Bombay High court
Bombay High court 
ಸುದ್ದಿಗಳು

ಮುಂಬೈ ಮಾಜಿ ಪೊಲೀಸ್‌ ಆಯುಕ್ತರನ್ನು ಬಂಧಿಸದಂತೆ ತಡರಾತ್ರಿ 12 ಗಂಟೆಯೊಳಗೆ ಆದೇಶಿಸಿದ ಬಾಂಬೆ ಹೈಕೋರ್ಟ್‌

Bar & Bench

ಮಹಾರಾಷ್ಟ್ರದ ಥಾಣೆಯಲ್ಲಿ ಮುಂಬೈ ಪೊಲೀಸ್‌ನ ಮಾಜಿ ಆಯುಕ್ತ ಪರಮ್‌ ಬೀರ್‌ ಸಿಂಗ್‌ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸದಿರಲು ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಎಸ್‌ ಜೆ ಕಥಾವಲ್ಲಾ ಮತ್ತು ಎಸ್‌ ವಿ ತಾವಡೆ ಅವರಿದ್ದ ರಜಾಕಾಲೀನ ಪೀಠವು ಶುಕ್ರವಾರ ಮಧ್ಯರಾತ್ರಿ ತನ್ನ ಅವಧಿ ಮುಗಿಯುವುದರೊಳಗೆ ಆದೇಶ ಹೊರಡಿಸಿದೆ.

ರಜಾಕಾಲೀನ ಪೀಠದ ಅವಧಿಯು ಶುಕ್ರವಾರ ಮಧ್ಯರಾತ್ರಿ 12ಕ್ಕೆ ಅಂತ್ಯಗೊಳ್ಳುವುದಿತ್ತು. ಅಂತ್ಯಗೊಂಡ ನಂತರ ಪೀಠವು ವಿಚಾರಣೆಯನ್ನು ಮುಂದುವರೆಸುವುದು ಸಾಧ್ಯವಿರಲಿಲ್ಲ. ಪ್ರಕರಣವನ್ನು ಸೋಮವಾರಕ್ಕೆ ಈ ಹಿಂದೆ ಪ್ರಕರಣದ ವಿಚಾರಣೆ ನಡೆಸಿದ್ದ ಪೀಠದ ಮುಂದಿರಿಸಬೇಕಿತ್ತು. ಹಾಗಾಗಿ, ಹನ್ನೆರಡು ಗಂಟೆಗೂ ಮುಂಚಿತವಾಗಿ 11:55ಕ್ಕೆ ಪೀಠವು ಚುಟುಕು ಆದೇಶವನ್ನು ನೀಡಿತು. ಆ ಮೂಲಕ ಬಂಧನದ ಹೊಸ್ತಿನಲ್ಲಿದ್ದ ಪರಮ್‌ಬೀರ್ ಸಿಂಗ್ ಅವರಿಗೆ ಮುಂದಿನ ವಿಚಾರಣೆವರೆಗೆ ರಕ್ಷಣೆ ನೀಡಲಾಯಿತು.

ಇದಕ್ಕೂ ಮುನ್ನ ಪ್ರಕರಣದ ವಿಚಾರಣೆಯನ್ನು ಮಧ್ಯಾಹ್ನ ನಡೆಸಲಾಯಿತು. ಈ ವೇಳೆ, ಇದಾಗಲೇ ಪ್ರಕರಣದ ವಿಚಾರಣೆಯನ್ನು ನಡೆಸಿರುವ ಮತ್ತೊಂದು ಪೀಠವು ಮುಂದಿನ ಸೋಮವಾರದಿಂದ ಕಲಾಪ ನಡೆಸುವ ಹಿನ್ನೆಲೆಯಲ್ಲಿ ಅದೇ ನ್ಯಾಯಪೀಠವು ಈ ವಿಷಯವನ್ನು ಆಲಿಸುವುದನ್ನು ಮುಂದುವರಿಸಬೇಕು ಎಂದು ನ್ಯಾಯಪೀಠ ಸಲಹೆ ನೀಡಿತು.

ಆದರೆ, ಇದಕ್ಕೆ ಮಹಾರಾಷ್ಟ್ರ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಡೇರಿಯಸ್ ಖಂಬಾಟ ಅವರು ಪರಮ್‌ ಬೀರ್‌ ಸಿಂಗ್‌ ಅವರ ಮೇಲೆ ಬಲವಂತದ ಕ್ರಮಕ್ಕೆ ಮುಂದಾಗದಿರಲು ರಕ್ಷಣೆ ನೀಡುವ ವಿಚಾರದಲ್ಲಿ ತನ್ನ ಹೇಳಿಕೆಯನ್ನು ವಿಸ್ತರಿಸಬಾರದು ಎಂದು ತಮಗೆ ಸೂಚನೆ ಇರುವುದಾಗಿ ಪೀಠಕ್ಕೆ ತಿಳಿಸಿದರು. ಅಂತಹ ರಕ್ಷಣೆಯ ವಿಸ್ತರಣೆಗೆ ಆದೇಶಿಸುವ ಇಂಗಿತವನ್ನು ನ್ಯಾಯಪೀಠ ಸೂಚಿಸಿದಾಗ, ಖಂಬಾಟ ಅವರು ಅಂಥ ಆದೇಶ ಹೊರಡಿಸುವುದಕ್ಕೂ ಮುನ್ನ ರಾಜ್ಯ ಸರ್ಕಾರದ ವಾದವನ್ನು ಮೊದಲು ಆಲಿಸಬೇಕು ಎಂದರು. ಹೀಗಾಗಿ, ಪೀಠವು ಪ್ರಕರಣದ ವಿಚಾರಣೆಯನ್ನು ರಾತ್ರಿ 10.30 ಕ್ಕೆ ಎತ್ತಿಕೊಂಡಿತು.

ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಪರಮ್‌ ಬೀರ್‌ ಸಿಂಗ್‌ ಅವರು ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಅದನ್ನು ಹಿಂಪಡೆಯುವಂತೆ ಸಿಂಗ್‌ ಅವರ ಮನವೊಲಿಸಲು ವಿಫಲವಾದ ಕಾರಣಕ್ಕೆ 2015ರಲ್ಲಿ ನಡೆದ ಅಪರಾಧಕ್ಕೆ ಸಂಬಂಧಿಸಿದಂತೆ ತಡವಾಗಿ ಅವರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಸಿಂಗ್‌ ಪರ ಹಿರಿಯ ವಕೀಲ ಮಹೇಶ್‌ ಜೇಠ್ಮಲಾನಿ ವಾದಿಸಿದರು.

ಅರ್ಜಿದಾರರ ಮನವಿಯನ್ನು ತೀವ್ರವಾಗಿ ವಿರೋಧಿಸಿದ ಡೇರಿಯಸ್‌ ಖಂಬಾಟ ಸಂಜ್ಞೇಯ ಅಪರಾಧ (ದಂಡಾಧಿಕಾರಿಯ ಅನುಮತಿ ಇಲ್ಲದೇ ಪೊಲೀಸರು ದಸ್ತಗಿರಿ ಮಾಡಬಹುದಾದ ಅಪರಾಧ) ಪತ್ತೆಯಾಗುವವರೆಗೆ ತನಿಖೆ ಮುಂದುವರಿಯಬೇಕು ಎಂದು ವಾದಿಸಿದರು. ಮುಂದುವರೆದು, ಸಿಂಗ್‌ ಅವರು ತಮ್ಮ ವಿರುದ್ಧ ದುರುದ್ದೇಶಪೂರಿತ ಪ್ರಕರಣ ದಾಖಲಿಸಲಾಗಿದೆ ಎಂಬುನ್ನು ರುಜುವಾತುಪಡಿಸಬೇಕು ಎಂದರು.

ತಡರಾತ್ರಿ 11.55ರವರೆಗೆ ವಾದ-ಪ್ರತಿವಾದ ಆಲಿಸಿದ ಪೀಠವು 12 ಗಂಟೆಯ ನಂತರ ನಾವು ರಜಾಕಾಲೀನ ಪೀಠದ ನ್ಯಾಯಮೂರ್ತಿಗಳಾಗಿರುವುದಿಲ್ಲ ಎಂದು ಹೇಳಿ ವಾದಕ್ಕೆ ವಿರಾಮ ನೀಡಲು ವಕೀಲರಿಗೆ ಮನವಿ ಮಾಡಿತು. ಬಳಿಕ, ಸಿಂಗ್‌ ವಿರುದ್ಧ ಯಾವುದೇ ಬಲವಂತದ ಕ್ರಮಕೈಗೊಳ್ಳದಂತೆ ಆದೇಶ ಮಾಡಿತು.

ಇಷ್ಟು ಮಾತ್ರವಲ್ಲದೇ ಮುಖ್ಯ ನ್ಯಾಯಮೂರ್ತಿಯವರ ಅಗತ್ಯ ಅನುಮತಿಯ ನಂತರ ರೆಜಿಸ್ಟ್ರಿಯು ಪ್ರಕರಣವನ್ನು ಸೋಮವಾರ ಮಂಡಿಸಬಹುದು ಎಂದು ಸ್ಪಷ್ಟಪಡಿಸಿದೆ. ತಾಳ್ಮೆಯಿಂದ ಪ್ರಕರಣದ ವಿಚಾರಣೆ ನಡೆಸಿದ್ದಕ್ಕೆ ವಕೀಲರು ಪೀಠಕ್ಕೆ ಧನ್ಯವಾದ ಹೇಳಿದರು. ಆದರೆ, ಈ ವೇಳೆ ನ್ಯಾಯಮೂರ್ತಿ ಕಥಾವಲ್ಲಾ ಅವರು “ಕೋರಿಕೆ ವಿಸ್ತರಣೆಗೆ (ಬಲವಂತದ ಕ್ರಮದಿಂದ ರಕ್ಷಣೆ) ನ್ಯಾಯಾಲಯ ಮನವಿ ಮಾಡಿದರೂ ಸರ್ಕಾರವು ಪುರಸ್ಕರಿಸದೆ ಇದ್ದುದರಿಂದ ವಿಚಾರಣೆ ನಡೆಸಬೇಕಾಯಿತು” ಎಂದರು.

ಅಕೋಲಾದ ಇನ್‌ಸ್ಪೆಕ್ಟರ್‌ ಭೀಮರಾವ್‌ ಘಾಡ್ಗೆ ಅವರ ದೂರನ್ನು ಆಧರಿಸಿ ಸಿಂಗ್‌ ಸೇರಿದಂತೆ ಮೂವತ್ತೆರಡು ಮಂದಿಯ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಕ್ರಿಮಿನಲ್‌ ಪಿತೂರಿ, ಸಾಕ್ಷ್ಯ ನಾಶ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿಯಂತ್ರಣ) ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ಸಿಂಗ್‌ ವಿರುದ್ಧ ದೂರು ದಾಖಲಿಸಲಾಗಿದೆ. ಏಪ್ರಿಲ್‌ ಕೊನೆಯ ವಾರದಲ್ಲಿ ಎಫ್‌ಐಆರ್‌ ಅನ್ನು ಅಕೋಲಾದಿಂದ ಥಾಣೆ ಪೊಲೀಸ್‌ ಠಾಣೆಗೆ ವರ್ಗಾಯಿಸಲಾಗಿದೆ.

ಸಿಂಗ್‌ ತಮ್ಮ ಮನವಿಯಲ್ಲಿ ತಮ್ಮ ವಿರುದ್ಧದ ಎಫ್‌ಐಆರ್‌ ವಜಾ ಮಾಡಬೇಕು. ಕ್ರಿಮಿನಲ್‌ ಪಿತೂರಿ ಮತ್ತು ದುರುದ್ದೇಶಪೂರಿತ ವಿಧಾನಗಳ ಮೂಲಕ ತಮ್ಮ ಹಾಗೂ ಇತರರ ಮೇಲೆ ಒತ್ತಡ ಹೇರಲಾಗಿದೆ ಎಂದು ಸಿಬಿಐ ತನಿಖೆಗೆ ಕೋರಿದ್ದಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ತಾನು ಬರೆದ ಪತ್ರ ಆಧರಿಸಿ ಡಾ. ಜೈಶ್ರೀ ಲಕ್ಷ್ಮಣರಾವ್‌ ಪಾಟೀಲ್‌ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ಆರಂಭಿಸಲಾಗಿದೆ. ಇದನ್ನು ತಡೆಯುವ ಉದ್ದೇಶದಿಂದ ತಮ್ಮ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಪರಮ್‌ ಬೀರ್‌ ಸಿಂಗ್‌ ಆರೋಪಿಸಿದ್ದಾರೆ.

ಗೃಹಸಚಿವರ ಭ್ರಷ್ಟಾಚಾರದ ಕುರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್‌ ಸಿಬಿಐ ತನಿಖೆಗೆ ಅನುಮತಿಸಿದೆ. ಹಾಗಾಗಿ, ತಮ್ಮ ದೂರನ್ನು ಹಿಂಪಡೆಯುವಂತೆ ತಮ್ಮ ಮೇಲೆ ಒತ್ತಡ ಸೃಷ್ಚ್ಟಿಸಲು ಸರ್ಕಾರವು ತಮ್ಮ ವಿರುದ್ಧ ಅನೇಕ ವಿಚಾರಣೆಗಳಿಗೆ ಮುಂದಾಗಿದೆ ಎಂದು ಸಿಂಗ್‌ ವಿವರಿಸಿದ್ದಾರೆ. ಇದರ ಭಾಗವಾಗಿ ಮಹಾರಾಷ್ಟ್ರ ಸರ್ಕಾರ ಆದೇಶಿಸಿರುವ ಪ್ರಾಥಮಿಕ ತನಿಖೆಯೊಂದನ್ನು ಸಹ ನ್ಯಾಯಾಲಯದಲ್ಲಿ ಸಿಂಗ್‌ ಇದಾಗಲೇ ಪ್ರಶ್ನಿಸಿದ್ದಾರೆ. ಆ ಪ್ರಕರಣದ ವಿಚಾರಣೆಯು ಜೂನ್‌ 9ರಂದು ನಡೆಯಲಿದೆ.