Anil Ambani and Bombay High Court Anil Ambani ( Twitter)
ಸುದ್ದಿಗಳು

ವಂಚನೆ ವರ್ಗಕ್ಕೆ ಬ್ಯಾಂಕ್ ಖಾತೆ: ಅನಿಲ್ ಅಂಬಾನಿ ಮನವಿ ವಜಾಗೊಳಿಸಿದ ಬಾಂಬೆ ಹೈಕೋರ್ಟ್

ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್‌ಕಾಮ್‌) ಮತ್ತದರ ಪ್ರವರ್ತಕ ಅನಿಲ್ ಅಂಬಾನಿ ಅವರ ಸಾಲದ ಖಾತೆಗಳನ್ನು ಕಳೆದ ಜೂನ್‌ನಲ್ಲಿ ಎಸ್‌ಬಿಐ ವಂಚನೆ ವರ್ಗಕ್ಕೆ ಸೇರಿಸಿತ್ತು.

Bar & Bench

ತಮ್ಮ ಸಾಲದ ಬ್ಯಾಂಕ್‌ ಖಾತೆಗಳನ್ನು ವಂಚನೆ ವರ್ಗಕ್ಕೆ ಸೇರಿಸಿದ್ದ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ನಿರ್ಣಯ ಪ್ರಶ್ನಿಸಿ ಉದ್ಯಮಿ ಅನಿಲ್‌ ಅಂಬಾನಿ ಸಲಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ. [ ಅನಿಲ್ ಡಿ ಅಂಬಾನಿ ಮತ್ತು  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಡುವಣ ಪ್ರಕರಣ].

ಕಾರ್ಯವಿಧಾನ ನ್ಯಾಯಯುತವಾಗಿಲ್ಲ ಎಂಬ ಅಂಬಾನಿ ಅವರ ವಾದ ತಿರಸ್ಕರಿಸಿದ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ನೀಲಾ ಗೋಖಲೆ ಅವರಿದ್ದ ವಿಭಾಗೀಯ ಪೀಠ ಎಸ್‌ಬಿಐ ಕೈಗೊಂಡ ಕ್ರಮವನ್ನು ಎತ್ತಿಹಿಡಿದಿದೆ. ತೀರ್ಪಿನ ಪ್ರತಿ ಇನ್ನಷ್ಟೇ ದೊರೆಯಬೇಕಿದೆ.

ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್‌ಕಾಮ್‌) ಮತ್ತದರ ಪ್ರವರ್ತಕ ಅನಿಲ್ ಅಂಬಾನಿ ಅವರ ಸಾಲದ ಖಾತೆಗಳನ್ನು ಕಳೆದ ಜೂನ್ 2025ರಲ್ಲಿ ಎಸ್‌ಬಿಐ ವಂಚನೆ ವರ್ಗಕ್ಕೆ ಸೇರಿಸಿತ್ತು. ಹಣದ ಮರು ಹೊಂದಾಣಿಕೆ, ಒಪ್ಪಂದ ಉಲ್ಲಂಘನೆ ಹಾಗೂ ಸಂಬಂಧಿತ ಪಕ್ಷಕಾರರ ವಹಿವಾಟುಗಳ ಕಾರಣಕ್ಕೆ ಖಾತೆಯನ್ನು ತಾನು ವಂಚನೆ ವರ್ಗಕ್ಕೆ ಸೇರಿಸುತ್ತಿರುವುದಾಗಿ ಅದು ಹೇಳಿತ್ತು. ನಂತರ ಆರ್‌ಬಿಐಗೆ ಮಾಹಿತಿ ನೀಡಿದ್ದ ಅದು ಸಿಬಿಐಗೆ ಮೊರೆ ಹೋಗಲು ನಿರ್ಧರಿಸಿತು.

ತಾನು ಕಾರ್ಯ ನಿರ್ವಹಣಾ ನಿರ್ದೇಶಕನಲ್ಲ. ತಮ್ಮ ಆಯ್ಕೆ ಪ್ರತ್ಯೇಕವಾದದುದು. ಮತ್ತೊಂದೆಡೆ ಪ್ರತಿವಾದ ಮಂಡಿಸಲು ತನಗೆ ಸಾಕಷ್ಟು ಸಮಯಾವಕಾಶ ದೊರೆತಿಲ್ಲ‌ ಎಂದು ಅನಿಲ್‌ ಅಂಬಾನಿ ವಾದಿಸಿದ್ದರು. 

ಆದರೆ ವಂಚನೆ ವರ್ಗಕ್ಕೆ ಖಾತೆಗಳನ್ನು ಸೇರಿಸುವ ಸಂಬಂಧ ಆರ್‌ಬಿಐ ಜುಲೈ 2024ರಲ್ಲಿ ನೀಡಿದ್ದ ಅತಿಮುಖ್ಯ ನಿರ್ದೇಶನಗಳನ್ನು ಎಸ್‌ಬಿಐ ಪಾಲಿಸಿದೆ ಎಂಬುದನ್ನು ಗಮನಿಸಿದ ಹೈಕೋರ್ಟ್‌ ಅರ್ಜಿ ವಜಾಗೊಳಿಸಿತು.

ಗಮನಾರ್ಹ ಸಂಗತಿ ಎಂದರೆ, ಆರ್‌ಬಿಐನ ಅತಿ ಮುಖ್ಯ ಸುತ್ತೋಲೆ ಪಾಲಿಸದಿರುವುದನ್ನು ಉಲ್ಲೇಖಿಸಿ, ಅಂಬಾನಿ ವಿರುದ್ಧ ಕೆನರಾ ಬ್ಯಾಂಕ್ ಹೊರಡಿಸಿದ್ದ ಇದೇ ರೀತಿಯ ಆದೇಶವನ್ನು ಇದೇ ಪೀಠ ಈ ಹಿಂದೆ  ತಡೆಹಿಡಿದಿತ್ತು . ನಂತರ ಅದನ್ನು ಹಿಂಪಡೆಯಲಾಗಿತ್ತು.

ಖಾತೆಯನ್ನು ವಂಚನೆ ವರ್ಗಕ್ಕೆ ಸೇರಿಸಿದ್ದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ  ನಿರ್ಧಾರದ ವಿರುದ್ಧವೂ ಅನಿಲ್‌‌ ಅಂಬಾನಿ ಅರ್ಜಿ ಸಲ್ಲಿಸಿದ್ದರು. ಆದರೆ, ಅದೇ ಪೀಠ ತಡೆಯಾಜ್ಞೆ ನೀಡಿರಲಿಲ್ಲ. ಬದಲಿಗೆ  ಆರ್‌ಬಿಐ ಸಂಪರ್ಕಿಸುವಂತೆ ಸೂಚಿಸಿತ್ತು.

ಅನಿಲ್ ಅಂಬಾನಿ ಪರವಾಗಿ ಹಿರಿಯ ವಕೀಲರಾದ ಡೇರಿಯಸ್ ಖಂಬಾಟಾ ಮತ್ತು ಪ್ರತೀಕ್ ಸೆಕ್ಸಾರಿಯಾ ವಾದ ಮಂಡಿಸಿದ್ದರು. ಎಸ್‌ಬಿಐ ಅನ್ನು ಹಿರಿಯ ವಕೀಲ ಆಸ್ಪಿ ಚಿನೋಯ್ ಹಾಗೂ ತಂಡ ಪ್ರತಿನಿಧಿಸಿತ್ತು.