ಸುದ್ದಿಗಳು

ಮಗಳ ಪ್ರಿಯಕರನ ಮರ್ಯಾದೆಗೇಡು ಹತ್ಯೆ: ತಂದೆ- ಮಗನ ಜೀವಾವಧಿ ಶಿಕ್ಷೆ ಮೊಟಕುಗೊಳಿಸಿದ ಬಾಂಬೆ ಹೈಕೋರ್ಟ್

ಕೊಲೆ ಆರೋಪದ ಮೇಲೆ ಈ ಇಬ್ಬರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ರದ್ದುಗೊಳಿಸಿದ ನ್ಯಾಯಮೂರ್ತಿಗಳಾದ ಎ ಎಸ್ ಗಡ್ಕರಿ ಮತ್ತು ಮಿಲಿಂದ್ ಜಾಧವ್ ಅವರಿದ್ದ ಪೀಠ ಕೊಲೆಗೆ ಸಮಾನವಲ್ಲದ ನರಹತ್ಯೆಗೆ ಶಿಕ್ಷೆ ವಿಧಿಸಿತು.

Bar & Bench

ಮರ್ಯಾದೆಗೇಡು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ ಮತ್ತು ಮಗನಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಇತ್ತೀಚೆಗೆ ಮೊಟಕುಗೊಳಿಸಿದೆ.  [ಸಚಿನ್ ಲಕ್ಷ್ಮಣ್ ದಾಂಡೇಕರ್ ಮತ್ತು ಮಹಾರಾಷ್ಟ್ರ ಸರ್ಕಾರ ಹಾಗೂ ಸಂಬಂಧಿತ ಮೇಲ್ಮನವಿ ನಡುವಣ ಪ್ರಕರಣ].

ಕೊಲೆ ಆರೋಪದ ಮೇಲೆ ಈ ಇಬ್ಬರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ರದ್ದುಗೊಳಿಸಿದ ನ್ಯಾಯಮೂರ್ತಿಗಳಾದ ಎ ಎಸ್ ಗಡ್ಕರಿ ಮತ್ತು ಮಿಲಿಂದ್ ಜಾಧವ್ ಅವರಿದ್ದ ಪೀಠ ಕೊಲೆಗೆ ಸಮಾನವಲ್ಲದ ನರಹತ್ಯೆಗೆ ಶಿಕ್ಷೆ ವಿಧಿಸಿತು.

ತನ್ನ ಮಗಳನ್ನು ಪ್ರೀತಿಸುತ್ತಿದ್ದ 20 ವರ್ಷದ ಸಖಾರಾಮ್‌ನನ್ನು ಎಂಬುವವರನ್ನು ಲಕ್ಷ್ಮಣ್‌ ದಾಂಡೇಕರ್‌ ಹಾಗೂ ಆತನ ಮಗ ಸಚಿನ್‌ ಕೊಂದಿದ್ದ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್‌ 302ರ ಅಡಿಯಲ್ಲಿ ಮಹಾರಾಷ್ಟ್ರದ ಪಾಲ್ಘಾರ್‌ ಸೆಷನ್ಸ್ ನ್ಯಾಯಾಲಯ ತಪ್ಪಿತಸ್ಥರೆಂದು ಘೋಷಿಸಿತ್ತು.

ಆದರೆ ಸಖರಾಂನನ್ನು ರಸ್ತೆಯಲ್ಲಿ ಕೊಲ್ಲಲಾಗಿದ್ದು ಇದು ಪೂರ್ವಯೋಜಿತ ಕೃತ್ಯವಲ್ಲ. ಭಾರಿ ಗಾತ್ರದ ವಸ್ತುವಿನಿಂದ ಮೃತನ ಮೇಲೆ ಹಲ್ಲೆ ನಡೆಸಿದ್ದರೂ ಅದರಿಂದ ಅನಗತ್ಯ ಪ್ರಯೋಜವನ್ನು ಅವರಿಬ್ಬರೂ ಪಡೆಯಲಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.  

ಮಗನಿಗೆ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ 2011ರಲ್ಲಿ ಬಂಧಿತನಾಗಿ ಈಗಾಗಲೇ ಶಿಕ್ಷೆಯ ಅವಧಿಯನ್ನು ಪೂರೈಸಿರುವ ಕಾರಣ ಆತನನ್ನು ಕೂಡಲೇ ಬಿಡುಗಡೆ ಮಾಡುವಂತೆ ಸೂಚಿಸಿತು. ಇದೇ ವೇಳೆ 2016 ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗುವ ಮೊದಲು ತಂದೆ 5 ವರ್ಷ ಮತ್ತು 11 ತಿಂಗಳುಗಳ ಶಿಕ್ಷೆಗೆ ಒಳಗಾಗಿದ್ದ.ಮಗ ಸಖರಾಂಗೆ ಹೊಡೆಯುವ ವೇಳೆ ಸಖರಾಂನನ್ನು ಹಿಡಿದುಕೊಳ್ಳುವುದಕ್ಕೆ ಮಾತ್ರ ಆತನ ಪಾತ್ರ ಸೀಮಿತವಾಗಿದ್ದು ವಿಧಿಸಲಾದ ಶಿಕ್ಷೆಯನ್ನು ಈತ ಕೂಡ ಈಗಾಗಲೇ ಅನುಭವಿಸಿದ್ದಾನೆ ಎಂದು ನ್ಯಾಯಾಲಯ ತಿಳಿಸಿತು.