ಶೌಚಗುಂಡಿ ಸ್ವಚ್ಛಗೊಳಿಸುವ ವೇಳೆ ಸಾವಿಗೀಡಾಗುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಹೈಕೋರ್ಟ್ ಬುಧವಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ದಿನಪತ್ರಿಕೆಗಳಲ್ಲಿ ಪ್ರಕಟವಾದ ವಿವಿಧ ವರದಿಗಳನ್ನು ಆಧರಿಸಿ ವಿಚಾರಣೆ ನಡೆಸಲು ನಿರ್ಧರಿಸಿದ ಮುಖ್ಯ ನ್ಯಾಯಮೂರ್ತಿ ರವಿ ಮಳಿಮಠ್ ಮತ್ತು ನ್ಯಾಯಮೂರ್ತಿ ವಿಶಾಲ್ ಮಿಶ್ರಾ ಅವರಿದ್ದ ಪೀಠ ಸರ್ಕಾರದ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ ನಾಲ್ಕು ವಾರಗಳ ನಂತರ ವಿಚಾರಣೆ ನಡೆಸುವುದಾಗಿ ತಿಳಿಸಿತು.
ಗ್ವಾಲಿಯರ್‌ನಲ್ಲಿ ನಿತ್ಯದ ನಿರ್ವಹಣೆಗಾಗಿ ಶೌಚ ಗುಂಡಿಗೆ ಇಳಿದ ಇಬ್ಬರು ಪೌರಕಾರ್ಮಿಕರು ವಿಷಾನಿಲದಿಂದ ಸಾವನ್ನಪ್ಪಿದ ಇತ್ತೀಚಿನ ಘಟನೆಯೊಂದನ್ನು ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡಿತು.
ಮಧ್ಯಪ್ರದೇಶದ ವಿವಿಧೆಡೆಗಳಲ್ಲಿ ಸೂಕ್ತ ರಕ್ಷಣಾ ಸಾಧನ ಸಲಕರಣೆಗಳಿಲ್ಲದೆ ಬಡ ಪೌರಕಾರ್ಮಿಕರನ್ನು ಒಳಚರಂಡಿ ಮಾರ್ಗಗಳ ನಿರ್ವಹಣೆಗಾಗಿ ಕಳುಹಿಸಿದ ವೇಳೆ ಇಂತಹ ಹಲವು ಘಟನೆಗಳು ಸಂಭವಿಸಿವೆ ಎಂದು ನ್ಯಾಯಾಲಯ ಹೇಳಿದೆ.