
ಸುಪ್ರೀಂ ಕೋರ್ಟ್ ಮತ್ತು ಸಿಜೆಐ ಸಂಜೀವ್ ಖನ್ನಾ ಅವರ ವಿರುದ್ಧ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಲು ಅಟಾರ್ನಿ ಜನರಲ್ ಅವರ ಅನುಮತಿ ಪಡೆಯಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ವಕೀಲರೊಬ್ಬರಿಗೆ ತಿಳಿಸಿದೆ .
ವಕೀಲರಿಗೆ, ಎಜಿ ಮುಂದೆ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಎ ಜಿ ಮಸಿಹ್ ಅವರಿದ್ದ ಪೀಠ ತಿಳಿಸಿತು.
1971ರ ನ್ಯಾಯಾಂಗ ನಿಂದನೆ ಕಾಯಿದೆ ಪ್ರಕಾರ, ಖಾಸಗಿ ವ್ಯಕ್ತಿಯೊಬ್ಬರು ಅಟಾರ್ನಿ ಜನರಲ್ ಅಥವಾ ಸಾಲಿಸಿಟರ್ ಜನರಲ್ ಅವರ ಒಪ್ಪಿಗೆ ಪಡೆದ ನಂತರವೇ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಬಹುದು.
ಕಳೆದ ವಾರ ಏಷ್ಯನ್ ನ್ಯೂಸ್ ಇಂಟರ್‌ನ್ಯಾಷನಲ್ (ಎಎನ್‌ಐ) ಗೆ ನೀಡಿದ ಸಂದರ್ಶನದಲ್ಲಿ ದುಬೆ, ದೇಶದಲ್ಲಿ ನಡೆಯುವ ಎಲ್ಲಾ ಅಂತರ್ಯುದ್ಧಕ್ಕೆ ಸಿಜೆಐ ಖನ್ನಾ ಅವರೇ ಕಾರಣ ಎಂದು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಕೆಲ ವಕೀಲರು ನ್ಯಾಯಾಂಗ ನಿಂದನೆ ಕಾಯಿದೆಯಡಿ ಅರ್ಜಿ ಸಲ್ಲಿಸಲು ಅನುಮತಿ ಕೋರಿ ಎಜಿಗೆ ಪತ್ರ ಬರೆದಿದ್ದಾರೆ.
ಕಾರ್ಯಾಂಗದ ನಿರ್ಧಾರವನ್ನು ನ್ಯಾಯಾಂಗ ತೆಗೆದುಕೊಳ್ಳುತ್ತಿದೆ. ನ್ಯಾಯಾಂಗ ಆದೇಶಗಳ ಮೂಲಕ ಕಾಯಿದೆ ಬರೆಯಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು ನ್ಯಾಯಂಗದ ವಿರುದ್ಧ ಅದರಲ್ಲಿಯೂ ಸುಪ್ರೀಂ ಕೋರ್ಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹೊತ್ತಿನಲ್ಲಿ ದುಬೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ವಕ್ಫ್ ತಿದ್ದುಪಡಿ ಕಾಯಿದೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದ ಹಿನ್ನೆಲೆಯಲ್ಲಿ ವಿವಾದಾತ್ಮಕ ಕಾಯಿದೆಯ ಕೆಲವು ನಿಬಂಧನೆಗಳನ್ನು ಜಾರಿಗೆ ತರದಿರಲು ಸರ್ಕಾರ ಒಪ್ಪಿಕೊಂಡಿತ್ತು. ಅದರ ಬೆನ್ನಿಗೇ ದುಬೆ ಸಿಜೆಐ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದರು.
ಇದಕ್ಕೂ ಮುನ್ನ, ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್, ದೇಶದಲ್ಲಿ ನ್ಯಾಯಾಧೀಶರಿಗೆ ಯಾವುದೇ ಹೊಣೆಗಾರಿಕೆ ಇಲ್ಲ ಮತ್ತು ದೇಶದ ಕಾನೂನು ಅವರಿಗೆ ಅನ್ವಯಿಸುವುದಿಲ್ಲ ಎಂದು ಟೀಕಿಸಿದ್ದರು.
ರಾಜ್ಯ ಶಾಸಕಾಂಗಗಳು ಜಾರಿಗೆ ತಂದ ಮಸೂದೆಗಳ ಅಂಗೀಕಾರಕ್ಕೆ ಸಂಬಂಧಿಸಿದಂತೆ ಭಾರತದ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳ ಅಧಿಕಾರಗಳ ವ್ಯಾಖ್ಯಾನದ ಕುರಿತು ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪಿನ ನಂತರ ಧನಕರ್ ನ್ಯಾಯಾಂಗದ ವಿರುದ್ಧ ಹರಿಹಾಯ್ದಿದ್ದರು.
ಈ ಹೇಳಿಕೆಗಳ ಕುರಿತಂತೆಯೂ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ರಾಜ್ಯ ಸಭೆಯ ಸ್ಪೀಕರ್ ಆಗಿರುವ ದುಬೆ ಅವರ ಹೇಳಿಕೆ ಸುಪ್ರೀಂ ಕೋರ್ಟನ್ನು ದುರ್ಬಲಗೊಳಿಸುವ ಯತ್ನ ಎಂದು ಕಾಂಗ್ರೆಸ್‌ನ ಜೈರಾಂ ರಮೇಶ್ ಟೀಕಿಸಿದ್ದರು. ಇತ್ತ ಧನಕರ್ ಹೇಳಿಕೆಗೆ ಡಿಎಂಕೆ ಅಸಮಾಧಾನ ವ್ಯಕ್ತಪಡಿಸಿತ್ತು.