Dogs 
ಸುದ್ದಿಗಳು

ನ್ಯಾಯಮೂರ್ತಿಗಳು ನಾಯಿ ಮಾಫಿಯಾದ ಭಾಗ ಎಂದ ಮಹಿಳೆ: ಒಂದು ವಾರ ಜೈಲು ಶಿಕ್ಷೆ ವಿಧಿಸಿದ ಬಾಂಬೆ ಹೈಕೋರ್ಟ್

ನ್ಯಾಯಮೂರ್ತಿಗಳು ನಾಯಿ ದಾಳಿಯ ಪುರಾವೆಗಳನ್ನು ನಿರ್ಲಕ್ಷಿಸಿದ್ದು ನಿವಾಸಿಗಳ ದೂರುಗಳನ್ನು ತಳ್ಳಿಹಾಕಿದ್ದಾರೆ ಎಂದು ಹೇಳುವ ಸುತ್ತೋಲೆಯನ್ನು ವಸತಿ ಸಂಘದ ಮುಖ್ಯಸ್ಥೆಯಾಗಿರುವ ಆರೋಪಿತೆ ಬಿಡುಗಡೆ ಮಾಡಿದ್ದರು.

Bar & Bench

ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು "ನಾಯಿ ಮಾಫಿಯಾದ" ಭಾಗವಾಗಿದ್ದಾರೆ ಎಂದು ಆರೋಪಿಸಿ ನೋಟಿಸ್ ಪ್ರಸರಣ ಮಾಡಿದ ಮಹಿಳೆಯೊಬ್ಬರಿಗೆ ಬಾಂಬೆ ಹೈಕೋರ್ಟ್ ಬುಧವಾರ ಒಂದು ವಾರ ಜೈಲು ಶಿಕ್ಷೆ ವಿಧಿಸಿದೆ [ಬಾಂಬೆ ಹೈಕೋರ್ಟ್‌ ಮತ್ತು  ವಿನೀತಾ ಶ್ರೀನಂದನ್ ನಡುವಣ ಪ್ರಕರಣ].

ಆಕೆ ನ್ಯಾಯಾಂಗ ನಿಂದನೆಯ ಅಪರಾಧಿ ಎಂಬುದು ನಮ್ಮ ಸ್ಪಷ್ಟ ಅಭಿಪ್ರಾಯ. ಆದ್ದರಿಂದ ಗರಿಷ್ಠ ಶಿಕ್ಷೆಗೆ ಅರ್ಹರು. ಅಪರಾಧಿಯ ವರ್ಗ ಲೆಕ್ಕಿಸದೆ ಅವರಿಗೂ ಕಾನೂನು ಸಮಾನವಾಗಿ ಅನ್ವಯಿಸುತ್ತದೆ. ಆದರೆ ಪ್ರಕರಣದ ಸಂದರ್ಭ ಮತ್ತು ಸನ್ನಿವೇಶಗಳನ್ನು ಗಮನಿಸಿ ಕಡಿಮೆ ಶಿಕ್ಷೆ ವಿಧಿಸಲು ಉದ್ದೇಶಿಸಿದ್ದೇವೆ ಎಂದು ನ್ಯಾಯಮೂರ್ತಿಗಳಾದ ಜಿ ಎಸ್ ಕುಲಕರ್ಣಿ ಮತ್ತು ಅದ್ವೈತ್ ಎಂ. ಸೇತ್ನಾ ಅವರಿದ್ದ ಪೀಠ ತಿಳಿಸಿತು. ಜೊತೆಗೆ ಅದು ₹2,000 ದಂಡವನ್ನೂ ವಿಧಿಸಿತು.

ಬೀದಿ ನಾಯಿಗಳ ನಿರ್ವಹಣೆಗೆ ಸಂಬಂಧಿಸಿದ ಪ್ರಾಣಿ ಜನನ ನಿಯಂತ್ರಣ ನಿಯಮಾವಳಿ, 2023ರ ನಿಯಮಾವಳಿ ಪ್ರಶ್ನಿಸಿ ನವಿ ಮುಂಬೈನ ವಸತಿ ಸಂಘವಾದ ಸೀವುಡ್ಸ್ ಎಸ್ಟೇಟ್ಸ್ ಲಿಮಿಟೆಡ್  ಅರ್ಜಿ ಸಲ್ಲಿಸಿತ್ತು. ಸಂಘದ ವಸತಿ ಸಮುಚ್ಛಯದಲ್ಲಿ ವಾಸಿಸುತ್ತಿರುವ ಲೀಲಾ ವರ್ಮಾ ವಸತಿ ಸಂಘದ ಕ್ರಮಗಳು ತಮ್ಮ ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತಿವೆ ಎಂದು ತಿಳಿಸಿ ಪ್ರಕರಣದಲ್ಲಿ ಭಾಗಿಯಾಗಲು ಕೇಳಿಕೊಂಡಿದ್ದರು. ತಮ್ಮ ಕೋರಿಕೆಗೆ ಪೂರಕವಾದ ದಾಖಲೆಯಾಗಿ, ಆ ಸಮಯದಲ್ಲಿ ಸಂಘದ ಸಾಂಸ್ಕೃತಿಕ ನಿರ್ದೇಶಕಿಯಾಗಿದ್ದ ವಿನೀತಾ ಶ್ರೀನಂದನ್  ನೀಡಿದ್ದ ಸುತ್ತೋಲೆಯನ್ನು ಅವರು ಸಲ್ಲಿಸಿದ್ದರು.

ಸುತ್ತೋಲೆಯನ್ನು ವಸತಿ ಸಂಕೀರ್ಣದಲ್ಲಿ ವಾಸಿಸುವ 1,500 ಕುಟುಂಬಗಳಿಗೆ ಹಂಚಲಾಗಿತ್ತು. ದೇಶದ ನಗರ ಪ್ರದೇಶಗಳು 'ನಾಯಿಗೆ ಆಹಾರ ಹಾಕುವವರ ಮಾಫಿಯಾ'ಗೆ ಗುರಿಯಾಗಿವೆ. ಈ ಮಾಫಿಯಾದಲ್ಲಿ ಸಹಾನುಭೂತಿ ಹೊಂದಿರುವ ನ್ಯಾಯಮೂರ್ತಿಗಳು ಸಹ ಇದ್ದಾರೆ. ನ್ಯಾಯಮೂರ್ತಿಗಳು ಶ್ವಾನದಾಳಿಯ ಪುರಾವೆ ನಿರ್ಲಕ್ಷಿಸುತ್ತಿದ್ದು ನಿವಾಸಿಗಳ ದೂರುಗಳನ್ನು ವಜಾಗೊಳಿಸುತ್ತಿದ್ದಾರೆ ಎಂದು ತಿಳಿಸಲಾಗಿತ್ತು.

"ದೇಶದಲ್ಲಿ ಒಂದು ದೊಡ್ಡ ನಾಯಿ ಮಾಫಿಯಾ ಕಾರ್ಯನಿರ್ವಹಿಸುತ್ತಿದೆ ಎಂದು ಈಗ ನಮಗೆ ಮನವರಿಕೆಯಾಗಿದೆ. ನಾಯಿಗಳಿಗೆ ಆಹಾರ ನೀಡುವವರು ಹೊಂದಿರುವಂಥದ್ದೇ ಅಭಿಪ್ರಾಯಗಳನ್ನು ಹೊಂದಿರುವ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಪಟ್ಟಿಯೂ ಇದರಲ್ಲಿದೆ. ದೇಶದಲ್ಲಿ ಪ್ರತಿ ವರ್ಷ ಎಷ್ಟೇ ಜನರು ಸಾಯುತ್ತಿದ್ದರೂ ಅಥವಾ ದಾಳಿಗೊಳಗಾದರೂ ಪರವಾಗಿಲ್ಲ, ಆದರೆ ಬಹುತೇಕ ಹೈಕೋರ್ಟ್/ಸುಪ್ರೀಂ ಕೋರ್ಟ್ ಆದೇಶಗಳು ಮಾನವ ಜೀವನದ ಮೌಲ್ಯವನ್ನು ನಿರ್ಲಕ್ಷಿಸಿ ನಾಯಿಗಳಿಗೆ ಆಹಾರ ನೀಡುವವರನ್ನು ರಕ್ಷಿಸುತ್ತವೆ " ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿತ್ತು.

ಇದರ ನಂತರ, ನ್ಯಾಯಾಲಯವು ವಿನೀತಾ ಶ್ರೀನಂದನ್ ಮತ್ತು ಸೀವುಡ್ಸ್ ಎಸ್ಟೇಟ್ಸ್‌ಗೆ ನ್ಯಾಯಾಂಗ ನಿಂದನೆಗೆ ಸಂಬಂಧಿಸಿದಂತೆ ಶೋಕಾಸ್‌ ನೋಟಿಸ್‌ ನೀಡಿತ್ತು. ಸುತ್ತೋಲೆಗೂ ತನಗೂ ಸಂಬಂಧವಿಲ್ಲ ಎಂದು ಸೀವುಡ್ಸ್‌ ಎಸ್ಟೇಟ್ಸ್‌ ಕಂಪೆನಿ ತಿಳಿಸಿತ್ತು. ಕ್ಷಮೆ ಯಾಚಿಸಿದ್ದ ಅದು ಮುಖ್ಯಸ್ಥೆಯ ಮಾತುಗಳು ಅಜಾಗರೂಕವಾದವು ಎಂದು ತಿಳಿಸಿತ್ತು. ಅದನ್ನು ಮನ್ನಿಸಿದ್ದ ನ್ಯಾಯಾಲಯ ಅದರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟಿತ್ತು.

ಆದರೆ ವಿನೀತಾ ಅವರು ಸಲ್ಲಿಸಿದ್ದ ಕ್ಷಮೆಯಾಚನೆ ಅಫಿಡವಿಟ್‌ ಒಪ್ಪದ ನ್ಯಾಯಾಲಯ ಇದೊಂದು ಕಣ್ಣೊರೆಸುವ ತಂತ್ರ, ಕ್ಷಮಿಸಿ ಎನ್ನುವ ವಾಡಿಕೆಯ ಮಂತ್ರ ಎಂದಿತು. ಅಂತೆಯೇ ಹೈಕೋರ್ಟ್‌ ಆವರಣದಲ್ಲಿರುವ ಪೊಲೀಸ್‌ ಠಾಣೆಗೆ ಶರಣಾಗುವಂತೆ ವಿನೀತಾ ಅವರಿಗೆ ಆದೇಶಿಸಿತು. ಆದರೆ ಆಕೆಯ ಪರ ವಕೀಲರ ಕೋರಿಕೆಯಂತೆ ಆಕೆಗೆ ವಿಧಿಸಿರುವ ಶಿಕ್ಷೆಯನ್ನು 10 ದಿನಗಳವರೆಗೆ ಅಮಾನತುಗೊಳಿಸಿತು.