ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರ ಖಾತೆಯನ್ನು ವಂಚನೆ ವರ್ಗಕ್ಕೆ ಸೇರಿಸಿದ್ದ ಬ್ಯಾಂಕ್ ಆಫ್ ಇಂಡಿಯಾದ ನಿರ್ಧಾರವನ್ನು ಬಾಂಬೆ ಹೈಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿತು [ನರೇಶ್ ಗೋಯಲ್ ಮತ್ತು ಬ್ಯಾಂಕ್ ಆಫ್ ಇಂಡಿಯಾ ನಡುವಣ ಪ್ರಕರಣ].
ನಿರ್ಧಾರ ತೆಗೆದುಕೊಳ್ಳುವ ಮೊದಲು ಬ್ಯಾಂಕ್ ಗೋಯಲ್ ಅವರ ಅಹವಾಲು ಆಲಿಸಿಲ್ಲ ಎಂದು ನ್ಯಾಯಮೂರ್ತಿಗಳಾದ ಆರ್ ಐ ಚಾಗ್ಲಾ ಮತ್ತು ಫರ್ಹಾನ್ ಪಿ ದುಬಾಶ್ ಅವರಿದ್ದ ಪೀಠ ಸೆಪ್ಟೆಂಬರ್ 25 ರಂದು ನೀಡಿದ ತೀರ್ಪಿನಲ್ಲಿ ತಿಳಿಸಿದೆ.
ಅರ್ಜಿದಾರರ ಖಾತೆಯನ್ನು "ವಂಚನೆ" ಎಂದು ವರ್ಗೀಕರಿಸುವ ಮುನ್ನ ಅರ್ಜಿದಾರರು ತಮ್ಮ ವಾದ ಮಂಡಿಸಲು ಅವಕಾಶ ನೀಡಿಲ್ಲ. ಈ ಹಿಂದೆ ಅರ್ಜಿದಾರರ ಖಾತೆಯನ್ನು "ವಂಚನೆ" ಎಂದು ವರ್ಗೀಕರಿಸಲಾಗಿತ್ತು ಎನ್ನುವುದು ಎದುರಾಳಿಯ ವಾದ ಆಲಿಸಬೇಕೆಂಬ ನಿಯಮದ ಪಾಲನೆಯಾಗದು ಎಂದ ನ್ಯಾಯಾಲಯವು ಬ್ಯಾಂಕ್ ನಿರ್ಧಾರವನ್ನು ಮತ್ತು ಆ ಸಂಬಂಧ ಜುಲೈ 1, 2025ರಂದು ನೀಡಿದ್ದ ಶೋಕಾಸ್ ನೋಟಿಸನ್ನು ಬದಿಗೆ ಸರಿಸಿತು.
ಬ್ಯಾಂಕಿನ ಕ್ರಮಗಳು ಅನಿಯಂತ್ರಿತವಾದುದಾಗಿದ್ದು, ಸ್ವಾಭಾವಿಕ ನ್ಯಾಯದ ತತ್ವ ಉಲ್ಲಂಘಿಸಿದೆ ಎಂದು ಗೋಯಲ್ ವಾದಿಸಿದ್ದರು. ತನ್ನ ಖಾತೆ ವಂಚನೆಯಿಂದ ಕೂಡಿದೆ ಎಂದು ಘೋಷಿಸುವ ಯಾವುದೇ ಆದೇಶದ ಪ್ರತಿಯನ್ನು ತನಗೆ ನೀಡಲಾಗಿಲ್ಲ ಇದರಿಂದಾಗಿ ವಂಚನೆ ವರ್ಗೀಕರಣ ಆಧಾರರಹಿತವಾದುದು ಎಂದು ಅವರು ಹೇಳಿದ್ದರು.
ಬ್ಯಾಂಕ್ ತನ್ನ ಕ್ರಮಗಳನ್ನು ಸಮರ್ಥಿಸಿಕೊಂಡರೂ, ಹಿಂದಿನ ವರ್ಗೀಕರಣ ಅಥವಾ ಜುಲೈ 2025ರ ಸೂಚನೆಯ ಅನುಸಾರ ಯಾವುದೇ ಕ್ರಮ ತೆಗೆದುಕೊಳ್ಳಲಾಗುವುದಿಲ್ಲ ಎಂದು ಅದರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಈ ಭರವಸೆಯನ್ನು ದಾಖಲಿಸಿಕೊಂಡ ನ್ಯಾಯಾಲಯ ವಂಚನೆ ವರ್ಗೀಕರಣ ಆಧರಿಸಿ ಕ್ರಮ ಕೈಗೊಳ್ಳದಂತೆ ಬ್ಯಾಂಕ್‌ಗೆ ನಿರ್ಬಂಧ ವಿಧಿಸಿತು.
ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದಾಗಿ ಶೋಕಾಸ್ ನೋಟಿಸ್ ಜಾರಿ ಮಾಡಲು ಬ್ಯಾಂಕ್‌ಗೆ ಸ್ವಾತಂತ್ರ್ಯವಿದೆ. ಇದನ್ನು ಬೇರೆ ಸಮಿತಿಯೊಂದು ಸ್ವಾಭಾವಿಕ ನ್ಯಾಯದ ತತ್ವದನುಸಾರವಾಗಿ ಮಾಡಿದರೆ ಮಾತ್ರ ಇದಕ್ಕೆ ಅನುವು ಮಾಡಿಕೊಡಲಾಗುವುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಗೋಯಲ್ ಅವರ ಪರವಾಗಿ ಹಿರಿಯ ವಕೀಲ ಶರಣ್ ಜಗ್ತಿಯಾನಿ ಮತ್ತವರ ತಂಡ ವಾದ ಮಂಡಿಸಿತು. ಬ್ಯಾಂಕ್ ಆಫ್ ಇಂಡಿಯಾವನ್ನು ವಕೀಲ ಅಭಿನವ್ ಚಂದ್ರಚೂಡ್ ಹಾಗೂ ಅವರ ತಂಡ ಪ್ರತಿನಿಧಿಸಿತ್ತು. ಮತ್ತೊಬ್ಬ ಪ್ರತಿವಾದಿಯ ಪರವಾಗಿ ವಕೀಲ ಹುಜನ್ ಭೂಮ್‌ಗರಾ ಹಾಗೂ ಮತ್ತವರ ತಂಡ ಹಾಜರಾಗಿತ್ತು.