
ಪೊಲೀಸರು ಸಿದ್ಧಪಡಿಸಿದ ಬ್ರೆತಲೈಜರ್ ಪರೀಕ್ಷಾ ಫಲಿತಾಂಶದ ಲಿಪಿಮುದ್ರಿತ ಪ್ರತಿಯನ್ನು ಮೋಟಾರು ವಾಹನ ಕಾಯಿದೆ 1988ರ ಸೆಕ್ಷನ್ 185ರಡಿ ಕುಡಿದು ವಾಹನ ಚಲಾಯಿಸುವ ಅಪರಾಧ ಸಾಬೀತುಪಡಿಸುವುದಕ್ಕೆ ಮಾನ್ಯ ಪುರಾವೆಯಾಗಿ ಪರಿಗಣಿಸಲಾಗದು ಎಂದು ಕೇರಳ ಹೈಕೋರ್ಟ್ ಈಚೆಗೆ ತೀರ್ಪು ನೀಡಿದೆ [ಧನೇಶ್ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಪರೀಕ್ಷೆಯ ಕೂಡಲೇ ತಯಾರಿಸಲಾದ ಮತ್ತು ಸೂಕ್ತವಾಗಿ ಪ್ರಮಾಣೀಕೃತವಾದ ಬ್ರೆತಲೈಜರ್ ಯಂತ್ರದ ಮೂಲಪ್ರತಿಯನ್ನು ಮಾತ್ರ ಸಾಕ್ಷ್ಯವಾಗಿ ಒಪ್ಪಬಹುದು ಎಂದು ನ್ಯಾಯಮೂರ್ತಿ ವಿ ಜಿ ಅರುಣ್ ತಿಳಿಸಿದರು.
“ಪರೀಕ್ಷೆಯ ಮೂಲಪ್ರತಿಯನ್ನು ನೀಡಿಲ್ಲ. ಬದಲಿಗೆ ಪೊಲೀಸರು ಸಿದ್ಧಪಡಿಸಿದ ಟೈಪ್ಡ್ ಪ್ರತಿಯನ್ನು ಅಂತಿಮ ವರದಿಯೊಂದಿಗೆ ಸಲ್ಲಿಸಲಾಗಿದೆ. ಆಕ್ಷೇಪಿಸಿರುವಂತೆ ಟೈಪ್‌ರಿಟನ್ ವರದಿಗೆ ಸಾಕ್ಷ್ಯದ ಮೌಲ್ಯ ಇರದು” ಎಂದು ನ್ಯಾಯಾಲಯ ಹೇಳಿದೆ.
ಮೋಟಾರ್ ವಾಹನ ಕಾಯಿದೆಯ ಸೆಕ್ಷನ್ 203(6) ರ ಅಡಿಯಲ್ಲಿ, ಬ್ರೆತಲೈಜರ್ ಪರೀಕ್ಷೆಯ ಫಲಿತಾಂಶದ ಮೂಲ ಪ್ರತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರೆ ಮಾತ್ರ ಸಾಕ್ಷ್ಯವಾಗಿ ಸ್ವೀಕರಿಸಬಹುದು ಎಂದು ನ್ಯಾಯಾಲಯ ವಿವರಿಸಿತು.
ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 279 (ದುಡುಕಿನ ಚಾಲನೆ) ಮತ್ತು ಮೋಟಾರ್ ವಾಹನ ಕಾಯಿದೆಯ ಸೆಕ್ಷನ್ 185ರ ಅಡಿಯಲ್ಲಿ ತನ್ನ ವಿರುದ್ಧ ಹೂಡಲಾದ ಕ್ರಮಗಳನ್ನು ರದ್ದುಗೊಳಿಸುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ.
ಪರೀಕ್ಷಾ ಯಂತ್ರದ ಮೂಲಪ್ರತಿಗೆ ಬದಲಿಗೆ ಬ್ರೆತಲೈಜರ್ ಪರೀಕ್ಷಾ ಫಲಿತಾಂಶವನ್ನು ತೋರಿಸುವ ಟೈಪ್‌ರೈಟ್ ದಾಖಲೆಯನ್ನು ಪ್ರಾಸಿಕ್ಯೂಷನ್ ಪ್ರಾಥಮಿಕವಾಗಿ ಅವಲಂಬಿಸಿತ್ತು. ಆದರೆ ಟೈಪ್‌ರೈಟ್ ಮಾಡಿದ ದಾಖಲೆಯನ್ನು ಸಲ್ಲಿಸುವಲ್ಲಿ ಪೊಲೀಸರು ಸರಿಯಾದ ಕಾನೂನು ಕಾರ್ಯವಿಧಾನವನ್ನು ಅನುಸರಿಸಿಲ್ಲ ಎಂದು ಹೈಕೋರ್ಟ್‌ನಲ್ಲಿ ಅರ್ಜಿದಾರರು ದೂರಿದ್ದರು.
ಪಬ್ಲಿಕ್ ಪ್ರಾಸಿಕ್ಯೂಟರ್ ಕೂಡ ಮೂಲಪ್ರತಿ ಸಲ್ಲಿಸಿಲ್ಲ ಎಂದು ದೃಢಪಡಿಸಿದರು. ವಾದ ಆಲಿಸಿದ ನ್ಯಾಯಾಲಯ, ಮೂಲ ಮುದ್ರಣ ಪ್ರತಿ ಇಲ್ಲದಿರುವುದರಿಂದ ಟೈಪ್‌ರೈಟ್ ಮಾಡಿದ ಪ್ರತಿಯನ್ನು ಸಾಕ್ಷಿಯಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಅರ್ಜಿದಾರರ ವಿರುದ್ಧದ ಕ್ರಮ ಸಮರ್ಥನೀಯವಲ್ಲ ಎಂದು ಅದು ಹೇಳಿತು. ಅಂತೆಯೇ ಮನವಿ ಪುರಸ್ಕರಿಸಿ ಅರ್ಜಿದಾರರ ವಿರುದ್ಧದ ತನಿಖೆ ರದ್ದುಗೊಳಿಸಿತು.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]