ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಚಿತ್ರಕ್ಕೆ ಪ್ರಮಾಣಪತ್ರ ನೀಡಲು ನಿರಾಕರಿಸಿದ್ದನ್ನು ಪ್ರಶ್ನಿಸಿ 'ಅಜಯ್: ದಿ ಅನ್‌ಟೋಲ್ಡ್ ಸ್ಟೋರಿ' ಚಿತ್ರದ ನಿರ್ಮಾಪಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಚಿತ್ರವನ್ನು ಖುದ್ದು ವೀಕ್ಷಿಸುವುದಾಗಿ ಗುರುವಾರ ತಿಳಿಸಿದೆ.
'ದಿ ಮಾಂಕ್ ಹೂ ಬಿಕಮ್ ಚೀಫ್ ಮಿನಿಸ್ಟರ್' ಪುಸ್ತಕದಿಂದ ಸ್ಫೂರ್ತಿ ಪಡೆದ ಈ ಚಿತ್ರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೀವನ ಆಧರಿಸಿದೆ ಎಂದು ಹೇಳಲಾಗಿದೆ.
ಸಿಬಿಎಫ್‌ಸಿ ಆಕ್ಷೇಪ ಎತ್ತಿರುವ ದೃಶ್ಯಗಳನ್ನು ಸ್ಪಷ್ಟವಾಗಿ ಗುರುತಿಸಲಾದ ಚಿತ್ರದ ಪ್ರತಿಯನ್ನು ವೀಕ್ಷಣೆಗೆ ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ನೀಲಾ ಗೋಖಲೆ ಅವರಿದ್ದ ಪೀಠ ತಿಳಿಸಿತು.
ಚಿತ್ರದ ಮೂಲ ಕತೆ ಇರುವ ಪುಸ್ತಕದ ಪ್ರತಿಯನ್ನು ಈಗಾಗಲೇ ನ್ಯಾಯಾಲಯಕ್ಕೆ ನೀಡಲಾಗಿದೆ. ಈ ಹಿಂದೆ ಆಗಸ್ಟ್ 7ರಂದು ಹೊರಡಿಸಲಾಗಿದ್ದ ಆದೇಶದಲ್ಲಿ, ಸಿಬಿಎಫ್‌ಸಿಗೆ ಚಿತ್ರವ ವೀಕ್ಷಿಸಿ ಅಗತ್ಯ ಬದಲಾವಣೆ ಇದ್ದರೆ ಪರಿಗಣಿಸುವಂತೆ ಹಾಗೂ ಆಗಸ್ಟ್ 11 ರೊಳಗೆ ಚಲನಚಿತ್ರ ನಿರ್ಮಾಪಕರೊಂದಿಗೆ ಆಕ್ಷೇಪಣೆ ಹಂಚಿಕೊಳ್ಳುವಂತೆ ನ್ಯಾಯಾಲಯ ನಿರ್ದೇಶಿಸಿತ್ತು.
ಆಗಸ್ಟ್ 11 ರಂದು ಸಿಬಿಎಫ್‌ಸಿ ʼಪರಿಶೀಲನಾ ಸಮಿತಿʼ 29 ದೃಶ್ಯಗಳಿಗೆ ಆಕ್ಷೇಪ ವ್ಯಕ್ತಪಡಿಸಿತ್ತಾದರೂ ನಿರ್ಮಾಪಕರು ಯಾವುದೇ ಬದಲಾವಣೆಗಳ ಪ್ರಸ್ತಾವನೆ ನೀಡದ ಹಾಗೂ ಪ್ರತಿಕ್ರಿಯಿಸಿದ ಹಿನ್ನೆಲೆಯಲ್ಲಿ ಸಿಬಿಎಫ್‌ಸಿಯ ʼಪುನರ್‌ಪರಿಶೀಲನಾ ಸಮಿತಿʼ ತಾನೇ ಖುದ್ದು ಚಿತ್ರ ವೀಕ್ಷಿಸಲು ಮುಂದಾಗಿತ್ತು.
ಈ ಸಮಿತಿ ಪರಿಶೀಲನಾ ಸಮಿತಿ ಆಕ್ಷೇಪ ಎತ್ತಿದ್ದ 8 ದೃಶ್ಯಗಳನ್ನು ಉಳಿಸಿಕೊಂಡಿತ್ತು. ಆದರೆ ಆಗಸ್ಟ್ 17ರಂದು ಪ್ರಮಾಣಪತ್ರ ತಿರಸ್ಕರಿಸಿತ್ತು. ಸೋಮವಾರ (ಆಗಸ್ಟ್ 18), ಪರಿಷ್ಕರಣಾ ಸಮಿತಿಯ ತಿರಸ್ಕಾರ ಅರ್ಜಿ ಪ್ರಶ್ನಿಸುವುದಕ್ಕಾಗಿ ತಮ್ಮ ಅರ್ಜಿ ತಿದ್ದುಪಡಿ ಮಾಡಲು ಚಲನಚಿತ್ರ ನಿರ್ಮಾಪಕರು ನ್ಯಾಯಾಲಯದ ಅನುಮತಿ ಕೋರಿದ್ದರು.
ಸಿನಿಮಾಟೋಗ್ರಾಫ್ ಕಾಯಿದೆಯಡಿಯಲ್ಲಿ ಮೇಲ್ಮನವಿ ಸಲ್ಲಿಸಬಹುದಾದ್ದರಿಂದ ತಿದ್ದುಪಡಿ ಮಾಡಿದ ಅರ್ಜಿ ನಿರ್ವಹಣಾರ್ಹವೇ ಎಂದು ಮೊದಲು ನಿರ್ಧರಿಸಲು ನ್ಯಾಯಾಲಯ ಪ್ರಕರಣವನ್ನು ಇಂದು ಕೈಗೆತ್ತಿಕೊಂಡಿತ್ತು. ಆಗಸ್ಟ್ 25 ರಂದು ಪ್ರಕರಣದ ವಿಚಾರಣೆ ನಡೆಸಲಿದೆ.