ದಕ್ಷಿಣದ ಐದು ರಾಜ್ಯಗಳು ಮತ್ತು ನಿರ್ದಿಷ್ಟ ಕೇಂದ್ರಾಡಳಿತ ಪ್ರದೇಶಗಳನ್ನು ಹೊರತುಪಡಿಸಿ ಯಾವುದೇ ಸಭೆ, ಸಮಾರಂಭ, ವ್ಯವಹಾರ ಅಥವಾ ಚಟುವಟಿಕೆಗಳಿಗೆ 'ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ತನ್ನ ಶೀರ್ಷಿಕೆ ಅಥವಾ ಇಂಡಿಯನ್ ಎಕ್ಸ್‌ಪ್ರೆಸ್ ವ್ಯುತ್ಪನ್ನ ಬಳಸದಂತೆ ಬಾಂಬೆ ಹೈಕೋರ್ಟ್ ಗುರುವಾರ ತಾತ್ಕಾಲಿಕ ನಿರ್ಬಂಧ ವಿಧಿಸಿದೆ.
ದಕ್ಷಿಣ ಭಾರತದ ಹೊರಗೆ ಈ ಚಿಹ್ನೆ ಬಳಸುವುದು ದ ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಗೆ ಸಂಬಂಧಿಸಿದಂತೆ ಈ ಹಿಂದೆ ನೀಡಲಾಗಿದ್ದ ಸಮ್ಮತಿ ಒಪ್ಪಂದ ತೀರ್ಪನ್ನು (ಕನ್ಸೆಂಟ್ ಡಿಕ್ರಿ) ಉಲ್ಲಂಘಿಸಿದಂತಾಗುತ್ತದೆ ಎಂದು ನ್ಯಾ. ಆರ್ ಐ ಚಾಗ್ಲಾ ತಿಳಿಸಿದರು.
ಮಧ್ಯಂತರ ಪರಿಹಾರ ಒದಗಿಸಲು ಅಗತ್ಯವಾದ ಬಲವಾದ ಮೇಲ್ನೋಟದ ವಾದವನ್ನು ಅರ್ಜಿದಾರ ʼದ ಇಂಡಿಯನ್ ಎಕ್ಸ್‌ಪ್ರೆಸ್ʼ ಮಂಡಿಸಿದ್ದು ಸಮಂಜಸತೆಯ ಸಮತೋಲನ ಕೂಡ ಅರ್ಜಿದಾರರ ಪರವಾಗಿ ಇದೆ. ಪ್ರತಿವಾದಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಅನುಮತಿಸಲಾದ ಪ್ರದೇಶದ ಹೊರಗೆ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಎಂಬ ಗುರುತನ್ನು ಬಳಸುವುದು ಒಡಂಬಡಿಕೆಯ ತೀರ್ಪನ್ನು ಉಲ್ಲಂಘಿಸಲಾಗುತ್ತದೆ. ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಎನ್ನುವುದು ವ್ಯುತ್ಪನ್ನವಾಗಿದ್ದು ಅದರ ಗುರುತನ್ನು ಮಿತಿಗೊಳಿಸಲಾದ ಪ್ರದೇಶದಲ್ಲಿ ಮಾತ್ರವೇ ಬಳಸಬಹುದಾಗಿದ್ದು ಅದನ್ನು ಮೀರಿದರೆ ಅರ್ಜಿದಾರರಿಗೆ ತುಂಬಲಾರದ ಹಾನಿ ಉಂಟಾಗುತ್ತದೆ ಎಂದು ನ್ಯಾಯಾಲಯ ವಿವರಿಸಿದೆ.
ಇಂಡಿಯನ್ ಎಕ್ಸ್‌ಪ್ರೆಸ್ ಸಮೂಹದ ಸಂಸ್ಥಾಪಕ ರಾಮನಾಥ್ ಗೋಯೆಂಕಾ ಅವರು 1991ರಲ್ಲಿ ಮರಣ ಹೊಂದಿದ ನಂತರ ಕೌಟುಂಬಿಕ ವ್ಯಾಜ್ಯ ತಲೆದೋರಿತ್ತು. ನಂತರ ಅವರ ಮೊಮ್ಮಕ್ಕಳಾದ ವಿವೇಕ್ ಗೋಯೆಂಕಾ ಮಾಲೀಕತ್ವದ ದ ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ಮನೋಜ್ ಕುಮಾರ್ ಸೊಂಥಾಲಿಯಾ ಒಡೆತನದ ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ನಡುವೆ 1995ರಲ್ಲಿ ಒಂದು ಒಪ್ಪಂದ ಮತ್ತು 2005ರಲ್ಲಿ ಪೂರಕ ಒಪ್ಪಂದ ಏರ್ಪಟ್ಟಿತ್ತು. ಈ ಸಂಬಂಧ ಮದ್ರಾಸ್ ಹೈಕೋರ್ಟ್ ಸಮ್ಮತಿ ಒಪ್ಪಂದ ತೀರ್ಪು ಪ್ರಕಟಿಸಿತ್ತು.
1995ರ ಒಪ್ಪಂದದ ಪ್ರಕಾರ ದಕ್ಷಿಣ ಭಾರತದ ಐದು ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ಒಡಿಶಾ ಹಾಗೂ ನಿರ್ದಿಷ್ಟ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾತ್ರ ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಹೆಸರನ್ನು ಬಳಸಬಹುದಾಗಿದೆ. ಉಳಿದ ರಾಜ್ಯಗಳಲ್ಲಿ ಆ ಹೆಸರನ್ನು ಬಳಸುವ ಹಕ್ಕು ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಇಲ್ಲ.
ಆದರೆ 2024ರಲ್ಲಿ ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಮುಂಬೈನಲ್ಲಿ ʼದ ನ್ಯೂ ಇಂಡಿಯನ್ ಎಕ್ಸ್ಪ್ರೆಸ್- ಮುಂಬೈ ಸಂವಾದʼ ಎಂಬ ಕಾರ್ಯಕ್ರಮ ಆಯೋಜಿಸಿತ್ತು. ಮುಂಬೈ ದಕ್ಷಿಣ ಭಾರತದ ವ್ಯಾಪ್ತಿಗೆ ಬರುವುದಿಲ್ಲ; ಹಾಗಾಗಿ ಇದು ಒಪ್ಪಂದದ ಉಲ್ಲಂಘನೆ ಎಂದು ದೂರಿ ಇಂಡಿಯನ್ ಎಕ್ಸ್‌ಪ್ರೆಸ್ ನ್ಯಾಯಾಲಯದ ಮೊರೆ ಹೋಗಿತ್ತು.
ವಾದ ಆಲಿಸಿದ ನ್ಯಾಯಾಲಯ ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ವ್ಯುತ್ಪತ್ತಿ ʼಇಂಡಿಯನ್ ಎಕ್ಸ್‌ಪ್ರೆಸ್ʼ ಪದದಿಂದ ಆವಿರ್ಭವಿಸಿದ್ದು ʼನ್ಯೂʼ ಎಂಬ ಪದ ಸೇರಿಸಿದ ಮಾತ್ರಕ್ಕೆ ಸ್ವತಂತ್ರ್ಯ ಅಸ್ತಿತ್ವ ರೂಪುಗೊಳ್ಳುವುದಿಲ್ಲ ಎಂದು ತೀರ್ಪು ನೀಡಿದೆ.
[ಆದೇಶದ ಪ್ರತಿ]