Parole 
ಸುದ್ದಿಗಳು

ಪೆರೋಲ್‌ಗಾಗಿ ಒಂದೇ ಆಸ್ಪತ್ರೆಯಿಂದ ಪ್ರಮಾಣಪತ್ರ: ತನಿಖೆಗೆ ಬಾಂಬೆ ಹೈಕೋರ್ಟ್ ಆದೇಶ

ಔರಂಗಾಬಾದ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತನಿಖಾ ವರದಿಯನ್ನು 15 ದಿನಗಳಲ್ಲಿ ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.

Bar & Bench

ವೈದ್ಯಕೀಯ ಕಾರಣಗಳಿಗಾಗಿ ಇತ್ತೀಚೆಗೆ ಪೆರೋಲ್‌ (ಜೈಲಿನಿಂದ ರಜೆ) ಕೋರಿದ್ದ ವಿವಿಧ ಕೈದಿಗಳು ಒಂದೇ ನಿರ್ದಿಷ್ಟ ಆಸ್ಪತ್ರೆಯಿಂದ ಪ್ರಮಾಣಪತ್ರ ಪಡೆಯುತ್ತಿದ್ದು ಇದರಲ್ಲಿ ಏನಾದರೂ ಅವ್ಯವಹಾರ ನಡೆದಿದೆಯೇ ಎಂಬ ಬಗ್ಗೆ ತನಿಖೆ ನಡೆಸುವಂತೆ ಬಾಂಬೆ ಹೈಕೋರ್ಟ್‌ ಔರಂಗಾಬಾದ್‌ ಪೀಠ ಇತ್ತೀಚೆಗೆ ಆದೇಶಿಸಿದೆ  [ಕುಂದನ್ ಸುರೇಶ್ ಪರದೇಶಿ ಮತ್ತು ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಒಂದೇ ನಿರ್ದಿಷ್ಟ ಆಸ್ಪತ್ರೆಯಿಂದ ಅತಿಹೆಚ್ಚು ಪೆರೋಲ್‌ ಪಡೆಯಲು ಅಗತ್ಯವಾದ ಪ್ರಮಾಣಪತ್ರಗಳು ಸಲ್ಲಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ವಿಭಾ ಕಂಕಣವಾಡಿ ಮತ್ತು ನ್ಯಾಯಮೂರ್ತಿ ಎಸ್‌ ಜಿ ಚಾಪಲ್ಗಾಂವ್ಕರ್ ಅವರಿದ್ದ ಪೀಠ ಈ ಆದೇಶ ನೀಡಿದೆ.

ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುವಂತೆ ಔರಂಗಾಬಾದ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನ್ಯಾಯಾಲಯ ಸೂಚಿಸಿದೆ. ಪ್ರಮಾಣಪತ್ರಗಳ ಅಧಿಕೃತತೆ ಮತ್ತು ದಾಖಲೆಗಳನ್ನು ದುರುಪಯೋಗಪಡಿಸಿಕೊಂಡಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ. ತನಿಖಾ ವರದಿಯನ್ನು 15 ದಿನಗಳಲ್ಲಿ ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.

 ತನ್ನ ಪೆರೋಲ್‌ ಅರ್ಜಿ ತಿರಸ್ಕರಿಸಿದ ಅಧಿಕಾರಿಗಳ ಆದೇಶ ಪ್ರಶ್ನಿಸಿ ಕುಂದನ್‌ ಸುರೇಶ್‌ ಪರದೇಶಿ ಎಂಬಾತ ಸಲ್ಲಿಸಿದ್ದ ರಿಟ್‌ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ಪ್ರಕಟಿಸಿದೆ.

ಆರೋಪಿ ಸಲ್ಲಿಸಿದ್ದ ವೈದ್ಯಕೀಯ ದಾಖಲೆಗಳಲ್ಲಿ ಸ್ಪಷ್ಟತೆ ಇಲ್ಲದಿರುವುರಿಂದ, 30 ದಿನಗಳ ಕಾಲ ಪೆರೋಲ್‌ ನೀಡಬೇಕೆಂಬ ಆತನ ಮನವಿಯನ್ನು ಅಧಿಕಾರಿಗಳು ಈ ಹಿಂದೆ ತಿರಸ್ಕರಿಸಿದ್ದರು.

ಹೈಕೋರ್ಟ್ ಕೂಡ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಅವುಗಳ ಸತ್ಯಾಸತ್ಯತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿತು. ಈ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಿರುವ ಅದು ವಿಚಾರಣೆಯನ್ನು ಸೆಪ್ಟೆಂಬರ್ 23ರಂದು ಮುಂದಿನ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ಈ ಮಧ್ಯೆ ಅರ್ಜಿದಾರನ ಪೆರೋಲ್‌ ಮನವಿಯನ್ನು ತಿರಸ್ಕರಿಸಿದ ಅದು ಪ್ರಮಾಣಪತ್ರ ನಂಬಲರ್ಹವಲ್ಲದೇ ಇರುವುದರಿಂದ ಮನವಿ ತಿರಸ್ಕರಿಸಲಾಗಿದೆ.  ವಿಚಾರಣಾ ವರದಿ ಪಡೆಯುವ ಉದ್ದೇಶಕ್ಕಾಗಿ ಮತ್ತು ಬೇರೆ ನಿರ್ದೇಶನಗಳನ್ನು ನೀಡುವುದಕ್ಕಾಗಿ ಮಾತ್ರ ಪ್ರಕರಣವನ್ನು ಬಾಕಿ ಇರಿಸಲಾಗಿದೆ ಎಂದಿತು.

ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 30 ವರ್ಷದ ಕುಂದನ್‌ ಎಂಬ ಕೈದಿಗೆ ಆತನ ಮದುವೆಯ ಕಾರಣಕ್ಕಾಗಿ 30 ದಿನಗಳ ಪೆರೋಲ್‌ಅನ್ನು ನ್ಯಾಯಾಲಯ ನೀಡಿತ್ತು. ಈ ಅವಧಿ ಮುಗಿದ ನಂತರ ಅದನ್ನು ವಿಸ್ತರಿಸಲು ಕೋರಿ ಕುಂದನ್‌ ಅರ್ಜಿ ಸಲ್ಲಿಸಿದ್ದ. ಇದಕ್ಕಾಗಿ ಆತನ ತನ್ನ ಹೆಂಡತಿಯು ಗರ್ಭಾವಸ್ಥೆಯಲ್ಲಿ ತೀವ್ರ ತೆರನಾದ ವೈದ್ಯಕೀಯ ಸಮಸ್ಯೆ ಎದುರಿಸುತ್ತಿರುವುದಾಗಿ ಈಗಲ್‌ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಎನ್ನುವ ವೈದ್ಯಕೀಯ ಸಂಸ್ಥೆಯಿಂದ ಪ್ರಮಾಣ ಪತ್ರವನ್ನು ನೀಡಿದ್ದ. ಔರಂಗಾಬಾದ್‌ನ ರಂಜನ್‌ಗಾಂವ್‌ ಎಂಬಲ್ಲಿ ಈ ಆಸ್ಪತ್ರೆ ಇದೆ.

ಕೈದಿಯ ಪತ್ನಿಯು ನಾಸಿಕ್‌ನಲ್ಲಿ ನೆಲೆಸಿದ್ದರೂ ಚಿಕಿತ್ಸೆಗಾಗಿ ಔರಂಗಾಬಾದ್‌ನ ರಂಜನ್‌ಗಾಂವ್‌ ಆಸ್ಪತ್ರೆ ಆರಿಸಿಕೊಂಡಿರುವುದು ನ್ಯಾಯಾಲಯದ ಅನುಮಾನಕ್ಕೆ ಒಂದು ಕಾರಣವಾದರೆ, ಅನೇಕ ಪ್ರಕರಣಗಳಲ್ಲಿ ಕೈದಿಗಳು ಪದೇ ಪದೇ ಈಗಲ್‌ ಮಲ್ಪಿಸ್ಪೆಷಾಲಿಟಿ ಆಸ್ಪತ್ರೆಯ ಪ್ರಮಾಣಪತ್ರಗಳನ್ನು ಬಳಸಿಕೊಂಡಿರುವುದು ನ್ಯಾಯಾಲಯಕ್ಕೆ ಆಸ್ಪತ್ರೆಯ ಕಾರ್ಯವಿಧಾನದ ಬಗ್ಗೆ ಅನುಮಾನ ಮೂಡಿಸಿತು.