದ್ರ ವಿ ಘುಗೆ ಮತ್ತು ವೈ ಜಿ ಖೋಬ್ರಾಗಡೆ ಅವರಿದ್ದ ವಿಭಾಗೀಯ ಪೀಠ ಗಮನಿಸಿತ್ತು.
ಔರಂಗಾಬಾದ್ ಜಿಲ್ಲೆಯ ಭಿವ್ ಧನೋರಾ ಗ್ರಾಮದ 15 ಮಕ್ಕಳು ಪ್ರತಿದಿನ ಥರ್ಮಾಕೋಲ್ ಫಲಕಗಳ ಮೇಲೆ ಕುಳಿತು ಜೈಕ್ವಾಡಿ ಅಣೆಕಟ್ಟು ಜಲಾಶಯ ದಾಟಿ ಶಾಲೆಗೆ ಹೋಗುತ್ತಿರುವ ಬಗ್ಗೆ ವರದಿ ಪ್ರಕಟವಾಗಿತ್ತು. ನೀರಿನಲ್ಲಿ ವಿಷಪೂರಿತ ಹಾವುಗಳು ಇರುವುದರಿಂದ ಪರಿಸ್ಥಿತಿ ಭಯಾನಕವಾಗಿದೆ ಎಂದು ಇಬ್ಬರು ಮಕ್ಕಳ ತಂದೆ ವರದಿಗಾರರಿಗೆ ದೂರಿದ್ದರು.
"ನನ್ನ ಮಕ್ಕಳು ನನ್ನಂತೆ ಅನಕ್ಷರಸ್ಥರಾಗಲು ನಾನು ಬಯಸುವುದಿಲ್ಲ. ಥರ್ಮಾಕೋಲ್ ಶೀಟ್ ಬಳಸಿ ನನ್ನ ಮಗಳು ಮತ್ತು ಮಗ ಶಾಲೆಗೆ ಹೋಗುತ್ತಿದ್ದಾರೆ . ನೀರಿನಲ್ಲಿ ವಿಷಕಾರಿ ಹಾವುಗಳಿರುವುದು ಭಯ ಹುಟ್ಟಿಸುತ್ತದೆ" ಎಂದು ತಂದೆ ವಿವರಿಸಿದ್ದರು.
ಅಣೆಕಟ್ಟು ನಿರ್ಮಾಣವಾದ 47 ವರ್ಷಗಳಿಂದ ಇದೇ ಪರಿಸ್ಥಿತಿ ಇದೆ ಎಂಬುದನ್ನು ಗಮನಿಸಿರುವ ನ್ಯಾಯಾಲಯ ಪಿಐಎಲ್ ಅರ್ಜಿ ಸಿದ್ಧಪಡಿಸುವ ಸಂಬಂಧ ನ್ಯಾಯಾಲಯಕ್ಕೆ ಸಹಾಯ ಮಾಡಲು ವಕೀಲ ಪುಷ್ಕರ್ ಶೆಂಡೂರ್ನಿಕರ್ ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ ನೇಮಿಸಿತು. ಹೆಚ್ಚಿನ ಮಾಹಿತಿಗಾಗಿ ವರದಿ ಪ್ರಕಟಿಸಿದ್ದ ಟೈಮ್ಸ್ ಆಫ್ ಇಂಡಿಯಾದ ವರದಿಗಾರರನ್ನು ಸಂಪರ್ಕಿಸಲು ಅಮಿಕಸ್ ಕ್ಯೂರಿ ಅವರಿಗೆ ನ್ಯಾಯಾಲಯ ಸ್ವಾತಂತ್ರ್ಯ ನೀಡಿತು.
ಶೆಂಡೂರ್ನಿಕರ್ ಅವರು ಸೆಪ್ಟೆಂಬರ್ 4 ರಂದು (ಇಂದು) ಮನವಿ ಸಲ್ಲಿಸಲಿದ್ದು ನ್ಯಾಯಾಲಯ ಮುಂದಿನ ನಿರ್ದೇಶನಗಳನ್ನು ನೀಡಲಿದೆ.
ಜನವರಿ 2022 ರಲ್ಲಿ, ಸತಾರಾ ಜಿಲ್ಲೆಯ ಖಿರ್ಖಂಡಿ ಗ್ರಾಮದ ಹೆಣ್ಣುಮಕ್ಕಳು ಶಾಲೆ ತಲುಪಲು ಕೊಯ್ನಾ ಅಣೆಕಟ್ಟು ಜಲಾಶಯದಲ್ಲಿ ತಾವೇ ದೋಣಿ ಹುಟ್ಟುಹಾಕುತ್ತಿದ್ದಾರೆ ಎಂಬ ವರದಿ ಆಧರಿಸಿ ಹೈಕೋರ್ಟ್ ಪ್ರಧಾನ ಪೀಠ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು. ಹೆಣ್ಣು ಮಕ್ಕಳಿಗೆ ಸುರಕ್ಷಿತ ಮತ್ತು ಸೌಹಾರ್ದಯುತ ವಾತಾವರಣ ಕಲ್ಪಿಸಿದರೆ ಮಾತ್ರ ʼಬೇಟಿ ಬಚಾವೋ, ಬೇಟಿ ಪಡಾವೋ (ಹೆಣ್ಣು ಮಗುವನ್ನು ರಕ್ಷಿಸಿ ಶಿಕ್ಷಣ ನೀಡಿ) ಎಂಬ ಘೋಷವಾಕ್ಯದ ಧ್ಯೇಯ ಸಾಕಾರಗೊಳ್ಳಲಿದೆ ಎಂದು ಅದು ಬುದ್ಧಿಮಾತು ಹೇಳಿತ್ತು. ಮಕ್ಕಳು ಶಾಲೆಗಳಿಗೆ ಯಾವುದೇ ತೊಂದರೆ ಎದುರಿಸದೆ ಹೋಗುವಂತಾಗಲು ಉತ್ತಮ ರಸ್ತೆಗಳನ್ನು ನಿರ್ಮಿಸಬೇಕು ಎಂದು ಅದು ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.