ತನ್ನ ಪತ್ನಿಯಾಗಿದ್ದ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರ ಮೊಮ್ಮಗಳಾದ ಶಾಕೆರೆ ಖಲೀಲಿ ಅವರನ್ನು ಜೀವಂತ ಸಮಾಧಿ ಮಾಡಿದ್ದ ಆರೋಪದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 84 ವರ್ಷದ ಕೊಲೆ ಅಪರಾಧಿ ಸ್ವಯಂ ಘೋಷಿತ ದೇವಮಾನವ ಮನೋಹರ್ ಮಿಶ್ರಾ ಅಲಿಯಾಸ್ ಸ್ವಾಮಿ ಶ್ರದ್ಧಾನಂದ ತನಗೆ ಪೆರೋಲ್ ನೀಡುವಂತೆ ಕೋರಿ ಮತ್ತೊಮ್ಮೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾನೆ [ಸ್ವಾಮಿ ಶ್ರದ್ಧಾನಂದ ಅಲಿಯಾಸ್ ಮನೋಹರ್ ಮಿಶ್ರಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಸರ್ವೋಚ್ಚ ನ್ಯಾಯಾಲಯದಲ್ಲಿ ಶ್ರದ್ಧಾನಂದ ಸಲ್ಲಿಸಿರುವ ಎರಡನೇ ಮನವಿ ಇದಾಗಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ನ್ಯಾಯಾಲಯ ಪೆರೋಲ್, ವೈದ್ಯಕೀಯ ಮಧ್ಯಂತರ ಜಾಮೀನು ಅರ್ಜಿ ಹಾಗೂ ಶಾಕೆರೆ ಖಲೀಲಿ ಕೊಲೆಯ ಕುರಿತಾದ ಸರಣಿಯೊಂದರ ಪ್ರಸಾರಕ್ಕೆ ಸಂಬಂಧಿಸಿದಂತೆ ಶ್ರದ್ಧಾನಂದ ಸಲ್ಲಿಸಿದ್ದ ಅರ್ಜಿಗಳನ್ನು ತಿರಸ್ಕರಿಸಿತ್ತು.
ಇಟಲಿಯಲ್ಲಿ ಭಾರತದ ರಾಯಭಾರಿಯಾಗಿದ್ದ ಅಲ್ಬರ್ ಮಿರ್ಜಾ ಖಲೀಲಿ ಅವರ ಪತ್ನಿಯಾಗಿದ್ದ ಶಾಕೆರೆ ಖಲೀಲಿ ಅವರನ್ನು ವಿವಾಹವಾಗಿದ್ದ ಶ್ರದ್ಧಾನಂದ ಕೋಟ್ಯಂತರ ರೂಪಾಯಿ ಆಸ್ತಿ ಆಸೆಗಾಗಿ ಆಕೆಯನ್ನು 1991ರಲ್ಲಿ ಕೊಲೆಗೈದಿದ್ದ. ಶ್ರದ್ಧಾನಂದ ಕಾಫಿಯಲ್ಲಿ ಬೆರೆಸಿದ್ದ ನಿದ್ರೆಯ ಔಷಧ ಸೇವಿಸಿ ಪ್ರಜ್ಞಾಹೀನರಾಗಿದ್ದ ಶಾಕೆರೆ ಅವರನ್ನು ಸಜೀವವಾಗಿ ಹೂತುಹಾಕಿದ್ದ. ಮೂರು ವರ್ಷಗಳ ಬಳಿಕ ಶ್ರದಾನಂದನನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ ಆತ ಅಪರಾಧಿ ಎಂದು ಸಾಬೀತಾಗಿ ಕಳೆದ 30 ವರ್ಷಗಳಿಂದ ಸೆರೆವಾಸ ಅನುಭವಿಸುತ್ತಿದ್ದಾನೆ.
ಆತನನ್ನು ಪ್ರಸ್ತುತ ಮಧ್ಯಪ್ರದೇಶದ ಸಾಗರ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದೆ. ಪೆರೋಲ್ ಕೋರಿರುವುದಷ್ಟೇ ಅಲ್ಲದೆ, ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಲಭ್ಯವಿರುವ ಶಾಕೆರೆ ಖಲೀಲಿ ಅವರ ಕೊಲೆಯ ಸುತ್ತ ನಿರ್ಮಿಸಲಾದ ʼಡ್ಯಾನ್ಸಿಂಗ್ ಆನ್ ದಿ ಗ್ರೇವ್ʼ ಅಪರಾಧ ಸರಣಿಯ ಸಾಕ್ಷ್ಯ ಚಿತ್ರ ಪ್ರಸಾರ ಮಾಡದಂತೆ ಆತ ಮತ್ತೆ ಮನವಿ ಮಾಡಿದ್ದಾನೆ. ಈ ಸರಣಿ ಪೆರೋಲ್ ಸಹಿತ ತನ್ನ ವಿವಿಧ ಪ್ರಕರಣಗಳ ಮೇಲೆ ಪೂರ್ವಾಗ್ರಹ ಉಂಟು ಮಾಡುತ್ತದೆ ಎಂದು ವಕೀಲ ವರುಣ್ ಠಾಕೂರ್ ಮೂಲಕ ಸಲ್ಲಿಸಿರುವ ಪ್ರಸ್ತುತ ಮನವಿ ವಿವರಿಸಿದೆ.
ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆಗಳನ್ನು ಸಲ್ಲಿಸಲು ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್ ಮತ್ತು ಅರವಿಂದ್ ಕುಮಾರ್ ಅವರಿದ್ದ ಪೀಠ ಕೇಂದ್ರ ಸರ್ಕಾರ, ಮಧ್ಯಪ್ರದೇಶ ಸರ್ಕಾರ, ಕರ್ನಾಟಕ ಸರ್ಕಾರ, ಇಂಡಿಯಾ ಟುಡೇ ಗ್ರೂಪ್ ಹಾಗೂ ಅಮೆಜಾನ್ ಸಂಸ್ಥೆಗಳಿಗೆ ಸೋಮವಾರ ಸೂಚಿಸಿದೆ.