ಹತ್ತನೇ ತರಗತಿಯಲ್ಲಿ ವಿಜ್ಞಾನ ವಿಷಯವನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿಲ್ಲ ಎಂಬ ಕಾರಣಕ್ಕೆ 10ನೇ ತರಗತಿಯ ನಂತರ ವಿಜ್ಞಾನ ವಿಷಯ ಅಧ್ಯಯನಕ್ಕೆ ವಿದ್ಯಾರ್ಥಿಯನ್ನು ಆಯ್ಕೆ ಮಾಡದೇ ಇರುವ ಮಹಾರಾಷ್ಟ್ರ ಸರ್ಕಾರದ ನಿಯಮಾವಳಿಯಲ್ಲಿ ಯಾವುದೇ ತರ್ಕ ಇಲ್ಲ ಎಂದು ಬಾಂಬೆ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಕ್ರಿಶ್ ರಾಜೇಂದ್ರ ಚೋರ್ಡಿಯಾ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].
ಎಂಟು ಅಥವಾ 9 ನೇ ತರಗತಿಯ ವಿದ್ಯಾರ್ಥಿಗಳು ವಿಷಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ವಿಚಾರವನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ನೀಲಾ ಗೋಖಲೆ ಅವರನ್ನೊಳಗೊಂಡ ವಿಭಾಗೀಯ ಪೀಠ 14 ವರ್ಷದ ಮಕ್ಕಳ ನಿರ್ಧಾರ ಅವರ ಸಂಪೂರ್ಣ ಭವಿಷ್ಯ ನಿರ್ಧರಿಸುತ್ತದೆ ಎಂದು ನಿರೀಕ್ಷಿಸುವುದು ಖಂಡಿತವಾಗಿಯೂ ಅಸಮಂಜಸವಾಗುತ್ತದೆ ಎಂದಿತು.
ಈ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಮೇಲೆ ಅವಲಂಬಿತವಾದ ನ್ಯಾಯಾಲಯ "ರಾಷ್ಟ್ರೀಯ ಶಿಕ್ಷಣ ನೀತಿಯ ಮೂಸೆಯಲ್ಲಿ ನಾವು ಈ ದೃಷ್ಟಿಕೋನವನ್ನು ಬಲಪಡಿಸಿದ್ದೇವೆ. ಸಂಪೂರ್ಣ ಮಾದರಿಯನ್ನು ಬದಲಾಯಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ವಿಜ್ಞಾನ-ಕಲೆ-ವಾಣಿಜ್ಯ ಎಂಬ ಹಳೆಯ ಮಾದರಿಯನ್ನು ತೆಗೆದುಹಾಕಿ ಸರಿಪಡಿಸಬೇಕು ಎಂದು ದಾಖಲಿಸಿತು.
ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಶನ್‌ನಿಂದ (ಐಸಿಎಸ್‌ಇ) 10ನೇ ತರಗತಿಯಲ್ಲಿ ಶೇಕಡಾ 92ರಷ್ಟು ಅಂಕ ಗಳಿಸಿ ವಿಜ್ಞಾನ ಅಧ್ಯಯನ ಅಪೇಕ್ಷಿಸಿದ್ದ ನಾಸಿಕ್‌ನ ವಿದ್ಯಾರ್ಥಿಯೊಬ್ಬರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ.
ಹೀಗಾಗಿ ತನ್ನ ಮಧ್ಯಂತರ ಆದೇಶದಲ್ಲಿ ನ್ಯಾಯಾಲಯ 10ನೇ ತರಗತಿಯಲ್ಲಿ ವಿಜ್ಞಾನ ಆಯ್ಕೆ ಮಾಡಿಕೊಳ್ಳದ ಕಾರಣಕ್ಕೆ ಪ್ರವೇಶಾತಿ ರದ್ದುಗೊಂಡಿದ್ದ 12ನೇ ತರಗತಿ ವಿದ್ಯಾರ್ಥಿಯ ಫಲಿತಾಂಶ ಪ್ರಕಟಿಸುವಂತೆ ರಾಜ್ಯ ಶಿಕ್ಷಣ ಮಂಡಳಿಗೆ (ಎಂಎಸ್‌ಬಿಎಸ್‌ಎಚ್‌ಎಸ್‌ಇ) ಸೂಚಿಸಿತು.
[ಆದೇಶದ ಪ್ರತಿಯನ್ನುಇಲ್ಲಿ ಓದಿ]