Anil Deshmukh, Bombay HC and ED 
ಸುದ್ದಿಗಳು

ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಹಾರಾಷ್ಟ್ರದ ರಾಜಕಾರಣಿ ಅನಿಲ್ ದೇಶಮುಖ್‌ಗೆ ಬಾಂಬೆ ಹೈಕೋರ್ಟ್ ಜಾಮೀನು

ಆದರೆ, ಭ್ರಷ್ಟಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುತ್ತಿರುವ ಕಾರಣ ದೇಶಮುಖ್ ಅವರು ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಮುಂದುವರಿಯಲಿದ್ದಾರೆ.

Bar & Bench

ಜಾರಿ ನಿರ್ದೇಶನಾಲಯ (ಇ ಡಿ) ತನಿಖೆ ನಡೆಸುತ್ತಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಅನಿಲ್ ದೇಶ್‌ಮುಖ್‌ ಅವರಿಗೆ ಬಾಂಬೆ ಹೈಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ.

ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಜಾರಿ ನಿರ್ದೇಶನಾಲಯಕ್ಕೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ  ಜಾಮೀನು ಆದೇಶ ಅಕ್ಟೋಬರ್ 13ರಿಂದ ಜಾರಿಗೆ ತರುವಂತೆ ಹೈಕೋರ್ಟ್ ಸೂಚಿಸಿದೆ. ನ್ಯಾಯಮೂರ್ತಿ ಎನ್ ಜೆ ಜಮಾದಾರ್ ಅವರು ಮಂಗಳವಾರ ಮಧ್ಯಾಹ್ನ 2.30ಕ್ಕೆ ಆದೇಶ ಪ್ರಕಟಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಸ್ಟ್‌ಗೆ ಸಂದಾಯಗೊಂಡಿರುವ ಮೊದಲ ಎರಡು ಅಂಶಗಳು ಅಪರಾಧದ ಗಳಿಕೆಗಳು ಎನಿಸುವುದಿಲ್ಲ ಎಂದು ನಾವು ಭಾವಿಸಿದ್ದೇವೆ. ಮೂರನೇ ಅಂಶ (ಸೇವೆಯಿಂದ ವಜಾಗೊಂಡಿರುವ ಮುಂಬೈ ಪೊಲೀಸ್‌ ಅಧಿಕಾರಿ) ಸಚಿನ್‌ ವಾಜೆ ಅವರ ಹೇಳಿಕೆಯನ್ನು ಅವಲಂಬಿಸಿದ್ದು ಇದು ಚರ್ಚೆಯಲ್ಲಿ ಅರ್ಜಿದಾರರ (ದೇಶಮುಖ್‌) ಪರ ನಿಲ್ಲುತ್ತದೆ. ಅರ್ಜಿದಾರರಿಗೆ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ (ಪಿಎಂಎಲ್‌ಎ) ಸೆಕ್ಷನ್ 45ರ ನಿಬಂಧನೆಯ (ಜಾಮೀನಿನ) ಪ್ರಯೋಜನವೂ ದೊರೆಯುತ್ತದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ಆದರೆ, ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುತ್ತಿರುವ ಕಾರಣ ದೇಶಮುಖ್ ಅವರು ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಮುಂದುವರಿಯಲಿದ್ದಾರೆ. ವಕೀಲರಾದ ಡಾ. ಜೈಶ್ರೀ ಪಾಟೀಲ್ ಅವರ ದೂರನ್ನು ಆಧರಿಸಿ ನಡೆಸಿದ ಪ್ರಾಥಮಿಕ ತನಿಖೆ ಆಧಾರದ ಮೇಲೆ, ಸಿಬಿಐ ದೇಶಮುಖ್ ಮತ್ತು ಕೆಲ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿತ್ತು.