CJ Dipankar Datta and Justice MS Karnik 
ಸುದ್ದಿಗಳು

ಎಂಐಆರ್‌ ಕಾಯಿದೆಯ ಆನ್ವಯಿಕತೆ ಪ್ರಶ್ನಿಸಿದ್ದ ಅದಾನಿ ಎಲೆಕ್ಟ್ರಿಸಿಟಿಗೆ ₹2 ಲಕ್ಷ ದಂಡ ವಿಧಿಸಿದ ಬಾಂಬೆ ಹೈಕೋರ್ಟ್

ಅದಾನಿ ವಿದ್ಯುತ್‌ ಸಂಸ್ಥೆಗೆ ಎಂಐಆರ್ ಕಾಯಿದೆ ಅನ್ವಯವಾಗುವುದರಿಂದ ಅರ್ಜಿಗೆ ಅರ್ಹತೆ ಇಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದ್ದು ಕಾರ್ಮಿಕರ ಒಕ್ಕೂಟದೊಂದಿಗಿನ ವ್ಯಾಜ್ಯ ಎಳೆದುತಂದಿದ್ದಕ್ಕಾಗಿ ದಂಡ ವಿಧಿಸಿತು.

Bar & Bench

ಮಹಾರಾಷ್ಟ್ರ ಕೈಗಾರಿಕಾ ಸಂಬಂಧಗಳ ಕಾಯಿದೆಯ (ಎಂಐಆರ್‌ಎ) ನಿಯಮಾವಳಿಗಳ ಅನ್ವಯಿಸುವಿಕೆ ಪ್ರಶ್ನಿಸಿ ಅದಾನಿ ಎಲೆಕ್ಟ್ರಿಸಿಟಿ ಸಂಸ್ಥೆಯು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಬಾಂಬೆ ಹೈಕೋರ್ಟ್‌ ಈ ಸಂಬಂಧ ಕಂಪೆನಿಗೆ ₹ 2 ಲಕ್ಷ ದಂಡ ವಿಧಿಸಿದೆ [ಅದಾನಿ ಎಲೆಕ್ಟ್ರಿಸಿಟಿ ಮುಂಬೈ ಲಿಮಿಟೆಡ್‌ ಮತ್ತು ಮುಖ್ಯ ಸಂಧಾನಕಾರರ ಇನ್ನಿತರರ ನಡುವಣ ಪ್ರಕರಣ].

ಉದ್ಯೋಗದಾತರು ಮತ್ತು ಉದ್ಯೋಗಿಗಳ ನಡುವಿನ ಸಂಬಂಧ ನಿಯಂತ್ರಣ, ಕೈಗಾರಿಕಾ ವಿವಾದ ಇತ್ಯರ್ಥ ಇತ್ಯಾದಿ ಉದ್ದೇಶಗಳಿಗಾಗಿ ಎಂಐಆರ್‌ ಕಾಯಿದೆಯನ್ನು ಜಾರಿಗೆ ತರಲಾಗಿದೆ.

ಅದಾನಿ ವಿದ್ಯುತ್‌ ಸಂಸ್ಥೆಗೆ ಕಾಯಿದೆ ಅನ್ವಯವಾಗುವುದರಿಂದ ಅದು ಸಲ್ಲಿಸಿರುವ ಮನವಿಗೆ ಅರ್ಹತೆ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಂಕರ್‌ ದತ್ತಾ ಮತ್ತು ನ್ಯಾಯಮೂರ್ತಿ ಎಂ ಎಸ್‌ ಕಾರ್ಣಿಕ್‌ ಅವರಿದ್ದ ಪೀಠ ಅಭಿಪ್ರಾಯಪಟ್ಟಿದ್ದು ಕಾರ್ಮಿಕರ ಒಕ್ಕೂಟದೊಂದಿಗಿನ ವ್ಯಾಜ್ಯ ಎಳೆದುತಂದಿದ್ದಕ್ಕಾಗಿ ದಂಡ ವಿಧಿಸಿತು. ಮೂರು ತಿಂಗಳೊಳಗೆ ದಂಡ ಪಾವತಿಸುವಂತೆ ನ್ಯಾಯಾಲಯ ಸೂಚಿಸಿದೆ.

ಮುಂಬೈ ವಿದ್ಯುತ್‌ ಕಾರ್ಮಿಕರ ಸಂಘ (ಎಂಇಡಬ್ಲ್ಯೂಯು) ತನ್ನ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಕಂಪೆನಿಗೆ ಪತ್ರ ಬರೆದಿತ್ತು. ಇದನ್ನು ಅದಾನಿ ಎಲೆಕ್ಟ್ರಿಕಲ್ಸ್‌ ನಿರಾಕರಿಸಿತ್ತು. ವಿವಾದ ಬಗೆಹರಿಸಲು ಮುಖ್ಯ ಸಂಧಾನಕಾರರು ನಡೆಸಿದ ಯತ್ನವೂ ವಿಫಲವಾಗಿತ್ತು. ಬಳಿಕ ವ್ಯಾಜ್ಯ ಕೈಗಾರಿಕಾ ನ್ಯಾಯಾಲಯದ ಮೆಟ್ಟಿಲೇರಿತು.

ತಾನಲ್ಲದೆ ಬೇರಾವುದೇ ಸಂಘಟನೆಗಳೊಂದಿಗೆ ಸಂಧಾನದಲ್ಲಿ ತೊಡಗದಂತೆ ಅದಾನಿ ಎಲೆಕ್ಟ್ರಿಸಿಟಿಗೆ ತಡೆ ನೀಡಬೇಕೆಂದು ಎಂಎಡಬ್ಲ್ಯೂಯು ಸಲ್ಲಿಸಿದ್ದ ಅರ್ಜಿಯನ್ನು ಕೈಗಾರಿಕಾ ನ್ಯಾಯಾಲಯ ಪುರಸ್ಕರಿಸಿತ್ತು. ಇದನ್ನು ಅದಾನಿ ಎಲೆಕ್ಟ್ರಿಸಿಟಿ ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.