Bombay High Court
Bombay High Court 
ಸುದ್ದಿಗಳು

ವಾದ ಮಂಡಿಸಿದ್ದರೂ ಕಾಲಾವಕಾಶಕ್ಕೆ ಮೊರೆ: ಜಾಮೀನು ಕೋರಿದ್ದ 16 ಮಂದಿಗೆ ದಂಡ ವಿಧಿಸಿದ ಬಾಂಬೆ ಹೈಕೋರ್ಟ್

Bar & Bench

ಸಾಕಷ್ಟು ವಾದ ಮಂಡಿಸಿದ ಬಳಿಕವೂ ಪ್ರಕರಣಗಳಲ್ಲಿ ಸೂಚನೆ ಪಡೆಯಲು ತಮ್ಮ ವಕೀಲರು ಕಾಲಾವಕಾಶ ಕೋರುತ್ತಿದ್ದ ಹಿನ್ನೆಲೆಯಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ 16 ಮಂದಿಗೆ ಬಾಂಬೆ ಹೈಕೋರ್ಟ್‌ ತಲಾ ₹ 5,000 ದಂಡ ವಿಧಿಸಿದೆ. (ಸಂಭಾಜಿ ಶಿರಸತ್ ಮತ್ತು ಮಹಾರಾಷ್ಟ್ರ ಹಾಗೂ ಸಂಬಂಧಿತ ವಿಷಯಗಳು).

ಶಿಕ್ಷಕರು ಮತ್ತು ರಾಜ್ಯ ಶಿಕ್ಷಣಾಧಿಕಾರಿಗಳು ಸಲ್ಲಿಸಿದ್ದ 16 ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎ ಎಸ್ ಗಡ್ಕರಿ ಅವರು ನಡೆಸಿದರು. ವಿಚಾರಣೆಯ ವೇಳೆ, ವಕೀಲ ನಿರಂಜನ್ ಮುಂಡರಗಿ ಅವರು ಅರ್ಜಿದಾರರ ಪರವಾಗಿ ವಾದಿಸಿದ್ದರು. ಆದರೆ ಅರ್ಜಿಯನ್ನು ಮನ್ನಿಸಲು ನ್ಯಾಯಮೂರ್ತಿಗಳು ಒಪ್ಪಲಿಲ್ಲ ಎಂದು ಅರ್ಜಿದಾರರ ಪರ ಹಾಜರಾದ ವಕೀಲರೊಬ್ಬರು 'ಬಾರ್ & ಬೆಂಚ್‌'ಗೆ ತಿಳಿಸಿದರು.

ಅರ್ಜಿಗಳನ್ನು ಮುಂದೂಡಬೇಕು ಎಂಬ ಕೋರಿಕೆಯಿಂದಾಗಿ ಗೊಂದಲಕ್ಕೀಡಾದ ನ್ಯಾಯಾಲಯ “ಸಂಬಂಧಪಟ್ಟ ವಕೀಲರು ರೂಢಿಸಿಕೊಂಡಿರುವ ಅಭ್ಯಾಸಕ್ಕೆ ಮೆಚ್ಚುಗೆ ಇಲ್ಲ” ಎಂದು ಆದೇಶದಲ್ಲಿ ತಿಳಿಸಿತು. ಅರ್ಜಿದಾರರ ಪರ ವಕೀಲರು ರೋಸ್ಟರ್‌ನಲ್ಲಿ ಸಂಭವನೀಯ ಬದಲಾವಣೆಯಾಗುವುದರಿಂದಾಗಿ ನ್ಯಾಯಾಲಯದ ಬದಲಾವಣೆಯ ನಿರೀಕ್ಷೆಯಲ್ಲಿದ್ದಾರೆ ಎಂದು ಪೀಠ ಊಹಿಸಿತು ಎಂಬುದಾಗಿ ವಕೀಲರು ʼಬಾರ್‌ ಅಂಡ್‌ ಬೆಂಚ್‌ʼಗೆ ತಿಳಿಸಿದರು.

ಕಳಕಳಿಯ ವಿನಂತಿಗಳ ಮೇರೆಗೆ, ಪ್ರಕರಣದಲ್ಲಿ ವಾದ ಮಂಡಿಸಬೇಕಿದ್ದ ಆದರೆ ಮುಂಬೈನಿಂದ ಹೊರಗೆ ಪ್ರವಾಸ ಕೈಗೊಂಡಿದ್ದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ ಅವರಿಗೆ ಸೂಕ್ತ ದಂಡದೊಂದಿಗೆ ಷರತ್ತುಬದ್ಧ ಮುಂದೂಡಿಕೆಗೆ ನ್ಯಾಯಾಲಯ ಸಮ್ಮತಿಸಿತು. ದಂಡದಲ್ಲಿ ಸಡಿಲಿಕೆ ಮಾಡುವಂತೆ ಅರ್ಜಿದಾರರ ಪರ ವಕೀಲರು ಕೋರಿದ ಬಳಿಕ ಮಹಾರಾಷ್ಟ್ರ ಪೊಲೀಸ್ ಕಲ್ಯಾಣ ನಿಧಿಗೆ (MPWF) ಪಾವತಿಸಲು ಸೂಚಿಸಿ ಪ್ರತಿ ಅರ್ಜಿದಾರರಿಗೆ ₹ 5,000 ದಂಡ ವಿಧಿಸಿತು.

ವಂಚನೆ ಮತ್ತು ಕ್ರಿಮಿನಲ್‌ ಪಿತೂರಿಯ ಅಪರಾಧಗಳಿಗಾಗಿ ಭಾರತೀಯ ದಂಡ ಸಂಹಿತೆ ಮತ್ತು ಭ್ರಷ್ಟಾಚಾರ ತಡೆ ಕಾಯಿದೆಯಡಿ ದಾಖಲಿಸಲಾಗಿದ್ದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಅರ್ಜಿದಾರರು ನಿರೀಕ್ಷಣಾ ಜಾಮೀನು ಕೋರಿದ್ದರು. ಮುಂದಿನ ವಿಚಾರಣೆ ಅ. 6ಕ್ಕೆ ನಿಗದಿಯಾಗಿದೆ.