<div class="paragraphs"><p>Kolhapur farm</p></div>

Kolhapur farm

 
ಸುದ್ದಿಗಳು

ರೈತರ ಭೂಮಿ ಕಿತ್ತುಕೊಂಡು ಮಹಾಶಿವರಾತ್ರಿ ಉತ್ಸವ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಬಾಂಬೆ ಹೈಕೋರ್ಟ್

Bar & Bench

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ನಡೆಯಲಿರುವ ಮಹಾಶಿವರಾತ್ರಿ ಯಾತ್ರೆಗಾಗಿ ಅರ್ಜಿದಾರರ ಹೊಲಗಳಲ್ಲಿ ಬೆಳೆದ ಬೆಳೆ ನಾಶ ಮಾಡದಂತೆ ಬಾಂಬೆ ಹೈಕೋರ್ಟ್ ಇತ್ತೀಚೆಗೆ ನಿರ್ಬಂಧ ವಿಧಿಸಿದೆ [ಶಶಿಕಲಾ ಸುರೇಂದ್ರ ಅಂಬಾಡೆ ಮತ್ತಿತರರು ಹಾಗೂ ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಈ ವರ್ಷ ಮಹಾಶಿವರಾತ್ರಿ ಯಾತ್ರೆಗೆಂದು ಕೋಲ್ಹಾಪುರದ ಜಿಲ್ಲಾಧಿಕಾರಿ ಮತ್ತು ಕುರುಂದವಾಡ ಮುನ್ಸಿಪಲ್ ಕೌನ್ಸಿಲ್‌ ಮುಖ್ಯಾಧಿಕಾರಿ ಜೆಸಿಬಿ ಬಳಸಿ ತಮ್ಮ ಜಮೀನಿನಲ್ಲಿ ಸೋಯಾಬೀನ್ ಬೆಳೆಗಳನ್ನು ನಾಶಪಡಿಸಿದ್ದಾರೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದರು.

15 ದಿನಗಳ ಕಾಲ ಅರ್ಜಿದಾರರು ತಮ್ಮ ಜಮೀನು ಕಳೆದುಕೊಂಡಿರುವ ಬಗ್ಗೆ ನ್ಯಾಯಮೂರ್ತಿಗಳಾದ ಎಸ್‌ ಜೆ ಕಥಾವಲ್ಲಾ ಮತ್ತು ಮಿಲಿಂದ್ ಜಾಧವ್ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿತು. ಅರ್ಜಿದಾರರ ಹೊಲದಲ್ಲಿ ಸೋಯಾಬೀನ್‌ ಬೆಳೆ ಬೆಳೆದಿರುವ ಸಂದರ್ಭದಲ್ಲಿಯೇ ಕಾನೂನಿನ ಯಾವ ನಿಯಮದಡಿ 15 ದಿನಗಳ ಅವಧಿಗೆ ಜಮೀನನ್ನು ವಶಕ್ಕೆ ಪಡೆಯಬಹುದು ಎಂದು ನಮಗೆ ಅರ್ಥವಾಗುತ್ತಿಲ್ಲ ಎಂಬುದಾಗಿ ಪೀಠ ಆದೇಶದಲ್ಲಿ ಅಸಮಾಧಾನ ವ್ಯಕ್ತಪಡಿಸಿತು.

“ಈ ಹಿಂದೆ ಅಧಿಕಾರಿಗಳು ಹೀಗೆ ಮಾಡಿದ್ದರೆ ಅದನ್ನು ಈಗ ರಕ್ಷಣೆಗೆ ಬಳಸಲಾಗದು. ಹಿಂದೆ ಕೈಗೊಂಡಿದ್ದ ಕ್ರಮವನ್ನು ಪೂರ್ವನಿದರ್ಶನವಾಗಿ ಬಳಸಿಕೊಳ್ಳಲಾಗದು. ಅರ್ಜಿದಾರರ ವಿರೋಧವಿದೆ ಎಂದ ಬಳಿಕ ನ್ಯಾಯಾಲಯ ಆಡಳಿತಶಾಹಿಯ ಇಂತಹ ಅಭ್ಯಾಸವನ್ನು ನಿಲ್ಲಿಸಬೇಕಾಗುತ್ತದೆ” ಎಂದು ಪೀಠವು ಹೇಳಿತು.

ಅರ್ಜಿದಾರರ ಕುಟುಂಬದ ಸದಸ್ಯರೊಬ್ಬರು ಇದಕ್ಕೆ ಒಪ್ಪಿದ್ದಾರೆ ಎಂದು ಅಧಿಕಾರಿಗಳು ಸಮರ್ಥನೆ ನೀಡಲು ಹೊರಟರು. ಆದರೆ ಅರ್ಜಿದಾರರು ಅದನ್ನು ಒಪ್ಪಲಿಲ್ಲ. ಬಳಿಕ ಜಿಲ್ಲಾಧಿಕಾರಿಯವರು “ಮಹಾಶಿವರಾತ್ರಿ ಉತ್ಸವಕ್ಕೆ ಅರ್ಜಿದಾರರ ಜಾಗ ಬಳಸದಂತೆ ನೋಡಿಕೊಳ್ಳಲಾಗುವುದು ಮತ್ತು ಸಾರ್ವಜನಿಕ ರಸ್ತೆಯಲ್ಲಿ ಮಾತ್ರ ಉತ್ಸವ ನಡೆಸಲಾಗುವುದು” ಎಂದು ತಿಳಿಸಿದರು. ಮುಚ್ಚಳಿಕೆಯನ್ನು ಒಪ್ಪಿದ ಪೀಠ, ಮಹಾಶಿವರಾತ್ರಿ ಹಬ್ಬಕ್ಕೆ ಅರ್ಜಿದಾರರ ಜಮೀನು/ಹೊಲದ ಯಾವುದೇ ಭಾಗವನ್ನು ಬಳಸದಂತೆ ಪ್ರತಿಬಂಧಕಾದೇಶ ನೀಡಿತು.