
ಜಿಲ್ಲಾ ನ್ಯಾಯಾಧೀಶರೊಬ್ಬರ ವಿರುದ್ಧದ ಅಕ್ರಮ ಸಂಬಂಧ ಮತ್ತು ಹಣಕಾಸು ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನ ಆಡಳಿತಾತ್ಮಕ ಸಮಿತಿಯು ತನಿಖಾ ಪ್ರಾಧಿಕಾರದ ವರದಿಯನ್ನು ಒಪ್ಪದಿರಲು ನಿರ್ಧರಿಸಿದ ಹೊರತಾಗಿಯೂ ವರದಿಯನ್ನು ಉಲ್ಲೇಖಿಸಿ ಸುದ್ದಿ ಪ್ರಕಟಿಸಿದ್ದ ಪ್ರಕರಣದಲ್ಲಿ ವಿಧಿಸಿರುವ ₹10 ಲಕ್ಷ ದಂಡದ ಆದೇಶ ಬದಿಗೆ ಸರಿಸುವಂತೆ ಕೋರಿ ಆಂಗ್ಲ ಪತ್ರಿಕೆ ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಮಾತೃ ಸಂಸ್ಥೆ ಎಕ್ಸ್‌ಪ್ರೆಸ್ ಪಬ್ಲಿಕೇಷನ್ಸ್ (ಮಧುರೈ) ಲಿಮಿಟೆಡ್ ಸಲ್ಲಿಸಿರುವ ಮೇಲ್ಮನವಿ ಕುರಿತು ನಿವೃತ್ತ ಜಿಲ್ಲಾ ನ್ಯಾಯಾಧೀಶರು ಹಾಗೂ ಹಾಲಿ ಹಿರಿಯ ವಕೀಲ (ವೀರಣ್ಣ ಜಿ. ತಿಗಡಿ) ಮತ್ತು ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಹೈಕೋರ್ಟ್ ಈಚೆಗೆ ನೋಟಿಸ್ ಜಾರಿ ಮಾಡಿದೆ.
ಎಕ್ಸ್‌ಪ್ರೆಸ್ ಪಬ್ಲಿಕೇಷನ್ಸ್ (ಮದುರೈ) ಲಿಮಿಟೆಡ್ ಮತ್ತು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರು ಪ್ರತ್ಯೇಕವಾಗಿ ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಎಕ್ಸ್‌ಪ್ರೆಸ್ ಪಬ್ಲಿಕೇಷನ್ಸ್ ಮೇಲ್ಮನವಿಗೆ ಸಂಬಂಧಿಸಿದಂತೆ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ವೀರಣ್ಣ ಜಿ. ತಿಗಡಿ ಮತ್ತು ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ನೋಟಿಸ್ ಜಾರಿ ಮಾಡಲಾಗಿದೆ. ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ವೀರಣ್ಣ ತಿಗಡಿ, ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಸೋಂಥಾಲಿಯಾ, ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ, ಕಾರ್ಯಕಾರಿ ಸಂಪಾದಕ ವಿ ಸುದರ್ಶನ್, ಕರ್ನಾಟಕ ಆವೃತ್ತಿ ಸಂಪಾದಕ ವಿ ಕೃಷ್ಣ, ಎಕ್ಸ್‌ಪ್ರೆಸ್ ಪಬ್ಲಿಕೇಷನ್ಸ್ (ಮದುರೈ) ಲಿಮಿಟೆಡ್ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್ ಆರ್ ಕೆ ಝುಂಜುನ್‌ವಾಲಾ, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಗಾರರಾಗಿದ್ದ ಉಮೇಶ್ ಯಾದವ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಜಿಲ್ಲಾ ನ್ಯಾಯಾಧೀಶರೊಬ್ಬರ ವಿರುದ್ಧದ ಅಕ್ರಮ ಸಂಬಂಧ ಮತ್ತು ಹಣಕಾಸು ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ತನಿಖಾ ವರದಿಯನ್ನು ಆಂಗ್ಲ ಪತ್ರಿಕೆ ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಗೆ ಸೋರಿಕೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತನಿಖೆ ನಡೆಸಬೇಕು ಎಂಬ ಏಕಸದಸ್ಯ ಪೀಠದ ನಿರ್ದೇಶನಕ್ಕೆ ವಿಭಾಗೀಯ ಪೀಠವು 2024ರ ಜೂನ್ 21ರಂದು ತಡೆಯಾಜ್ಞೆ ನೀಡಿತ್ತು. ಮೇಲ್ಮನವಿಯು ಇತ್ಯರ್ಥವಾಗುವವರೆಗೆ ತಡೆಯಾಜ್ಞೆ ಇರಲಿದೆ ಎಂದು ನ್ಯಾಯಾಲಯ ನಿರ್ದೇಶಿಸಿದೆ.
“ಅರ್ಜಿದಾರರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದ ಸಾರಾಂಶವನ್ನು ನೋಡಿದರೆ ಪತ್ರಿಕೆಗೆ ತನಿಖಾ ಪ್ರಾಧಿಕಾರದ ವರದಿ ಸಿಕ್ಕಿದೆ. ಆದರೆ, ತನಿಖಾ ಪ್ರಾಧಿಕಾರದ ವರದಿಯನ್ನು ಆಡಳಿತಾತ್ಮಕ ಸಮಿತಿಯ ಮುಂದಿಡಲಾಗುತ್ತದೆ. ಆನಂತರ ಅದರ ಸಂಬಂಧ ನಿರ್ಣಯ ಕೈಗೊಳ್ಳಲು ಎಲ್ಲಾ ದಾಖಲೆಗಳನ್ನು ಪೂರ್ಣ ನ್ಯಾಯಾಲಯದ ಮುಂದೆ ಇಡಲಾಗುತ್ತದೆ ಎಂಬ ಪ್ರಕ್ರಿಯೆ ಬಗ್ಗೆ ಪತ್ರಿಕೆಗೆ ತಿಳಿದಿಲ್ಲ ಎಂಬುದನ್ನು ಒಪ್ಪಲಾಗದು. ಆಡಳಿತಾತ್ಮಕ ಸಮಿತಿಯ ತೀರ್ಮಾನದ ಬಗ್ಗೆ ತಿಳಿದಿರಲಿಲ್ಲ. ಅದಕ್ಕಾಗಿ ಆ ಅಂಶವನ್ನು ಸುದ್ದಿಯಲ್ಲಿ ಅಡಕಗೊಳಿಸಿರಲಿಲ್ಲ ಎಂದು ತನ್ನ ಜವಾಬ್ದಾರಿಯಿಂದ ಪತ್ರಿಕೆ ನುಣುಚಿಕೊಳ್ಳಲಾಗದು” ಎಂದು ನ್ಯಾಯಾಲಯವು ದಂಡ ವಿಧಿಸುವ ವೇಳೆ ತನ್ನ ಆದೇಶದಲ್ಲಿ ಹೇಳಿತ್ತು.
“ಪತ್ರಿಕೆಯಲ್ಲಿ ವರದಿ ಪ್ರಕಟಿಸುವುದಕ್ಕೂ ಮುನ್ನ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಮತ್ತು ಅರ್ಜಿದಾರರನ್ನು ಸಂಪರ್ಕಿಸಿರುವ ಪತ್ರಿಕೆಯು ತನಿಖೆಗೆ ಸಂಬಂಧಿಸಿದಂತೆ ಪ್ರಕ್ರಿಯೆ ಬಗ್ಗೆ ತಿಳಿದಿರಲಿಲ್ಲ ಎಂದು ಹೇಳುವುದನ್ನು ಒಪ್ಪಲಾಗದು. ಪ್ರಕರಣ ಸೂಕ್ಷ್ಮವಾಗಿದ್ದು, ವೃತ್ತಿಪರವಾಗಿ ನಡೆದುಕೊಳ್ಳದೇ ಇರುವುದರಿಂದ ಅರ್ಜಿದಾರರಿಗೆ ಅಪಾರ ಹಾನಿಯಾಗಿದ್ದು, ನ್ಯಾಯಾಂಗ ಅಧಿಕಾರಿಯ ನಡತೆ ನಿರ್ಧರಿಸುವ ಸಂಪೂರ್ಣ ನ್ಯಾಯಾಂಗ ಪ್ರಕ್ರಿಯೆಗೆ ಹಿನ್ನಡೆಯಾಗಿದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.
“ಜವಾಬ್ದಾರಿಯುತವಾದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯು ಸಂಪೂರ್ಣ ಮಾಹಿತಿ ಪಡೆಯಬೇಕಿತ್ತು. ಹಿರಿಯ ನ್ಯಾಯಾಂಗ ಅಧಿಕಾರಿಗೆ ಸಂಬಂಧಿಸಿದ ಸೂಕ್ಷ್ಮ ಪ್ರಕರಣದ ಕುರಿತು ಅರೆಬೆಂದ ವಾಸ್ತವಿಕ ಅಂಶಗಳನ್ನು ಒಳಗೊಂಡ ವರದಿಯನ್ನು ಪತ್ರಿಕೆ ಪ್ರಕಟಿಸಬಾರದಿತ್ತು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿತ್ತು.
ಹೀಗಾಗಿ, “ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಮಾತೃ ಸಂಸ್ಥೆ ಎಕ್ಸ್‌ಪ್ರೆಸ್ ಪಬ್ಲಿಕೇಷನ್ಸ್ (ಮಧುರೈ) ಲಿಮಿಟೆಡ್‌ಗೆ ₹10 ಲಕ್ಷ ದಂಡ ವಿಧಿಸಲು ಇದು ಸೂಕ್ತ ಪ್ರಕರಣವಾಗಿದ್ದು, ಅದನ್ನು ಎರಡು ತಿಂಗಳ ಒಳಗಾಗಿ ಎಕ್ಸ್‌ಪ್ರೆಸ್ ಪಬ್ಲಿಕೇಷನ್ಸ್ ಸಂಸ್ಥೆಯು ರಾಜ್ಯ ಕಾನೂನು ಸೇವಗಳ ಪ್ರಾಧಿಕಾರಕ್ಕೆ ಪಾವತಿಸಬೇಕು” ಎಂದು ನ್ಯಾಯಾಲಯ ಆದೇಶಿಸಿತ್ತು. ಅಲ್ಲದೇ, 2013ರ ಮೇ 30ರ ತನಿಖಾ ಪ್ರಾಧಿಕಾರದ ವರದಿಯು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಹೇಗೆ ಸಿಕ್ಕಿತು ಎಂಬುದರ ಬಗ್ಗೆ ಹೈಕೋರ್ಟ್ ತನಿಖೆ ನಡೆಸಬೇಕು ಎಂದು ಆದೇಶಿಸಿತ್ತು.