ದಸರಾ ಮೇಳಕ್ಕೆ ಅನುಮತಿ: ಉದ್ಧವ್ ಬಣ ಬಾಂಬೆ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಮನವಿಗೆ ಶಿಂಧೆ ಬಣದ ತೀವ್ರ ವಿರೋಧ
ಮುಂಬೈನ ದಾದರ್‌ನಲ್ಲಿರುವ ಶಿವಾಜಿ ಪಾರ್ಕ್‌ನಲ್ಲಿ ವಾರ್ಷಿಕ ದಸರಾ ಮೆರವಣಿಗೆ ಆಯೋಜಿಸಲು ಪಕ್ಷಕ್ಕೆ ಅನುಮತಿ ನೀಡುವುದಕ್ಕಾಗಿ ಬೃಹನ್‌ಮುಂಬೈ ಮಹಾನಗರ ಪಾಲಿಕೆಗೆ (ಬಿಎಂಸಿ) ನಿರ್ದೇಶಿಸಬೇಕು ಎಂದು ಕೋರಿ ಬಾಂಬೆ ಹೈಕೋರ್ಟ್‌ನಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಪಕ್ಷದ ಬಣ ಸಲ್ಲಿಸಿದ ಮನವಿಗೆ ಶಿವಸೇನೆಯ ಏಕನಾಥ್ ಶಿಂಧೆ ಬಣ ಗುರುವಾರ ತೀವ್ರ ವಿರೋಧ ವ್ಯಕ್ತಪಡಿಸಿದೆ.
ʼನಿಜವಾದ ಶಿವಸೇನೆಯನ್ನು ಯಾರು ಪ್ರತಿನಿಧಿಸುತ್ತಾರೆʼ ಎಂಬ ಪ್ರಕರಣವನ್ನು ಸುಪ್ರೀಂ ಕೋರ್ಟ್ ಅಥವಾ ಭಾರತದ ಚುನಾವಣಾ ಆಯೋಗ ಪರಿಹರಿಸುವವರೆಗೆ ಪ್ರಸ್ತುತ ಪ್ರಕರಣದ ವಿಚಾರಣೆಗೆ ತಡೆ ನೀಡುವಂತೆ ಶಿಂಧೆ ಬಣದ ಶಾಸಕ ಸದಾ ಸರ್ವಾಂಕರ್ ಕೋರಿದ್ದಾರೆ.
ಶಿವಸೇನೆಗೆ ಸೇರಿಲ್ಲದ ಠಾಕ್ರೆ ಬಣ ನ್ಯಾಯಾಲಯದ ಎದುರು ವಾಸ್ತವಾಂಶಗಳ ಕುರಿತು ದಿಕ್ಕುತಪ್ಪಿಸುತ್ತಿದೆ. ನಿಜವಾದ ಶಿವಸೇನೆಯನ್ನು ಯಾರು ಪ್ರತಿನಿಧಿಸುತ್ತಾರೆ ಎಂಬುದರ ಕುರಿತು ವಿವಾದವಿದ್ದು ಪ್ರಕರಣ ಭಾರತದ ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿದೆ ಎಂದು ಸರ್ವಾಂಕರ್ ಅವರು ಪ್ರಕರಣದಲ್ಲಿ ಮಧ್ಯ ಪ್ರವೇಶ ಕೋರಿ ಸಲ್ಲಿಸಿರುವ ಅರ್ಜಿ ತಿಳಿಸಿದೆ. ಶುಕ್ರವಾರ ಪ್ರಕರಣದ ವಿಚಾರಣೆ ನಡೆಯಲಿದೆ.
ಇಂದಿನ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿಗಳಾದ ಆರ್ ಡಿ ಧನುಕಾ ಮತ್ತು ಕಮಲ್ ಖಾತಾ ಅವರಿದ್ದ ಪೀಠ ಠಾಕ್ರೆ ಬಣ ಸಲ್ಲಿಸಿದ್ದ ಮನವಿಗೆ ತಿದ್ದುಪಡಿ ಮಾಡಲು ಮತ್ತು ಸೆಪ್ಟೆಂಬರ್ 21 ರಂದು ಬೃಹನ್ಮುಂಬೈ ಮಹಾನಗರ ಪಾಲಿಕೆ ನೀಡಿದ್ದ ಆದೇಶವನ್ನು ಪ್ರಶ್ನಿಸಲು ಅನುಮತಿ ನೀಡಿ ಸಂಬಂಧಿಸಿದ ಪಕ್ಷಕಾರರಿಗೆ ತಿಳಿಸಿತು.