Lalit Modi and Bombay High Court 
ಸುದ್ದಿಗಳು

ಬಿಸಿಸಿಐ ವಿರುದ್ಧ ತಪ್ಪು ಗ್ರಹಿಕೆಯ ಅರ್ಜಿ ಸಲ್ಲಿಕೆ: ಲಲಿತ್‌ ಮೋದಿಗೆ ₹1 ಲಕ್ಷ ದಂಡ ವಿಧಿಸಿದ ಬಾಂಬೆ ಹೈಕೋರ್ಟ್‌

ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ ಉಲ್ಲಂಘಿಸಿದ್ದಕ್ಕಾಗಿ ಜಾರಿ ನಿರ್ದೇಶನಾಲಯ ತಮಗೆ ವಿಧಿಸಿರುವ ₹10.65 ಕೋಟಿ ದಂಡವನ್ನು ಪಾವತಿಸಲು ಬಿಸಿಸಿಐಗೆ ನಿರ್ದೇಶಿಸಬೇಕು ಎಂದು ಲಲಿತ್‌ ಮೋದಿ ಅರ್ಜಿ ಮುಖೇನ ಕೋರಿದ್ದರು.

Bar & Bench

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರುದ್ಧ ತಪ್ಪುಗ್ರಹಿಕೆಯ ಅರ್ಜಿ ಸಲ್ಲಿಸಿದ್ದಕ್ಕಾಗಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮಾಜಿ ಮುಖ್ಯಸ್ಥ ಲಲಿತ್‌ ಮೋದಿಗೆ ಬಾಂಬೆ ಹೈಕೋರ್ಟ್‌ ಈಚೆಗೆ ₹1 ಲಕ್ಷ ದಂಡ ವಿಧಿಸಿದೆ.

2009ರಲ್ಲಿ ಐಪಿಎಲ್‌ಗೆ ಸಂಬಂಧಿಸಿದಂತೆ ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ ಉಲ್ಲಂಘಿಸಿದ್ದಕ್ಕಾಗಿ ಜಾರಿ ನಿರ್ದೇಶನಾಲಯ ತನಗೆ ವಿಧಿಸಿರುವ ₹10.65 ಕೋಟಿ ದಂಡವನ್ನು ಪಾವತಿಸಲು ಬಿಸಿಸಿಐಗೆ ನಿರ್ದೇಶಿಸಬೇಕು ಎಂದು ಕೋರಿ ಲಲಿತ್‌ ಮೋದಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಂ ಎಸ್‌ ಸೋನಕ್‌ ಮತ್ತು ಜಿತೇಂದ್ರ ಜೈನ್‌ ಅವರ ವಿಭಾಗೀಯ ಪೀಠ ವಜಾ ಮಾಡಿದೆ.

“ಅರ್ಜಿಯು ಕ್ಷುಲ್ಲಕವಾಗಿದ್ದು, ಊರ್ಜಿತವಾಗುವುದಿಲ್ಲ. ಹೀಗಾಗಿ, ಅರ್ಜಿ ವಜಾ ಮಾಡಲಾಗಿದೆ. ಲಲಿತ್‌ ಮೋದಿ ಅವರು ₹1 ಲಕ್ಷ ದಂಡವನ್ನು ಟಾಟಾ ಸ್ಮಾರಕ ಆಸ್ಪತ್ರೆಗೆ ಪಾವತಿಸಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.

ಬಿಸಿಸಿಐ ಯಾವುದೇ ಸಾರ್ವಜನಿಕ ಕಾರ್ಯನಿರ್ವಹಣೆ ಮಾಡುವುದಿಲ್ಲ. ಹೀಗಾಗಿ, ಲಲಿತ್‌ ಮೋದಿಗೆ ಜಾರಿ ನಿರ್ದೇಶನಾಲಯ ವಿಧಿಸಿರುವ ದಂಡವನ್ನು ಪಾವತಿಸಲು ಬಿಸಿಸಿಐಗೆ ನಿರ್ದೇಶಿಸಲಾಗದು ಎಂದು ನ್ಯಾಯಾಲಯ ಹೇಳಿದೆ.

2009ರ ಐಪಿಎಲ್‌ಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ನಡೆಸಿದ್ದ ವಿಸ್ತೃತ ತನಿಖೆಯಲ್ಲಿ ₹243 ಕೋಟಿಯನ್ನು ಫೆಮಾ ಕಾಯಿದೆಗೆ ವಿರುದ್ಧವಾಗಿ ಭಾರತದ ಹೊರಗಡೆ ವರ್ಗಾಯಿಸಲಾಗಿತ್ತು. 2009ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್‌ ನಡೆದಿತ್ತು.

2018ರಲ್ಲಿ ಜಾರಿ ನಿರ್ದೇಶನಾಲಯವು ಬಿಸಿಸಿಐ, ಅದರ ಅಂದಿನ ಮುಖ್ಯಸ್ಥ ಎನ್‌ ಶ್ರೀನಿವಾಸನ್‌ ಸೇರಿ ಹಲವರಿಗೆ ₹121.56 ಕೋಟಿ ದಂಡ ವಿಧಿಸಿತ್ತು. ಇದರಲ್ಲಿ ಲಲಿತ್‌ ಮೋದಿ ₹10.65 ಕೋಟಿ ಪಾವತಿಸಬೇಕಿತ್ತು. ಇದನ್ನು ತನ್ನ ಪರವಾಗಿ ಪಾವತಿಸಲು ಬಿಸಿಸಿಐಗೆ ನಿರ್ದೇಶಿಸಬೇಕು ಎಂದು ಲಲಿತ್‌ ಮೋದಿ ಅರ್ಜಿ ಸಲ್ಲಿಸಿದ್ದರು.