Bombay High Court  
ಸುದ್ದಿಗಳು

ವಂಚನೆ ಪ್ರಕರಣ: ಸುಕೇಶ್ ಚಂದ್ರಶೇಖರ್‌ಗೆ ಬಾಂಬೆ ಹೈಕೋರ್ಟ್ ಜಾಮೀನು

ಅಪರಾಧಿ ಎಂದು ಸಾಬೀತಾದರೆ ವಿಧಿಸಬಹುದಾದ ಗರಿಷ್ಠ ಶಿಕ್ಷೆಗಿಂತ ಹೆಚ್ಚಿನದನ್ನು 7 ವರ್ಷಗಳಿಂದ ಜೈಲಿನಲ್ಲಿರುವ ಚಂದ್ರಶೇಖರ್ ಅನುಭವಿಸಿದ್ದಾನೆ ಎಂದಿದೆ ನ್ಯಾಯಾಲಯ.

Bar & Bench

ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್‌ಗೆ 2015ರಲ್ಲಿ ದಾಖಲಾದ ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಗುರುವಾರ ಜಾಮೀನು ನೀಡಿದೆ. [ಶೇಖರ್ ಚಂದ್ರಶೇಖರ್  ಮತ್ತು  ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ]

ಅಪರಾಧಿ ಎಂದು ಸಾಬೀತಾದರೆ ವಿಧಿಸುವ ಗರಿಷ್ಠ ಶಿಕ್ಷೆಗಿಂತಲೂ ಹೆಚ್ಚಿನ ಅವಧಿಯ ಸೆರೆವಾಸವನ್ನು ಆತ ಅನುಭವಿಸಿದ್ದಾನೆ ಎಂದು ನ್ಯಾ. ಮನೀಶ್ ಪಿತಾಳೆ ಹೇಳಿದ್ದಾರೆ.

"...ಅರ್ಜಿದಾರ ಅನುಭವಿಸಿದ ಒಟ್ಟು ಸೆರೆವಾಸದ ಅವಧಿ ಸುಮಾರು ಏಳು ವರ್ಷ ಮತ್ತು ಹತ್ತು ತಿಂಗಳು. ಇದು ನಿಸ್ಸಂಶಯವಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾದ ಅಪರಾಧಗಳಿಗಾಗಿ ಅರ್ಜಿದಾರ ತಪ್ಪಿತಸ್ಥನಾಗಿದ್ದರೂ ಆತನಿಗೆ ವಿಧಿಸಬಹುದಾದ ಗರಿಷ್ಠ ಶಿಕ್ಷೆಯ ಅವಧಿಗಿಂತ ಹೆಚ್ಚಿನದಾಗಿದೆ” ಎಂದು ಆದೇಶ ವಿವರಿಸಿದೆ.

ಆರೋಪಿ ತನಗೆ ವಿಧಿಸಲಾದ ಗರಿಷ್ಠ ಶಿಕ್ಷೆಯ ಅರ್ಧಕ್ಕಿಂತ ಹೆಚ್ಚು ಅವಧಿಯನ್ನು ಅನುಭವಿಸಿದ್ದರೆ ಆಗ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುತ್ತದೆ ಎಂದು ಕೂಡ ನ್ಯಾಯಾಲಯ ವಿವರಿಸಿದೆ.

ಚಂದ್ರಶೇಖರ್ ಮತ್ತು ಆತನ ಗೆಳತಿ ನಕಲಿ ಕಂಪೆನಿಯೊಂದನ್ನು ಸೃಷ್ಟಿಸಿ ಹೂಡಿಕೆ ಮಾಡುವಂತೆ ಪುಸಲಾಯಿಸಿದ್ದರು. ಇವರಿಬ್ಬರು ಪೊಂಜಿ ಸ್ಕೀಮ್ ಮೂಲಕ ₹19 ಕೋಟಿ ಸಂಗ್ರಹಿಸಿದ್ದಾರೆ ಎಂಬುದು ಪ್ರಾಸಿಕ್ಯೂಷನ್ ವಾದವಾಗಿತ್ತು.

ಮೇ 2015 ರಲ್ಲಿ ಚಂದ್ರಶೇಖರ್‌ ಬಂಧನವಾಗಿತ್ತು. ಆತನ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ತಿರಸ್ಕರಿಸಿತ್ತು. ಬಳಿಕ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದ ಆತನಿಗೆ ಷರತ್ತುಬದ್ಧ ಜಾಮೀನು ದೊರೆತಿತ್ತು. ಸೆಪ್ಟೆಂಬರ್ 2016 ರಲ್ಲಿ ಬಿಡುಗಡೆಯ ಆದೇಶ ಹೊರಡಿಸಲಾಗಿತ್ತು. ಆದರೆ ಷರತ್ತು ಈಡೇರಿಸಲು ವಿಫಲವಾದ ಹಿನ್ನೆಲೆಯಲ್ಲಿ ಜಾಮೀನನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿತ್ತು. ಪರಿಣಾಮ ಏಪ್ರಿಲ್ 2017ರಲ್ಲಿ ಆತನನ್ನು ಮತ್ತೆ ಬಂಧಿಸಲಾಗಿತ್ತು.

ಮಹಾರಾಷ್ಟ್ರ ಠೇವಣಿದಾರರ (ಹಣಕಾಸು ಸಂಸ್ಥೆಗಳಲ್ಲಿ) ರಕ್ಷಣಾ ಹಿತಾಸಕ್ತಿ ಕಾಯಿದೆ- 1999 [ಎಂಪಿಐಡಿ ಕಾಯಿದೆ] ಅಡಿಯಲ್ಲಿ ರೂಪುಗೊಂಡ ನ್ಯಾಯಾಲಯ ಆತನಿಗೆ ಜಾಮೀನು ನೀಡಲು 2020ರಲ್ಲಿ ನಿರಾಕರಿಸಿತ್ತು. ಹೀಗಾಗಿ ಹೈಕೋರ್ಟ್‌ನಲ್ಲಿ ಆತ ಪ್ರಸ್ತುತ ಮೇಲ್ಮನವಿ ಸಲ್ಲಿಸಿದ್ದ.

ಚಂದ್ರಶೇಖರ್ ಅನುಭವಿಸಿದ ಎರಡನೇ ಅವಧಿಯ (ಏಪ್ರಿಲ್ 4, 2017 ರಿಂದ ಇಂದಿನವರೆಗೆ) ಸೆರೆವಾಸ ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ ಎಂಬ ಸರ್ಕಾರದ ನಿಲುವನ್ನು ತಿರಸ್ಕರಿಸಿದ ಹೈಕೋರ್ಟ್ ಆತನ ಜಾಮೀನು ಅರ್ಜಿಯನ್ನು ಪುರಸ್ಕರಿಸಿ ಬಿಡುಗಡೆಗೆ ಆದೇಶಿಸಿತು.