Bar Council of India and Bombay High Court 
ಸುದ್ದಿಗಳು

ಕಾನೂನು ವಿದ್ಯಾರ್ಥಿಗಳ ಕ್ರಿಮಿನಲ್ ಹಿನ್ನೆಲೆ ಪರಿಶೀಲನೆ, ಸಿಸಿಟಿವಿ ಅಳವಡಿಕೆ: ಪಿಐಎಲ್ ತಿರಸ್ಕರಿಸಿದ ಬಾಂಬೆ ಹೈಕೋರ್ಟ್

ಹಿನ್ನೆಲೆ ಪರಿಶೀಲನೆ ಕಡ್ಡಾಯಗೊಳಿಸುವ ಭಾರತೀಯ ವಕೀಲರ ಪರಿಷತ್ತಿನ (ಬಿಸಿಐ) ಸುತ್ತೋಲೆಯಲ್ಲಿ ಯಾವುದೇ 'ತಪ್ಪು' ಇಲ್ಲ ಎಂದು ಮೇಲ್ನೋಟಕ್ಕೆ ಕಂಡುಬಂದಿರುವುದಾಗಿ ನ್ಯಾಯಾಲಯ ತಿಳಿಸಿತು.

Bar & Bench

ಕಾನೂನು ವಿದ್ಯಾರ್ಥಿಗಳಿಗೆ ಅಂತಿಮ ಅಂಕಪಟ್ಟಿ ನೀಡುವ ಮೊದಲು ಅವರ ಕ್ರಿಮಿನಲ್ ಹಿನ್ನೆಲೆ ಪರಿಶೀಲನೆ ಕಡ್ಡಾಯಗೊಳಿಸುವ ಭಾರತೀಯ ವಕೀಲರ ಪರಿಷತ್ತಿನ (ಬಿಸಿಐ) ಸುತ್ತೋಲೆ ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಬಾಂಬೆ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.

ಗೌಪ್ಯತೆ, ನ್ಯಾಯಸಮ್ಮತತೆ ಮತ್ತು ಸುತ್ತೋಲೆ ಹೊರಡಿಸುವ ಬಿಸಿಐನ ಅಧಿಕಾರ ವ್ಯಾಪ್ತಿ ಬಗ್ಗೆ ಕಳವಳ ವ್ಯಕ್ತಪಡಿಸಿ ವಕೀಲ ಅಶೋಕ್ ಯೆಂಡೆ ಅವರು ಸಲ್ಲಿಸಿದ್ದ ಅರ್ಜಿ, ಬಿಸಿಐ ಹೊರಡಿಸಿದ ಸುತ್ತೋಲೆಯ ಕಾನೂನುಬದ್ಧತೆ ಮತ್ತು ಸಿಂಧುತ್ವವನ್ನು ಪ್ರಶ್ನಿಸಿತ್ತು.

ಅರ್ಜಿ ವಜಾಗೊಳಿಸಿದ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಭಾರತಿ ಡಾಂಗ್ರೆ ಅವರಿದ್ದ ಪೀಠ, ವಕೀಲರಾಗಿರುವ ಅರ್ಜಿದಾರರು ನಿಜವಾಗಿಯೂ ಬಾಧಿತರ 'ಹಕ್ಕುಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಾರೆ' ಎಂದು ಅಭಿಪ್ರಾಯಪಟ್ಟರು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಮನವಿ ಹಿಂಪಡೆದರು.

ಇದೇ ವೇಳೆ ಬಿಸಿಐ ಹೊರಡಿಸಿದ ಸುತ್ತೋಲೆ ಮೇಲ್ನೋಟಕ್ಕೆ ಅಸಾಂವಿಧಾನಿಕವಲ್ಲ ಎಂದು ನ್ಯಾಯಾಲಯ ಹೇಳಿದೆ.

ಕ್ರಿಮಿನಲ್‌ ಪ್ರಕರಣ ಇದ್ದರೆ ಶಿಕ್ಷಣದ ಹಕ್ಕಿನಿಂದ ಕಾನೂನು ವಿದ್ಯಾರ್ಥಿ ವಂಚಿತನಾಗುವುದಿಲ್ಲ. ಅಂತಹ ವಿದ್ಯಾರ್ಥಿ ಕೋರ್ಸ್‌ ಮುಂದುವರೆಸಬಹುದು. ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅದು ಹೇಳಿತು.

ಕಾನೂನು ವಿದ್ಯಾರ್ಥಿಗಳ ಕ್ರಿಮಿನಲ್‌ ಹಿನ್ನೆಲೆಯ ಕಡ್ಡಾಯ ಪರಿಶೀಲನೆಗೆ, ಕಾನೂನು ಕಾಲೇಜುಗಳಲ್ಲಿ ಸಿಸಿಟಿವಿ ಅಳವಡಿಕೆಗೆ ಸೂಚಿಸಿ ಹಾಗೂ ವಿದ್ಯಾರ್ಥಿಗಳು ಬೇರಾವುದೇ ಪದವಿ ವ್ಯಾಸಂಗದಲ್ಲಿ ನಿರತರಾಗಿದ್ದಾರೆಯೇ, ಅವರ ಔದ್ಯೋಗಿಕ ಸ್ಥಿತಿ ಹಾಗೂ ತರಗತಿಗಳ ಹಾಜರಾತಿ ಪರಿಶೀಲನೆ ನಡೆಸುವಂತೆ ತಿಳಿಸಿ ದೇಶದ ಎಲ್ಲಾ  ಕಾನೂನು ಶಿಕ್ಷಣ ಕೇಂದ್ರಗಳಿಗೆ ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಸೆಪ್ಟೆಂಬರ್ 2024ರಲ್ಲಿ ಸುತ್ತೋಲೆ ಹೊರಡಿಸಿತ್ತು.

ಬಿಸಿಐ ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿದೆ ಎಂದು 40 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಕಾನೂನು ಶಿಕ್ಷಣ ತಜ್ಞರೂ ಆಗಿರುವ ವಕೀಲ ಯೆಂಡೆ ತಮ್ಮ ಅರ್ಜಿಯಲ್ಲಿ, ವಾದಿಸಿದ್ದರು.

ವಕೀಲರ ಕಾಯಿದೆ- 1961ರ ಅಡಿಯಲ್ಲಿ, ಬಿಸಿಐನ ಪಾತ್ರವು ಕಾನೂನು ವೃತ್ತಿಯ ನಿಯಂತ್ರಣಕ್ಕೆ ಸೀಮಿತವಾಗಿದೆ ಮತ್ತು ಪ್ರವೇಶ ಮತ್ತು ಶೈಕ್ಷಣಿಕ ಅಭ್ಯಾಸಗಳನ್ನು ನಿಯಂತ್ರಿಸುವಲ್ಲಿ ವಿಶ್ವವಿದ್ಯಾಲಯಗಳ ಅಧಿಕಾರ ವ್ಯಾಪ್ತಿಯನ್ನು ಅದು ಅತಿಕ್ರಮಿಸುವಂತಿಲ್ಲ ಎಂದಿದ್ದರು.

ಬೇರೆ ಶೈಕ್ಷಣಿಕ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಅಪರಾಧ ಪರಿಶೀಲನೆ ಕಡ್ಡಾಯವಲ್ಲದೆ ಇರುವಾಗ ಕಾನೂನು ವಿದ್ಯಾರ್ಥಿಗಳಿಗೆ ಮಾತ್ರ ಅದನ್ನು ಅನ್ವಯ ಮಾಡಿರುವ ಈ ಸುತ್ತೋಲೆಯು ತಾರತಮ್ಯದಿಂದ ಕೂಡಿದೆ. ಇದು ಕಾನೂನು ವಿದ್ಯಾರ್ಥಿಗಳ ಗೌಪ್ಯತೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಜೊತೆಗೆ  ಸಂವಿಧಾನದ 14 ಮತ್ತು 21ನೇ ವಿಧಿಯಡಿ ಒದಗಿಸಲಾದ ಸಮಾನತೆ ಹಾಗೂ ಜೀವಿಸುವ ಹಕ್ಕಿನ ಉಲ್ಲಂಘನೆಯಾಗಿದೆ ಎಂದಿದ್ದರು.

ಇತ್ತೀಚೆಗೆ ಸುತ್ತೋಲೆ ಪ್ರಶ್ನಿಸುವ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್‌ ಬಿಸಿಐನ ಪ್ರತಿಕ್ರಿಯೆ ಕೇಳಿತ್ತು. ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಎದುರು ನೋಡುತ್ತಿದೆ.