[ಮರ್ಯಾದೆಗೇಡು ಹತ್ಯೆ] ಗರ್ಭಿಣಿ ಪತ್ನಿಯೆದುರಿಗೆ ಭಾವನ ಕೊಲೆ; ಆರೋಪಿಯ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌

ಮಮತಾ ಪೋಷಕರು ಸುಪಾರಿ ನೀಡಿದ್ದ ಹಂತಕನ ಗುಂಡಿಗೆ ಕೇರಳ ಮೂಲದ ಅಮಿತ್‌ ನಾಯರ್‌ ಬಲಿಯಾಗಿದ್ದರು. ಆರೋಪಿಗೆ ರಾಜಸ್ಥಾನ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು.
Honour killing and supreme court
Honour killing and supreme court
Published on

ಮರ್ಯಾದೆಗೇಡು ಹತ್ಯೆ ಆರೋಪದ ಭಾಗವಾಗಿ ಗರ್ಭಿಣಿ ಪತ್ನಿಯ ಎದುರು ತನ್ನ ಭಾವನನ್ನು ಸುಪಾರಿ ಹಂತಕನ ಮೂಲಕ ನಿರ್ದಾಕ್ಷಿಣ್ಯವಾಗಿ ಕೊಲೆಗೈಯ್ಯುವುದಕ್ಕೆ ಪಿತೂರಿ ನಡೆಸಿದ್ದ ಆರೋಪಿಯ ಜಾಮೀನನ್ನು ಸುಪ್ರೀಂ ಕೋರ್ಟ್‌ ಸೋಮವಾರ ರದ್ದುಗೊಳಿಸಿದೆ.

ಆರೋಪಿಗೆ ನೀಡಲಾಗಿದ್ದ ಜಾಮೀನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಮತ್ತು ಹೃಷಿಕೇಶ್‌ ರಾಯ್‌ ನೇತೃತ್ವದ ತ್ರಿಸದಸ್ಯ ಪೀಠವು ಆದೇಶ ಹೊರಡಿಸಿದೆ.

ರಾಜಸ್ಥಾನದ ಮಹಿಳೆಯ ಜೊತೆ ಅಂತರ್ಜಾತಿ ವಿವಾಹವಾಗಿದ್ದ ಕೇರಳದ ಅಮಿತ್‌ ನಾಯರ್‌ ಅವರನ್ನು ಪತ್ನಿಯ ಎದುರು ಕೊಲೆ ಮಾಡಲಾಗಿತ್ತು. ಕೊಲೆ ಪಿತೂರಿ ಮಾಡಿದ್ದ ಆರೋಪಿಗೆ ರಾಜಸ್ಥಾನ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು.

ʼಹೈಕೋರ್ಟ್‌ ಹೊರಡಿಸಿರುವ ಆದೇಶವನ್ನು ಬದಿಗೆ ಸರಿಸಬೇಕಿದೆ. ಜಿಲ್ಲಾ ನ್ಯಾಯಾಧೀಶರ ಮುಂದೆ ಶರಣಾಗುವಂತೆ ಪ್ರತಿವಾದಿಗೆ ಈ ಮೂಲಕ ಆದೇಶಿಸುತ್ತಿದ್ದೇವೆ. ಮೂರನೇ ಪ್ರತಿವಾದಿಗೆ ಮಂಜೂರು ಮಾಡಲಾಗಿರುವ ಜಾಮೀನು ಕಾನೂನು ಸಮ್ಮತವಲ್ಲ ಎಂಬುದು ನಮ್ಮ ಖಚಿತ ನಿಲುವಾಗಿದೆ. ಒಂದು ವರ್ಷದ ಒಳಗೆ ವಿಚಾರಣೆ ಮುಕ್ತಾಯಗೊಳಿಸಬೇಕುʼ ಎಂದು ನ್ಯಾಯಾಲಯ ಆದೇಶಿಸಿದೆ.

ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ ಕೊಲೆ, ಅತಿಕ್ರಮ ಗೃಹ ಪ್ರವೇಶ ಮತ್ತು ಪಿತೂರಿ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು. ಸಂತ್ರಸ್ತ ಅಮಿತ್‌ ನಾಯರ್‌ ಪತ್ನಿ ಮಮತಾ ನಾಯರ್‌ ಅವರು ಸಹೋದರನಿಗೆ ಜಾಮೀನು ಮಂಜೂರು ಮಾಡಿದ್ದ ರಾಜಸ್ಥಾನ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಮನವಿ ಸಲ್ಲಿಸಿದ್ದರು.

Also Read
ಉದುಮಲ್ ಪೇಟೆ ಮರ್ಯಾದಗೇಡು ಹತ್ಯೆ: ಕೌಶಲ್ಯ ಪೋಷಕರು, ಸೋದರ ಮಾವನ ಖುಲಾಸೆ ಪ್ರಶ್ನಿಸಿದ್ದ ಮನವಿ ಆಧರಿಸಿ ನೋಟಿಸ್ ಜಾರಿ

2017ರಲ್ಲಿ ಘಟನೆ ನಡೆದಿದ್ದು, ಮಮತಾ ಪೋಷಕರು ಮತ್ತು ಇತರೆ ಇಬ್ಬರು ವ್ಯಕ್ತಿಗಳು ದಂಪತಿಯ ಮನೆಗೆ ನುಗ್ಗಿದ್ದರು. ಮಮತಾ ಅವರನ್ನು ಎಳೆದು ಆಕೆಯ ಪೋಷಕರ ಮನೆಗೆ ಕರೆದೊಯ್ಯುವುದಕ್ಕೂ ಮುನ್ನ ಅಮಿತ್‌ ಅವರಿಗೆ ಗುಂಡಿಕ್ಕಲಾಗಿತ್ತು. ಆ ಸಂದರ್ಭದಲ್ಲಿ ಮಮತಾ ಅವರು ಆರು ತಿಂಗಳ ಗರ್ಭಿಣಿಯಾಗಿದ್ದರು.

ಮಮತಾ ಮತ್ತು ಆಕೆಯ ಸಂಬಂಧಿ ಈ ವೇಳೆ ನೆರವಿಗೆ ಕೂಗಿದ್ದರಿಂದ ಮಮತಾ ಅವರನ್ನು ಕರೆದೊಯ್ಯುವುದಕ್ಕೂ ಮುನ್ನ ನೆರೆಹೊರೆಯವರು ಮಧ್ಯಪ್ರವೇಶ ಮಾಡಿದ್ದರು ಎಂದು ಮನವಿಯಲ್ಲಿ ವಿವರಿಸಲಾಗಿದೆ. 2011ರಲ್ಲಿ ಮಮತಾ ಅವರು ಅಮಿತ್‌ರನ್ನು ವರಿಸಿದ್ದರು. ಇದು ಅಂತರ್ಜಾತಿ ವಿವಾಹವಾಗಿದ್ದರಿಂದ ಆಕೆಯ ಪೋಷಕರಿಗೆ ಮಾಹಿತಿ ನೀಡಿರಲಿಲ್ಲ. 2015ರಲ್ಲಿ ವಿವಾಹದ ವಿಚಾರವನ್ನು ಮಮತಾ ತನ್ನ ಪೋಷಕರಿಗೆ ತಿಳಿಸಿದ್ದರು. ಆದರೆ, ಇದನ್ನು ಆಕೆಯ ಪೋಷಕರು ಒಪ್ಪಿರಲಿಲ್ಲ.

Kannada Bar & Bench
kannada.barandbench.com