ಮುಂಬೈನ ಪೊಲೀಸ್ ಠಾಣೆಗಳ ಸುತ್ತಮುತ್ತಲಿನ ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸರು ಮುಟ್ಟುಗೋಲು ಹಾಕಿಕೊಂಡು ನಿಲ್ಲಿಸಿರುವ ವಾಹನಳಿಂದಾಗಿ ಹೆಚ್ಚುತ್ತಿರುವ ಸಮಸ್ಯೆ ಪರಿಹರಿಸಲು ಸ್ಪಷ್ಟ ನೀತಿ ರೂಪಿಸಿ ಸಲ್ಲಿಸುವಂತೆ ಬಾಂಬೆ ಹೈಕೋರ್ಟ್ ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ [ಮ್ಯಾರಥಾನ್ ಮ್ಯಾಕ್ಸಿಮಾ ಕಂಪನಿ ವಸತಿ ಸಂಘ ಮತ್ತು ಮುಂಬೈ ಮಹಾನಗರ ಪಾಲಿಕೆ ನಡುವಣ ಪ್ರಕರಣ].
ಮುಟ್ಟುಗೋಲು ಹಾಕಿಕೊಂಡ ವಾಹನಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸುವ ಬದಲು ಗೊತ್ತುಪಡಿಸಿದ ಸಂಗ್ರಹಾಗಾರಗಳಿಗೆ ತ್ವರಿತವಾಗಿ ಸ್ಥಳಾಂತರಿಸಲು ಕಾರ್ಯವಿಧಾನ ರೂಪಿಸುವಂತೆ ನ್ಯಾಯಮೂರ್ತಿಗಳಾದ ಜಿ ಎಸ್ ಕುಲಕರ್ಣಿ ಮತ್ತು ಜಸ್ಟೀಸ್ ಅದ್ವೈತ್ ಸೇತ್ನಾ ಅವರಿದ್ದ ಪೀಠ ಪೊಲೀಸರಿಗೆ ನಿರ್ದೇಶನ ನೀಡಿತು.
ಮುಟ್ಟುಗೋಲು ಹಾಕಿಕೊಂಡ ವಾಹನಗಳನ್ನು ತಮ್ಮ ಆವರಣದ ಬಳಿ ತೆರೆದ ಖಾಸಗಿ ಭೂಮಿಯಲ್ಲಿ ನಿಲ್ಲಿಸಲಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಮುಂಬೈನ ಮುಲುಂದ್‌ನಲ್ಲಿರುವ ಮ್ಯಾರಥಾನ್ ಮ್ಯಾಕ್ಸಿಮಾ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ.
ವರ್ಷಗಳ ಕಾಲ ಗಮನಿಸದೆ ಬಿಡಲಾಗುತ್ತಿದ್ದ ವಾಹನಗಳು, ಸ್ವಚ್ಛ ಪರಿಸರದಲ್ಲಿ ಕಣ್ಣು ಕುಕ್ಕುಂವತಿದ್ದು ನಿವಾಸಿಗಳು ಮತ್ತು ಪಾದಚಾರಿಗಳು ಆ ಸ್ಥಳಗಳಲ್ಲಿ ಸಂಚರಿಸುವುದು ದುಸ್ತರವಾಗುತ್ತಿದೆ ಎಂದು ಸೊಸೈಟಿ ದೂರಿತ್ತು.
ಎರಡು ವರ್ಷಗಳ ಹಿಂದೆಯೇ ಈ ಬಗ್ಗೆ ನೀತಿ ರೂಪಿಸುವಂತೆ ನ್ಯಾಯಮೂರ್ತಿ ಜಿ ಎಸ್ ಕುಲಕರ್ಣಿ ಅವರನ್ನೊಳಗೊಂಡ ಸಮನ್ವಯ ಪೀಠ ತಿಳಿಸಿದ್ದರೂ ಅಧಿಕಾರಿಗಳು ನಿಷ್ಕ್ರಿಯವಾಗಿರುವ ಬಗ್ಗೆ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿತು.
ಮುಂಬೈನಲ್ಲಿ ತೆರೆದ ಸ್ಥಳಗಳು ಲಭ್ಯವಿಲ್ಲ ಹೀಗಾಗಿ ಮುಟ್ಟುಗೋಲು ಹಾಕಿಕೊಂಡ ವಾಹನಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಇರಿಸಲು ಸಾಧ್ಯವಿಲ್ಲ. ಇದು ಸಾರ್ವಜನಿಕರಿಗೆ ಗಂಭೀರ ಅನನುಕೂಲ ಉಂಟುಮಾಡುತ್ತದೆ. ಪೊಲೀಸ್ ಠಾಣೆಗಳು ಮುಟ್ಟುಗೋಲು ಹಾಕಿಕೊಂಡ ವಾಹನಗಳನ್ನು ಪೊಲೀಸ್ ಠಾಣೆಗಳ ಹೊರಗೆ ವರ್ಷಗಳ ಕಾಲ ನಿಲುಗಡೆ ಮಾಡುವುದರಿಂದ ಜನರು ಬಳಸಬೇಕಾದ ಸಾರ್ವಜನಿಕ ರಸ್ತೆಗಳನ್ನು ಅತಿಕ್ರಮಿಸುವುದನ್ನು ನಾವು ನ್ಯಾಯಾಂಗ ಪರಿಗಣನೆಗೆ ತೆಗೆದುಕೊಳ್ಳಬಹುದು ಎಂದು ನ್ಯಾಯಾಲಯ ನುಡಿಯಿತು.
ರಸ್ತೆಗಳು, ಪಾದಚಾರಿ ಮಾರ್ಗಗಳು ಮತ್ತು ಖಾಸಗಿ ಭೂಮಿಯನ್ನು ಅಕ್ರಮವಾಗಿ ಆಕ್ರಮಿಸಿಕೊಳ್ಳುವುದರಿಂದ ಈಗಾಗಲೇ ತೊಂದರೆಯಲ್ಲಿ ಸಿಲುಕಿರುವ ಪಾದಚಾರಿಗಳ ಸ್ಥಿತಿ ಇನ್ನಷ್ಟು ಹದಗೆಡುತ್ತದೆ ಎಂದು ನ್ಯಾಯಾಲಯ ಹೇಳಿತು.
ಸಂಚಾರಕ್ಕೆ ಅಡ್ಡಿಯಾಗಿದ್ದರೂ ಮೂಕಪ್ರೇಕ್ಷಕರಂತೆ ಇರುವ ಸಿವಿಲ್ ಮತ್ತು ಟ್ರಾಫಿಕ್ ಅಧಿಕಾರಿಗಳ ನಿಷ್ಕ್ರಿಯತೆಯ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಅದು ಮುಟ್ಟುಗೋಲು ಹಾಕಿಕೊಂಡ ವಾಹನಗಳನ್ನು ತಕ್ಷಣವೇ ಗೊತ್ತುಪಡಿಸಿದ ಸಂಗ್ರಹಾಗಾರಗಳಿಗೆ ಸ್ಥಳಾಂತರಿಸಲು ಮತ್ತು ಸಾರ್ವಜನಿಕ ಅಥವಾ ವಸತಿ ಸ್ಥಳಗಳಲ್ಲಿ ಅವುಗಳನ್ನು ನಿಲ್ಲಿಸದಂತೆ ನೋಡಿಕೊಳ್ಳಲು ವಿವರವಾದ ಕಾರ್ಯವಿಧಾನ ಸಿದ್ಧಪಡಿಸುವಂತೆ ಮಹಾರಾಷ್ಟ್ರದ ಹೆಚ್ಚುವರಿ ಪೊಲೀಸ್ ಆಯುಕ್ತರು (ಸಂಚಾರ) ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 29ರಂದು ನಡೆಯಲಿದೆ.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]