ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳನ್ನು ಬಳಸುವ ಎಲ್ಲಾ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಬಾಂಬೆ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ [ಅರ್ಜುನ್ ರಾಜು ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಫೆಬ್ರವರಿ 15, 2021ರಿಂದ ಜಾರಿಗೆ ಬರುವಂತೆ ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳ ಚಾಲಕರಿಗೆ ದುಪ್ಪಟ್ಟು ಶುಲ್ಕ ವಿಧಿಸಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಹೊರಡಿಸಿದ ಸುತ್ತೋಲೆ ರದ್ದುಗೊಳಿಸುವಂತೆ ಕೋರಿ ಅರ್ಜುನ್ ರಾಜು ಖಾನಾಪುರೆ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು.
ಇದು ನೀತಿ ನಿರ್ಧರಣದ ಭಾಗವಾಗಿದ್ದು, ನ್ಯಾಯಾಲಯಗಳು ಇದರಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಭಾರತಿ ಡಾಂಗ್ರೆ ಅವರಿದ್ದ ಪೀಠ ಹೇಳಿದೆ.
"ಫಾಸ್ಟ್‌ಟ್ಯಾಗ್ ಜಾರಿ ದಕ್ಷ ಮತ್ತು ಸುಗಮ ರಸ್ತೆ ಪ್ರಯಾಣ ಒದಗಿಸುವ ಗುರಿ ಹೊಂದಿರುವ ನೀತಿ ನಿರ್ಧಾರದ ಸಂಗತಿಯಾಗಿದೆ.. ನೀತಿ ನಿರ್ಧಾರಗಳು ನಿರಂಕುಶವಾಗಿದ್ದಾಗ ಅಥವಾ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದ್ದಾಗ ಮಾತ್ರ ನ್ಯಾಯಾಂಗ ಪರಿಶೀಲನೆ ಸಾಧ್ಯ ಎಂಬುದು ಕಾನೂನಿನ ಸಾಮಾನ್ಯ ನಿಲುವು" ಎಂದು ಪೀಠ ಹೇಳಿದೆ.
ಭಾರತದಲ್ಲಿನ ಸಾರ್ವಜನಿಕರಲ್ಲಿ ಹೆಚ್ಚಿನವರು ಅನಕ್ಷರಸ್ಥರು ಮತ್ತು ಫಾಸ್ಟ್‌ಟ್ಯಾಗ್ ವ್ಯವಸ್ಥೆಗೆ ಅಗತ್ಯವಾದ ಬ್ಯಾಂಕ್ ಖಾತೆ ಹೊಂದಿಲ್ಲದಿರಬಹುದು. ಹೀಗಾಗಿ ಅವರು ಫಾಸ್ಟ್‌ಟ್ಯಾಗ್ ನಿರ್ವಹಿಸಲು ಸಮರ್ಥರಲ್ಲ ಎಂಬ ಅರ್ಜಿದಾರರ ವಾದ ಒಪ್ಪಲು ಸಾಧ್ಯವಿಲ್ಲ ಎಂದು ಅದು ಅಭಿಪ್ರಾಯಪಟ್ಟಿದೆ.
ಮೊಬೈಲ್ ಬಳಸದ ವ್ಯಕ್ತಿಗಳು ಅಪರೂಪವಾಗಿದ್ದು ಬಳಕೆದಾರರಿಗೆ ರಿಚಾರ್ಜ್ ಮಾಡಿಸಿಕೊಳ್ಳುವ ಕಾರ್ಯ ವಿಧಾನ ತಿಳಿದಿರುತ್ತದೆ. ಫಾಸ್ಟ್‌ಟ್ಯಾಗ್ ಸರಳ ಕಾರ್ಯವಿಧಾನವಾಗಿರುವುದರಿಂದ ಅದನ್ನು ಆಫ್‌ಲೈನ್ ವಿಧಾನದಲ್ಲಿಯೂ ಬಳಸಬಹುದಾದ ಹಿನ್ನೆಲೆಯಲ್ಲಿ ಅದನ್ನು ಜಾರಿಗೆ ತಂದಿರುವ ಉದ್ದೇಶ ಪರಿಗಣಿಸಿ ಈ ನೀತಿ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲು ತನಗೆ ಯಾವುದೇ ಕಾರಣ ಕಂಡುಬರುತ್ತಿಲ್ಲ ಎಂದು ನ್ಯಾಯಾಲಯ ವಿವರಿಸಿದೆ.
ದುಪ್ಪಟ್ಟು ಟೋಲ್ ಶುಲ್ಕವು ದಂಡವಲ್ಲ, ಬದಲಾಗಿ ಅಗತ್ಯ ಟ್ಯಾಗ್ ಇಲ್ಲದೆ ಫಾಸ್ಟ್‌ಟ್ಯಾಗ್ ಪಥವನ್ನು ಬಳಸಿದ್ದಕ್ಕಾಗಿ ಪಡೆಯುವ ಶುಲ್ಕವಾಗಿದೆ ಎಂದು ಕೂಡ ಪೀಠ ಹೇಳಿತು.
ಇಂಧನ ಬಳಕೆ ಕಡಿಮೆ, ಸಂಚಾರ ಹರಿವನ್ನು ಸುಗಮಗೊಳಿಸುವುದು ಫಾಸ್ಟ್‌ಟ್ಯಾಗ್ ಬಳಕೆ ನೀತಿಯ ಉದ್ದೇಶವಾಗಿದೆ. ಅಲ್ಲದೆ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ನಿರ್ಬಂಧಿಸುವ ನೀತಿ ತರ್ಕಬದ್ಧವಾಗಿದ್ದು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದೆ ಎಂದು ಪೀಠ ತೀರ್ಪು ನೀಡಿತು. ಅಂತೆಯೇ ಅರ್ಜಿಯನ್ನು ವಜಾಗೊಳಿಸಿತು.