ಸುದ್ದಿಗಳು

ಗಾಯಕ ಸೋನು ನಿಗಮ್ ರೀತಿ ಟ್ವೀಟ್ ಮಾಡದಂತೆ ವಕೀಲ ಸೋನು ನಿಗಮ್ ಸಿಂಗ್‌ಗೆ ಬಾಂಬೆ ಹೈಕೋರ್ಟ್ ನಿರ್ಬಂಧ

ಸಿಂಗ್ ಅವರು ಗಾಯಕ ಸೋನು ಅವರ ಹೆಸರನ್ನು ಬಳಸಿಕೊಂಡು ಸಂಸದ ತೇಜಸ್ವಿ ಸೂರ್ಯ ಹಾಗೂ ಕ್ರಿಕೆಟ್‌ ತಂಡ ಆರ್‌ಸಿಬಿಯನ್ನು ಪ್ರತ್ಯೇಕ ಪೋಸ್ಟ್‌ಗಳ ಮೂಲಕ ಟೀಕಿಸಿದ್ದರು ಎಂದು ಗಾಯಕನ ಪರ ವಕೀಲರು ವಾದಿಸಿದರು.

Bar & Bench

‌ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರದ್ದು ಎಂದು ಬಿಂಬಿತವಾಗುವಂತಹ ಎಕ್ಸ್ ಖಾತೆಯನ್ನು ನಿರ್ಬಂಧಿಸಿ ಬಾಂಬೆ ಹೈಕೋರ್ಟ್ ಶುಕ್ರವಾರ ಏಕಪಕ್ಷೀಯ ಆದೇಶ ಹೊರಡಿಸಿದೆ. [ಸೋನು ನಿಗಮ್ ಮತ್ತು ಸೋನು ನಿಗಮ್ ಸಿಂಗ್ ನಡುವಣ ಪ್ರಕರಣ]

ಸೋನು ನಿಗಮ್ ಸಿಂಗ್ ಎಂಬ ವ್ಯಕ್ತಿ ನಿರ್ವಹಿಸುತ್ತಿದ್ದ ಎಕ್ಸ್‌ ಖಾತೆಯಲ್ಲಿ ಅವರ ಪೂರ್ಣ ಮತ್ತು ಮೂಲ ಹೆಸರನ್ನು ಪ್ರದರ್ಶಿಸುವಂತೆ ಅದು ನಿರ್ದೇಶಿಸಿದೆ.

ತಮ್ಮ ವ್ಯಕ್ತಿತ್ವ ಹಕ್ಕು ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಗಾಯಕ ಸೋನು ನಿಗಮ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್‌ ಐ ಚಾಗ್ಲಾ ಅವರು ಈ ಆದೇಶ ನೀಡಿದರು.

ಬಿಹಾರದ ಕ್ರಿಮಿನಲ್ ಪ್ರಕರಣಗಳ ವಕೀಲ ಎಂದು ಹೇಳಿಕೊಂಡಿರುವ ಸೋನು ನಿಗಮ್ ಸಿಂಗ್ ತಮ್ಮ ಎಕ್ಸ್ ಖಾತೆಯಲ್ಲಿ ʼಸೋನು ನಿಗಮ್ʼ ಹೆಸರು ಬಳಸಿಕೊಂಡು ಕೋಮು ಭಾವನೆ ಮೂಡಿಸುವಂತಹ ಮತ್ತು ರಾಜಕೀಯವಾಗಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಗಾಯಕ ನ್ಯಾಯಾಲಯದ ಮೆಟ್ಟಿಲೇರಿದ್ದರು.

ವಕೀಲ ಸಿಂಗ್‌ ತಮ್ಮ ಹೆಸರು ಬಳಸಿಕೊಂಡು ಕೋಮುವಾದಿ ಹೇಳಿಕೆಗಳನ್ನೂ ನೀಡಿದ್ದಾರೆ. ಅಂತಹ ಒಂದು ಪೋಸ್ಟ್‌ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರನ್ನು ಗುರಿಯಾಗಿಸಿಕೊಂಡಿದೆ ಎಂದು ಹಾಡುಗಾರ ಸೋನು ದೂರಿದ್ದರು. ಪೋಸ್ಟ್‌ನಲ್ಲಿ " ಕನ್ನಡ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಬೇಡಿ! ಕನ್ನಡ ಸಿನಿಮಾಗಳನ್ನು ಭಾರತದೆಲ್ಲೆಡೆ ಬಿಡುಗಡೆ ಮಾಡಬೇಡಿ! ಎಂದು ಕನ್ನಡ ಸಿನಿಮಾ ತಾರೆಯರಿಗೆ ಹೇಳುವ ತಾಕತ್ತು ಶ್ರೀ @TejasviSurya ಅವರಿಗೆ ಇದೆಯೇ ಅಥವಾ ನೀವು ಇನ್ನೊಬ್ಬ ಭಾಷಾ ಹೋರಾಟಗಾರರೇ” ಎಂದು ಸಿಂಗ್‌ ಪ್ರಶ್ನೆ ಎಸೆದಿರುವುದನ್ನು ಬಾಲಿವುಡ್‌ ಗಾಯಕ ಸೋನು ಪ್ರಸ್ತಾಪಿಸಿದ್ದರು.

ಇಂಡಿಯನ್ ಪ್ರೀಮಿಯರ್ ಲೀಗ್ ಚಾಂಪಿಯನ್‌ಶಿಪ್ ಗೆಲುವಿನ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ತಂಡದ ಬಗ್ಗೆ ಸಿಂಗ್ ಅವಹೇಳನಕಾರಿ ಹೇಳಿಕೆಗಳನ್ನೂ ಸಿಂಗ್‌ ನೀಡಿದ್ದಾರೆ ಎಂದು ಸೋನು ಪರ ವಕೀಲರು ದೂರಿದರು.

ಈ ಕೃತ್ಯದ ಹಿಂದೆ ವಾಣಿಜ್ಯಿಕ ಲಾಭದ ಸಾಕ್ಷ್ಯಗಳು ಕಂಡುಬರದೆ ಇದ್ದರೂ ಗಾಯಕನ ಹೆಸರು ದುರ್ಬಳಕೆ ಮಾಡಕೊಂಡು ಸಿಂಗ್‌ ಸಾಮಾಜಿಕ ಮತ್ತು ವರ್ಚಸ್ಸಿನ ಪ್ರಯೋಜನ ಪಡೆದಿದ್ದಾರೆ. ಹೀಗಾಗಿಯೇ ಎಕ್ಸ್‌ ಸಾಮಾಜಿಕ ಮಾಧ್ಯಮದಲ್ಲಿ ಸಿಂಗ್‌ ಅವರಿಗೆ 90,000 ಕ್ಕೂ ಹೆಚ್ಚು ಫಾಲೋವರ್ಸ್‌ ಇದ್ದಾರೆ ಎಂದು ಅವರು ದೂರಿದರು.

ಈ ಅನುಯಾಯಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಸಚಿವೆ ಸ್ಮೃತಿ ಇರಾನಿಯಂತಹ ಪ್ರಮುಖ ಸಾರ್ವಜನಿಕ ವ್ಯಕ್ತಿಗಳು ಇದ್ದಾರೆ.  ಸುಳ್ಳು ಹೇಳಿಕೆಗಳಿಂದಾಗಿ ಗಾಯಕ ಸೋನು ಮತ್ತವರ ಕುಟುಂಬದ ವಿರುದ್ಧ ನಿರಂತರವಾಗಿ ಆನ್‌ಲೈನ್‌ ದ್ವೇಷ ಹರಡುತ್ತಿದೆ ಎಂದು ಗಾಯಕ ಸೋನು ಪರ ವಕೀಲರು ತಿಳಿಸಿದರು.

ಸೋನು ನಿಗಮ್ ತಮ್ಮ ಹೆಸರನ್ನು ವಾಣಿಜ್ಯ ಚಿಹ್ನೆಯಾಗಿ ನೋಂದಾಯಿಸಿಲ್ಲವಾದರೂ, ಈ ಹಿಂದೆ ಪ್ರಕಟವಾಗಿರುವ ತೀರ್ಪುಗಳ ಪ್ರಕಾರ ವಾಣಿಜ್ಯ ಬಳಕೆಯಿಲ್ಲದಿದ್ದರೂ ಸಹ, ಒಂದು ಹೆಸರು ಸಾರ್ವಜನಿಕ ಮನ್ನಣೆಯ ಮೂಲಕ ವಾಣಿಜ್ಯ ಚಿಹ್ನೆ ಸ್ಥಾನಮಾನ\ ಪಡೆಯಬಹುದು ಎಂದು ಅವರು ವಾದಿಸಿದರು. ಈ ವಾದಗಳನ್ನು ಪುರಸ್ಕರಿಸಿದ ನ್ಯಾಯಾಲಯ ಸಿಂಗ್‌ ಅವರು ಗಾಯಕನಂತೆ ಇನ್ನುಮುಂದೆ ಸೋಗು ಹಾಕುವಂತಿಲ್ಲ. ಮತ್ತು  ಎಕ್ಸ್‌ ಖಾತೆಯಲ್ಲಿ ಅವರು ತಮ್ಮ ಹೆಸರನ್ನು  ನು ನಿಗಮ್ ಸಿಂಗ್ ಎಂದು ಪೂರ್ಣ ಹೆಸರಿನಿಂದ ಬಳಸಬೇಕು ಎಂದು ತಾಕೀತು ಮಾಡಿತು.