
ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶಗಳಾದ ನೋಯ್ಡಾ, ಗ್ರೇಟರ್ ನೋಯ್ಡಾ, ಗುರುಗ್ರಾಮ, ಗಾಜಿಯಾಬಾದ್ ಸುತ್ತಮುತ್ತಲಿನ ಮನೆ ಖರೀದಿದಾರರ ವಿರುದ್ಧ ಬಿಲ್ಡರ್‌ಗಳು ಮತ್ತು ಬ್ಯಾಂಕ್‌ಗಳ ನಂಟು ಹಾಗೂ ಸಾಲ ವಂಚನೆಯ ಆರೋಪಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಸಿಬಿಐಗೆ ನಿರ್ದೇಶನ ನೀಡಿದೆ [ಹಿಮಾನ್ಶು ಸಿಂಗ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ನ್ಯಾಯಾಲಯ ಈ ಹಿಂದೆ ಏಳು ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆಗೆ ಆದೇಶಿಸಿತ್ತು. ಸಿಬಿಐ ನಡೆಸಿದ ಏಳನೇ ಪ್ರಕರಣದ ತನಿಖೆಯಲ್ಲಿ ಸಂಜ್ಞೇಯ ಅಪರಾಧ ನಡೆದಿರುವುದು ಪತ್ತೆಯಾಗಿದೆ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ , ಉಜ್ಜಲ್ ಭುಯಾನ್ ಹಾಗೂ ಎನ್ ಕೆ ಸಿಂಗ್ ಅವರಿದ್ದ ಪೀಠಕ್ಕೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ತಿಳಿಸಿದರು.
ಮುಚ್ಚಿದ ಲಕೋಟೆಯಲ್ಲಿ ಸಿಬಿಐ ಸಲ್ಲಿಸಿದ್ದ ವರದಿ ಸ್ವೀಕರಿಸಿದ ನ್ಯಾಯಾಲಯ ಸಂಸ್ಥೆ ಪ್ರಾಥಮಿಕ ತನಿಖಾ ಹಂತ ಮೀರಿ ಮುಂದುವರಿಯಬೇಕೆಂದು ನಿರ್ದೇಶಿಸಿತು. ಅಪರಾಧಿಕ ಅಂಶಗಳಿರುವ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲು ಸೇರಿದಂತೆ ಕಾನೂನಿನಡಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಅದು ಸಿಬಿಐಗೆ ತಿಳಿಸಿತು.
ನೋಯ್ಡಾ, ಗ್ರೇಟರ್ ನೋಯ್ಡಾ, ಗುರುಗ್ರಾಮ್, ಗಾಜಿಯಾಬಾದ್ ಹಾಗೂ ಅದರಾಚೆಗಿನ ವಸತಿ ಯೋಜನೆಗಳಲ್ಲಿ ಬಿಲ್ಡರ್‌ಗಳು ಮತ್ತು ಹಣಕಾಸು ಸಂಸ್ಥೆಗಳ ನಡುವೆ ದೊಡ್ಡ ಪ್ರಮಾಣದ ಒಪ್ಪಂದ ನಡೆದಿದೆ ಎಂದು ಆರೋಪಿಸಿ 1,200 ಕ್ಕೂ ಹೆಚ್ಚು ಮನೆ ಖರೀದಿದಾರರು ಅರ್ಜಿ ಸಲ್ಲಿಸಿದ್ದರು.
ಬ್ಯಾಂಕುಗಳು ಮತ್ತು ಡೆವಲಪರ್‌ಗಳ ನಡುವಿನ "ಅಪವಿತ್ರ ಸಂಬಂಧ" ಎಂದು ನಂತರ ವಿವರಿಸಿದ ಏಳು ಪ್ರತ್ಯೇಕ ಪ್ರಾಥಮಿಕ ವಿಚಾರಣೆಗಳನ್ನು ನಡೆಸುವಂತೆ ಸುಪ್ರೀಂ ಕೋರ್ಟ್ ಕಳೆದ ಏಪ್ರಿಲ್‌ನಲ್ಲಿ ಸಿಬಿಐಗೆ ಆದೇಶಿಸಿತ್ತು.
2013 ಮತ್ತು 2015ರ ನಡುವೆ ಪ್ರಚಾರಗೊಂಡ ಸಾಲ ಯೋಜನೆಗಳಲ್ಲಿ ಅಕ್ರಮ ಕಂಡುಬಂದಿದ್ದ ಹಿನ್ನೆಲೆಯಲ್ಲಿ ಗುಪ್ತಚರ ವಿಭಾಗದ ಮಾಜಿ ನಿರ್ದೇಶಕ ಹಾಗೂ ಅಮಿಕಸ್ ಕ್ಯೂರಿ ರಾಜೀವ್ ಜೈನ್ ಸಲ್ಲಿಸಿದ್ದ ವರದಿ ಹಿನ್ನೆಲೆಯಲ್ಲಿ ಈ ನಿರ್ದೇಶನ ನೀಡಲಾಗಿದೆ.
ಈ ಯೋಜನೆಗಳ ಅಡಿಯಲ್ಲಿ, ಖರೀದಿದಾರರು ಕೇವಲ ಒಂದು ಸಣ್ಣ ಮೊತ್ತವನ್ನು ಮಾತ್ರ ಪಾವತಿಸಬೇಕಾಗಿತ್ತು, ಬ್ಯಾಂಕುಗಳು ಉಳಿದ ಸಾಲವನ್ನು ನೇರವಾಗಿ ಬಿಲ್ಡರ್‌ಗಳಿಗೆ ಮುಂಗಡವಾಗಿ ಬಿಡುಗಡೆ ಮಾಡಿದ್ದವು. 2018–19ರ ವೇಳೆಗೆ ಅನೇಕ ಯೋಜನೆಗಳು ಸ್ಥಗಿತಗೊಂಡರೂ ಬ್ಯಾಂಕುಗಳು ಮನೆ ಸ್ವಾಧೀನವಾಗದೆ ಹೋದರೂ ಅವುಗಳ ಖರೀದಿದಾರರಿಂದ ಇಎಂಐ ವಸೂಲಿ ಮಾಡುವುದನ್ನು ಮುಂದುವರೆಸಿದ್ದವು.