<div class="paragraphs"><p>Bombay High Court Lawyers</p></div>

Bombay High Court Lawyers

 
ಸುದ್ದಿಗಳು

ಕಿರಿಯ ವಕೀಲರಿಗೆ ₹ 5,000 ಮಾಸಿಕ ಸ್ಟೈಪೆಂಡ್: ಮಹಾರಾಷ್ಟ್ರ, ಗೋವಾ ವಕೀಲರ ಪರಿಷತ್ತಿಗೆ ಬಾಂಬೆ ಹೈಕೋರ್ಟ್ ನೋಟಿಸ್ ಜಾರಿ

Bar & Bench

ಕಿರಿಯ ವಕೀಲರಿಗೆ ₹ 5 ಸಾವಿರ ಸ್ಟೈಪೆಂಡ್ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್) ಸಂಬಂಧಿಸಿದಂತೆ ಮಹಾರಾಷ್ಟ್ರ, ಗೋವಾ ವಕೀಲರ ಪರಿಷತ್ತುಗಳಿಗೆ ಬಾಂಬೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ಮಹಾರಾಷ್ಟ್ರ ಮತ್ತು ಗೋವಾದ ಬಾರ್ ಕೌನ್ಸಿಲ್ ಮತ್ತು ವಕೀಲರ ಕಲ್ಯಾಣ ನಿಧಿ ಟ್ರಸ್ಟ್ ಸಮಿತಿ ಮತ್ತು ಮಹಾರಾಷ್ಟ್ರ ಸರ್ಕಾರ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡುವಂತೆ ಬಾಂಬೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಎಂ ಎಸ್ ಕಾರ್ಣಿಕ್ ಅವರಿದ್ದ ಪೀಠ ಕೇಳಿದೆ. ಕಿರಿಯ ವಕೀಲರಾದ ಅಜಿತ್ ದೇಶಪಾಂಡೆ, ಅಕ್ಷಯ್ ದೇಸಾಯಿ ಮತ್ತಿತರರು ಪಿಐಎಲ್‌ ಸಲ್ಲಿಸಿದ್ದರು.

ಕೋವಿಡ್ -19 ರೋಗ ಹಾಗೂ ಅದರಿಂದುಂಟಾದ ಲಾಕ್‌ಡೌನ್‌ನಿಂದಾಗಿ ಕಿರಿಯ ವಕೀಲರು ಆರ್ಥಿಕವಾಗಿ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ವಕೀಲರ ಪರಿಷತ್ತು ಹಾಗೂ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಕಿರಿಯ ವಕೀಲರಿಗೆ ನೆರವು ನೀಡಬೇಕು. ದೆಹಲಿ, ತಮಿಳುನಾಡು, ಕೇರಳ, ಜಾರ್ಖಂಡ್ ಮತ್ತು ಆಂಧ್ರಪ್ರದೇಶ ಸೇರಿದಂತೆ ದೇಶಾದ್ಯಂತ ವಿವಿಧ ಹೈಕೋರ್ಟ್‌ಗಳು ಈಗಾಗಲೇ ಕಿರಿಯ ವಕೀಲರಿಗೆ ಹಣಕಾಸಿನ ನೆರವು ನೀಡುವಂತೆ ಆಯಾ ಅಧಿಕಾರಿಗಳಿಗೆ ನಿರ್ದೇಶನ ನೀಡಿವೆ ಎಂದು ಮನವಿಯಲ್ಲಿ ತಿಳಿಸಲಾಗಿತ್ತು.

ವಕೀಲರ ಪರಿಷತ್ತಿನಲ್ಲಿ ಸಾಕಷ್ಟು ಹಣ ಲಭ್ಯವಿದ್ದು, ಅದನ್ನು ಕಿರಿಯ ವಕೀಲರಿಗೆ ಸ್ಟೈಪೆಂಡ್‌ ರೀತಿಯ ಸೂಕ್ತ ಉದ್ದೇಶಕ್ಕಾಗಿ ಬಳಸಬೇಕು ಎಂದು ಅರ್ಜಿದಾರ ಪರ ವಕೀಲರು ವಾದಿಸಿದ್ದರು. ಮಾರ್ಚ್ 14 ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.