Eknath Shinde, Uddhav Thackeray and Bombay High Court Twitter
ಸುದ್ದಿಗಳು

ಶಿವಾಜಿ ಪಾರ್ಕ್‌ನಲ್ಲಿ ದಸರಾ ಮೇಳ ನಡೆಸಲು ಶಿವಸೇನೆಯ ಉದ್ಧವ್‌ ಠಾಕ್ರೆ ಬಣಕ್ಕೆ ಅನುಮತಿಸಿದ ಬಾಂಬೆ ಹೈಕೋರ್ಟ್‌

ದಸರಾ ಮೇಳ ನಡೆಸಲು ಅನುಮತಿ ನಿರಾಕರಿಸಿ ಆದೇಶ ಹೊರಡಿಸಿದ್ದ ಬೃಹನ್‌ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಆದೇಶವನ್ನು ನ್ಯಾಯಮೂರ್ತಿಗಳಾದ ಆರ್‌ ಡಿ ಧನುಕಾ ಮತ್ತು ಕಮಲ್‌ ಖಾತಾ ಅವರು ವಜಾ ಮಾಡಿದ್ದಾರೆ.

Bar & Bench

ಪ್ರಸಕ್ತ ವರ್ಷದ ಮುಂಬೈನ ದಾದರ್‌ನಲ್ಲಿರುವ ಶಿವಾಜಿ ಪಾರ್ಕ್‌ನಲ್ಲಿ ದಸರಾ ಮೇಳ ನಡೆಸಲು ಶಿವಸೇನೆಯ ಉದ್ಧವ್‌ ಠಾಕ್ರೆ ಬಣಕ್ಕೆ ಅನುಮತಿ ನೀಡುವಂತೆ ಬೃಹನ್‌ಮುಂಬೈ ಮಹಾನಗರ ಪಾಲಿಕೆಗೆ (ಬಿಎಂಸಿ) ಶುಕ್ರವಾರ ಬಾಂಬೆ ಹೈಕೋರ್ಟ್‌ ನಿರ್ದೇಶಿಸಿದೆ.

ದಸರಾ ಮೇಳ ನಡೆಸಲು ಅನುಮತಿ ನಿರಾಕರಿಸಿ ಆದೇಶ ಹೊರಡಿಸಿದ್ದ ಬಿಎಂಸಿ ಆದೇಶವನ್ನು ನ್ಯಾಯಮೂರ್ತಿಗಳಾದ ಆರ್‌ ಡಿ ಧನುಕಾ ಮತ್ತು ಕಮಲ್‌ ಖಾತಾ ನೇತೃತ್ವದ ವಿಭಾಗೀಯ ಪೀಠವು ವಜಾ ಮಾಡಿದೆ.

“ಬಿಎಂಸಿ ತೆಗೆದುಕೊಂಡಿರುವ ನಿರ್ಧಾರವು ಪ್ರಾಮಾಣಿಕ ತೀರ್ಮಾನವಲ್ಲ” ಎಂದು ಪೀಠ ಹೇಳಿದೆ. ಅಕ್ಟೋಬರ್‌ 2ರಿಂದ 6ರವರೆಗೆ ಶಿವಾಜಿ ಪಾರ್ಕ್‌ನಲ್ಲಿ ಸಮಾವೇಶ ನಡೆಸಲು ನ್ಯಾಯಾಲಯ ಅನುಮತಿಸಿದೆ.

ಇಡೀ ಸಮಾವೇಶವನ್ನು ಪೊಲೀಸರು ರೆಕಾರ್ಡ್‌ ಮಾಡಿಕೊಳ್ಳುವ ಸ್ವಾತಂತ್ರ್ಯ ಹೊಂದಿದ್ದಾರೆ. ಒಂದೊಮ್ಮೆಅನಪೇಕ್ಷಿತ ವರ್ತನೆ ಕಂಡುಬಂದರೆ ಮುಂದಿನ ವರ್ಷ ಅನುಮತಿ ನಿರಾಕರಿಸಲು ಅದನ್ನೇ ಆಧಾರವಾಗಿಸಿಕೊಳ್ಳಬಹುದು ಎಂದು ಪೀಠವು ಸ್ಪಷ್ಟಪಡಿಸಿದೆ. ಆಗಸ್ಟ್‌ 22ರಿಂದ ಸೆಪ್ಟೆಂಬರ್‌ 21ರವರೆಗೆ ಅರ್ಜಿಯನ್ನು ಏಕೆ ಪರಿಗಣಿಸಿಲ್ಲ ಎಂದು ವಿವರಿಸಲು ಬಿಎಂಸಿ ವಿಫಲವಾಗಿದೆ ಎಂದು ಪೀಠ ಹೇಳಿದೆ.

“ಸಾಕಷ್ಟು ಸಮಯ ತೆಗೆದುಕೊಂಡೂ ಅರ್ಜಿಯ ಕುರಿತು ನಿರ್ಧರಿಸಿಲ್ಲ. ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಮನವಿ ಹಂಚಿಕೊಂಡ ಬಳಿಕ ಪೊಲೀಸ್‌ ವರದಿ ಕೇಳಲಾಗಿದೆ. ನಮ್ಮ ದೃಷ್ಟಿಯಲ್ಲಿ ಬಿಎಂಸಿ ನಡೆಯು ಕಾನೂನು ಪ್ರಕ್ರಿಯೆಯ ಸಂಪೂರ್ಣ ದುರ್ಬಳಕೆಯಾಗಿದೆ. ಸಂವಿಧಾನದ 226ನೇ ವಿಧಿಯಡಿ ನಾವು ಅಧಿಕಾರ ಚಲಾಯಿಸುತ್ತಿದ್ದು, ಮತ್ತೊಂದು ಅರ್ಜಿ ಸಲ್ಲಿಕೆಯಾಗಿದೆ ಎಂದು ಅನುಮತಿ ನೀಡಲು ನಿರಾಕರಿಸಿರುವ ಬಿಎಂಸಿಯು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ. ಹೀಗಾಗಿ, ಮಧ್ಯಪ್ರವೇಶಿಸಿ ಅನುಮತಿ ಕೊಡಬೇಕಿದೆ ಎಂದು ಪ್ರಕರಣ ಬಯಸುತ್ತಿದೆ. ಹಲವು ಷರತ್ತುಗಳನ್ನು ವಿಧಿಸಿ ಅನುಮತಿ ನೀಡಬಹುದಾಗಿದ್ದು, ಅವುಗಳನ್ನು ಅರ್ಜಿದಾರರು ಪಾಲಿಸಬೇಕು” ಎಂದು ಪೀಠವು ಆದೇಶದಲ್ಲಿ ಹೇಳಿದೆ.