Jiah Khan, Bombay HC
Jiah Khan, Bombay HC 
ಸುದ್ದಿಗಳು

ನಟಿ ಜಿಯಾ ಖಾನ್ ಸಾವಿನ ಕುರಿತು ಎಫ್‌ಬಿಐ ತನಿಖೆ ಕೋರಿಕೆ: ಮನವಿ ವಜಾಗೊಳಿಸಿದ ಬಾಂಬೆ ಹೈಕೋರ್ಟ್

Bar & Bench

ತನ್ನ ಮಗಳ ಸಾವಿನ ಕುರಿತು ತನಿಖೆ ನಡೆಸುವಂತೆ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್‌ಗೆ (ಎಫ್‌ಬಿಐ) ನಿರ್ದೇಶಿಸುವಂತೆ ಕೋರಿ ಕೆಲ ವರ್ಷಗಳ ಹಿಂದೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಬಾಲಿವುಡ್‌ ನಟಿ ಜಿಯಾ ಖಾನ್‌ ಅವರ ತಾಯಿ ರಬಿಯಾ ಖಾನ್‌ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ಇತ್ತೀಚೆಗೆ ವಜಾ ಮಾಡಿದೆ [ರಬಿಯಾ ಖಾನ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಪ್ರಕರಣದ ವಿಚಾರಣೆಯನ್ನು ವಿಳಂಬ ಮಾಡುವ ಸಲುವಾಗಿ ಇಂತಹ ಅರ್ಜಿ ಸಲ್ಲಿಸಿದ್ದಕ್ಕಾಗಿ ರಬಿಯಾ ಅವರನ್ನು ನ್ಯಾಯಮೂರ್ತಿಗಳಾದ ಅಜಯ್ ಗಡ್ಕರಿ ಮತ್ತು ಮಿಲಿಂದ್ ಜಾಧವ್ ಅವರಿದ್ದ ವಿಭಾಗೀಯ ಪೀಠ ತೀವ್ರ ತರಾಟೆಗೆ ತೆಗೆದುಕೊಂಡಿತು.

ಎಫ್‌ಬಿಐನಂತಹ ವಿದೇಶಿ ತನಿಖಾ ಸಂಸ್ಥೆಗೆ ನಿರ್ದೇಶನ ನೀಡಲು ಭಾರತೀಯ ನ್ಯಾಯಾಲಯಕ್ಕೆ ಯಾವ ಕಾನೂನಿನಡಿ ಅಧಿಕಾರವಿದೆ ಎನ್ನುವುದನ್ನು ತಿಳಿಸುವಂತೆ ರಬಿಯಾ ಪರ ಹಾಜರಾದ ವಕೀಲರಿಗೆ ಪದೇ ಪದೇ ಸೂಚಿಸಿದ ಹೊರತಾಗಿಯೂ ಅದಕ್ಕೆ ಉತ್ತರಿಸಲು ಅವರು ಅಜ್ಞಾನ ತೋರಿದ್ದು ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ ಎಂದಿತು.

ವಿಚಾರಣೆ ಎದುರಿಸದೇ ನ್ಯಾಯಾಲಯದಿಂದ ನಟಿಯ ಸಾವು ಆತ್ಮಹತ್ಯೆಯಲ್ಲ ಕೊಲೆ ಎಂಬ ಆದೇಶ ಪಡೆದುಕೊಳ್ಳಲು ಹೊರಟಂತೆ ಅರ್ಜಿದಾರರ ಇಡೀ ನಡೆ ಕಂಡುಬರುತ್ತದೆ. ಇದು ಕಾನೂನಿನ ಸೂಕ್ತ ಪ್ರಕ್ರಿಯೆಯನ್ನು ತಪ್ಪಿಸುವಂತೆ ಕಾಣುತ್ತದೆ. ಹೀಗಾಗಿ ನಾವಿದನ್ನು ಬಲವಾಗಿ ಖಂಡಿಸುತ್ತಿದ್ದೇವೆ ಎಂದು ನ್ಯಾಯಾಲಯ  ಹೇಳಿತು.

ಇದೇ ವೇಳೆ ರಬಿಯಾ ಅವರಿಗೆ ನ್ಯಾಯಾಲಯ ದಂಡ ವಿಧಿಸಲು ಮುಂದಾದರೂ ಆಕೆಯ ಪರ ಕೋರಿಕೆಯ ಹಿನ್ನೆಲೆಯಲ್ಲಿ ನಿರ್ಧಾರವನ್ನು ಹಿಂಪಡೆಯಿತು.

ಜಿಯಾ ಖಾನ್‌ ಸಾವಿನ ತನಿಖೆಯಲ್ಲಿ ಸಿಬಿಐ ತಪ್ಪೆಸಗಿದೆ ಎಂದಿದ್ದ ಇಂಗ್ಲೆಂಡ್‌ ಮೂಲದ ಕಾನೂನು ಸಂಸ್ಥೆ ಸ್ಕಾರ್ಮನ್ಸ್‌ ಸಿದ್ಧಪಡಿಸಿದ್ದ ಕಾನೂನು ಪರಿಶೀಲನಾ ವರದಿಯನ್ನು ನ್ಯಾಯಾಲಯ ಇದೇ ವೇಳೆ ನಿರಾಕರಿಸಿತು. ಅಲ್ಲದೆ, ವರದಿಯಲ್ಲಿ ಬಳಸಲಾಗಿರುವ ಪದಗಳು, ಬರೆದಿರುವ ರೀತಿಯ ಬಗ್ಗೆ ಆಘಾತ ವ್ಯಕ್ತಪಡಿಸಿತು. ವಿಚಾರಣೆಗೂ ಮೊದಲೇ ತೀರ್ಪನ್ನು ವರದಿ ನೀಡುವಂತಿದೆ ಎಂದು ಆಕ್ಷೇಪಿಸಿತು. ಅಲ್ಲದೆ, ಅರ್ಜಿದಾರರು ಎತ್ತಿರುವ ಪ್ರಶ್ನೆಗಳ ಬಗ್ಗೆ ನ್ಯಾಯಾಲಯ ವಿವರವಾದ ಆದೇಶ ನೀಡಿದ್ದು, ಅದನ್ನು ಸುಪ್ರೀಂ ಕೋರ್ಟ್‌ ಸಹ ಎತ್ತಿ ಹಿಡಿದಿದೆ. ಹೀಗಿರುವಾಗ, ಭಾರತದ ಕಾನೂನಿನಡಿ ಮಾನ್ಯತೆ ಪಡೆದಿಲ್ಲದ ಸಂಸ್ಥೆಯೊಂದು ಉದ್ದಟತನದಿಂದ ನೀಡಿರುವ ಸಲಹೆಗಳು, ಮಾಡಿರುವ ಶಿಫಾರಸ್ಸುಗಳ ಬಗ್ಗೆ ಕೆಂಡಾಮಂಡಲವಾಯಿತು.

ಜಿಯಾ ಸಾವಿನ ಸುತ್ತ...

ಒಂಬತ್ತು ವರ್ಷಗಳ ಹಿಂದೆ, 2013ರಲ್ಲಿ ನಟಿ ಜಿಯ ಖಾನ್‌ ಅವರ ಶವ ಮುಂಬೈನ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತು. ʼನಿಶಬ್ದ್‌ʼ ಚಿತ್ರದ ನಟನೆಯಿಂದ ಚಿತ್ರರಂಗದಲ್ಲಿ ಗುರುಸಿಸಿಕೊಂಡಿದ್ದ ನಟಿಯ ಸಾವಿಗೆ ಸಂಬಂಧಿಸಿದಂತೆ ಆಕೆಯ ಗೆಳೆಯ ಸೂರಜ್‌ ಪಾಂಚೋಲಿ ವಿರುದ್ಧ ಬಲವಾದ ಆರೋಪಗಳನ್ನು ಮಾಡಲಾಗಿತ್ತು. ಆದರೆ ನಟಿ ಜಿಯಾ ಅವರದ್ದು ಆತ್ಮಹತ್ಯೆ ಎಂದು ಸಿಬಿಐ ಆರೋಪ ಪಟ್ಟಿ ಸಲ್ಲಿಸಿತ್ತು. ಅವರದ್ದು ಆತ್ಮಹತ್ಯೆಯಲ್ಲ ಕೊಲೆ ಎಂದು ಆಕೆಯ ತಾಯಿ ರಬಿಯಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಸಿಬಿಐ ತನಿಖೆಯಲ್ಲಿ ದೋಷಗಳಿವೆ ಎಂದು ಹೇಳಿ ಎಫ್‌ಬಿಐ ತನಿಖೆ ನಡೆಸಬೇಕೆಂದು ಮನವಿ ಮಾಡಿದ್ದರು.