ಮಹಾರಾಷ್ಟ್ರದಲ್ಲಿ ಕೋವಿಡ್ ಸಾಂಕ್ರಾಮಿಕತೆಯ ನಡುವೆಯೂ ಪೂಜಾ ಸ್ಥಳಗಳನ್ನು ತೆರೆಯುವಂತೆ ಕೋರಿದ್ದ ನ್ಯಾಯದಾನ ಸಹಕಾರ ಸಂಸ್ಥೆ ಅಸೋಸಿಯೇಷನ್ ಫಾರ್ ಎಯ್‌ಡಿಂಗ್ ಜಸ್ಟಿಸ್ ಅರ್ಜಿ ವಿಚಾರಣೆ ನಡೆಸಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ.
ನ್ಯಾಯದಾನ ಸಂಸ್ಥೆಯ ಪರವಾಗಿ ಅರ್ಜಿ ಸಲ್ಲಿಸಿದ್ದ ದೀಪೇಶ್ ಸಿರೋಯಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿಪ್ನಾಕರ್ ದತ್ತಾ ಮತ್ತು ನ್ಯಾ. ಜಿ ಎಸ್ ಕುಲಕರ್ಣಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಹೀಗೆ ಹೇಳಿದೆ.
“ಸದ್ಯ ಮಹಾರಾಷ್ಟ್ರದಲ್ಲಿರುವ ಸ್ಥಿತಿಯ ಬಗೆಗಿನ ನ್ಯಾಯಿಕ ಪರಿಗಣನೆ ನಂತರ, ಅರ್ಜಿದಾರರು ಕೋರಿರುವಂತೆ ಸೀಮಿತ ರೀತಿಯಲ್ಲಿಯೂ ಸಹ ಪೂಜಾ ಸ್ಥಳಗಳನ್ನು ತೆರೆಯುವಂತೆ ರಾಜ್ಯ ಸರ್ಕಾರಕ್ಕೆ ಈ ಸಂದರ್ಭದಲ್ಲಿ ಆದೇಶಿಸಲಾಗದು.”ಬಾಂಬೆ ಹೈಕೋರ್ಟ್
ಪರಿಸ್ಥಿತಿ ಸುಧಾರಿಸಿದರೆ ಕ್ರಮ ಕ್ರಮಕೈಗೊಳ್ಳುವ ತೀರ್ಮಾನವನ್ನು ರಾಜ್ಯ ಸರ್ಕಾರಕ್ಕೆ ಬಿಡಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರ ಮನವಿಗೆ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ್ದು, ಹೀಗೆ ಹೇಳಿದೆ:
ರಾಜ್ಯ ಸರ್ಕಾರ ಜಾರಿಗೊಳಿಸಿದ ಮಾರ್ಗಸೂಚಿಯನ್ನು ಜನರು ಅನುಸರಿಸುತ್ತಾರೆ ಎಂಬ ಯಾವುದೇ ಖಾತರಿಯಿಲ್ಲ.
ಪ್ರಸಕ್ತ ವರ್ಷದಲ್ಲಿನ ಗಣೇಶ ಚತುರ್ಥಿಯೂ ಸೇರಿದಂತೆ ಹಿಂದಿನ ಎಲ್ಲಾ ಸಂದರ್ಭಗಳಲ್ಲೂ ನಿರ್ಬಂಧಗಳನ್ನು ಉಲ್ಲಂಘಿಸಲಾಗಿದೆ.
ಯಾವುದೇ ತೆರನಾದ ನಿಯಂತ್ರಣಾ ಕ್ರಮಗಳನ್ನು ಜಾರಿಗೊಳಿಸಿದರೂ ಅವುಗಳ ಮೇಲೆ ನಿಗಾ ಇಟ್ಟು ಅನುಸರಿಸುವುದು ಅತ್ಯಂತ ಸವಾಲಿನ ಕೆಲಸ.
ರಕ್ಷಣಾ ಕ್ರಮಗಳನ್ನು ಉಲ್ಲಂಘಿಸಿದ್ದರಿಂದ ಹಿಂದೆ ಕೋವಿಡ್ ಪ್ರಕರಣಗಳು ಹೆಚ್ಚಾಗಿದ್ದಕ್ಕೆ ಸಂಬಂಧಿಸಿದಂತೆ ಹಲವು ಘಟನೆಗಳನ್ನು ನ್ಯಾಯಪೀಠವು ಮೌಖಿಕವಾಗಿ ಉಲ್ಲೇಖಿಸಿತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೆ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ ಎಂದೂ ನ್ಯಾಯಾಲಯ ಹೇಳಿತು.
ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಅಶುತೋಷ್ ಕುಂಭಕೋನಿ ಮತ್ತು ಸರ್ಕಾರಿ ವಕೀಲ ಪಿ ಪಿ ಕಾಕಡೆ ವಾದಿಸಿದರು. ಎರಡು ತಿಂಗಳು ವಿಚಾರಣೆ ಮುಂದೂಡಿರುವ ನ್ಯಾಯಾಲಯವು ಬಳಿಕ ಪರಿಸ್ಥಿತಿ ಮರುಪರಿಶೀಲಿಸಲಾಗುವುದು ಎಂದಿದೆ.