ವಿಡಿಯೋಕಾನ್ ಸಾಲ ಪ್ರಕರಣದಲ್ಲಿ ಸಿಬಿಐನಿಂದ ಬಂಧಿತರಾಗಿದ್ದ ಐಸಿಐಸಿಐ ಬ್ಯಾಂಕ್ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಚಂದಾ ಕೊಚ್ಚಾರ್ ಮತ್ತು ಅವರ ಪತಿ ದೀಪಕ್ ಕೊಚ್ಚಾರ್ ಅವರನ್ನು ನ್ಯಾಯಾಂಗ ಬಂಧನದಿಂದ ಮಧ್ಯಂತರ ಬಿಡುಗಡೆ ಮಾಡುವಂತೆ ಬಾಂಬೆ ಹೈಕೋರ್ಟ್ ಸೋಮವಾರ ಆದೇಶಿಸಿದೆ.
ಸಂಬಂಧಪಟ್ಟ ಪೊಲೀಸ್ ಅಧಿಕಾರಿಯ ಮುಂದೆ ಹಾಜರಾಗಲು ನೋಟಿಸ್ ಕಳುಹಿಸುವುದನ್ನು ಕಡ್ಡಾಯಗೊಳಿಸುವ ಸಿಆರ್‌ಪಿಸಿ ಸೆಕ್ಷನ್ 41 ಎ ಉಲ್ಲಂಘಿಸಿ ಬಂಧನ ನಡೆದಿದೆ ಎಂದು ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೆರೆ ಮತ್ತು ಪಿ ಕೆ ಚವಾಣ್ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.
“ವಾಸ್ತವಾಂಶಗಳ ಪ್ರಕಾರ ಅರ್ಜಿದಾರರ ಬಂಧನ ಕಾನೂನಿಗೆ ಮತ್ತು ಸಿಆರ್‌ಪಿಸಿ ಸೆಕ್ಷನ್ 41 ಎಗೆ ಅನುಗುಣವಾಗಿ ಇಲ್ಲ” ಎಂದು ನ್ಯಾಯಾಲಯ ನಿರ್ದೇಶಿಸಿದೆ. ತಲಾ ₹ 1 ಲಕ್ಷದ ತಾತ್ಕಾಲಿಕ ಜಾಮೀನಿನ ಆಧಾರದಲ್ಲಿ ಅವರನ್ನು ಬಿಡುಗಡೆ ಮಾಡಬೇಕು ಎಂದು ಅದು ಆದೇಶಿಸಿದೆ.
ವಿಡಿಯೊಕಾನ್ ಸಮೂಹಕ್ಕೆ 2012ರಲ್ಲಿ ₹3,250 ಕೋಟಿ ಸಾಲ ಮಂಜೂರು ಮಾಡುವಾಗ ವಂಚನೆ ಮತ್ತು ಅಕ್ರಮವನ್ನು ಎಸಗಿರುವ ಆರೋಪ ಚಂದಾ ಕೊಚ್ಚಾರ್ ಮೇಲಿದ್ದು, ಇದು ಐಸಿಐಸಿಐ ಬ್ಯಾಂಕ್‌ಗೆ ಅನುತ್ಪಾದಕ ಸಾಲವಾಗಿ ಪರಿಣಮಿಸಿತ್ತು. ಕೊಚ್ಚಾರ್ ಅವರ ಪತಿ ಮತ್ತು ಅವರ ಕುಟುಂಬ ಸದಸ್ಯರು ಈ ವ್ಯವಹಾರದ ಲಾಭ ಪಡೆದಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಬಿಐ ಅವರನ್ನು ಡಿಸೆಂಬರ್ 24 ರಂದು ಬಂಧಿಸಿತ್ತು.
ಚಂದಾ ಅವರ ಪರವಾಗಿ ಹಿರಿಯ ನ್ಯಾಯವಾದಿ ಅಮಿತ್ ದೇಸಾಯಿ, ದೀಪಕ್ ಅವರ ಪರವಾಗಿ ವಿಕ್ರಮ್ ಚೌಧರಿ ಹಾಗೂ ಸಿಬಿಐ ಪರವಾಗಿ ಹಿರಿಯ ವಕೀಲ ರಾಜಾ ಠಾಕ್ರೆ ವಾದ ಮಂಡಿಸಿದ್ದರು.