ಒತ್ತಡ ಹೇರುವಿಕೆಯ ಸಂಭಾವ್ಯತೆಯಿಂದ ರಕ್ಷಣೆ ಪಡೆಯಬೇಕೆಂದರೆ ಮೊದಲು ಪ್ರಸಾರ ಪ್ರೇಕ್ಷಕರ ಸಂಶೋಧನಾ ಮಂಡಳಿಯು (ಬಾರ್ಕ್) ವಿಧಿಸಿರುವ ದಂಡವನ್ನು ಪಾವತಿಸುವಂತೆ ಟಿವಿ ಟುಡೇ ನೆಟ್‌ವರ್ಕ್ ಲಿಮಿಟೆಡ್‌ಗೆ ಗುರುವಾರ ಬಾಂಬೆ ಹೈಕೋರ್ಟ್ ನಿರ್ದೇಶಿಸಿದೆ.
ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ಟಿವಿ ಟುಡೇ ನೆಟ್‌ವರ್ಕ್ ವಿರುದ್ಧ ಆದೇಶ ಹೊರಡಿಸಿರುವ ಬಾರ್ಕ್, ವಾಹಿನಿಗೆ ಐದು ಲಕ್ಷ ರೂಪಾಯಿ ದಂಡ ವಿಧಿಸಿತ್ತು.
ನ್ಯಾಯಮೂರ್ತಿಗಳಾದ ನಿತಿನ್ ಜಾಮ್ದಾರ್ ಮತ್ತು ಮಿಲಿಂದ್ ಜಾಧವ್ ಅವರೊಳಗೊಂಡ ವಿಭಾಗೀಯ ಪೀಠವು ಆದೇಶದ ವೇಳೆ ಹೀಗೆ ಹೇಳಿತು:
“ಬಾರ್ಕ್‌ನ ಶಿಸ್ತುಪಾಲನಾ ಸಮಿತಿಯ ನಿರ್ದೇಶನದಂತೆ ತನ್ನ ಹಕ್ಕುಗಳು ಮತ್ತು ತಗಾದೆಯ ಪೂರ್ವಾಗ್ರಹವನ್ನು ತೊರೆದು ಟಿವಿ ಟುಡೇ ನೆಟ್‌ವರ್ಕ್ ಐದು ಲಕ್ಷ ರೂಪಾಯಿಯನ್ನು ನ್ಯಾಯಾಲಯದ ರೆಜಿಸ್ಟ್ರಿಯಲ್ಲಿ ಇರಿಸಲು ಮುಕ್ತವಾಗಿದೆ. ಈ ಮೊತ್ತವನ್ನು ಠೇವಣಿ ಇರಿಸಿದರೆ ಟಿವಿ ಟುಡೇ ವಿರುದ್ಧ ಯಾವುದೇ ತೆರನಾದ ಒತ್ತಾಯದ ಕ್ರಮಕೈಗೊಳ್ಳಲಾಗುವುದಿಲ್ಲ.”
ಬಾರ್ಕ್ ಆದೇಶ ವಜಾಗೊಳಿಸುವಂತೆ ಮತ್ತು ವೀಕ್ಷಕತ್ವ ತಿರುಚುವ ಕೃತ್ಯದಿಂದ ಅಂತರ ಕಾಯ್ದುಕೊಳ್ಳುವಂತೆ ಎಚ್ಚರಿಸಿ ಬಾರ್ಕ್ ತನಗೆ ಬರೆದಿರುವ ಪತ್ರವನ್ನು ಬದಿಗೆ ಸರಿಸುವಂತೆ ಕೋರಿ ಇಂಡಿಯಾ ಟುಡೇ ಮತ್ತು ಆಜ್ ತಕ್ ಚಾನೆಲ್‌ಗಳ ಮಾತೃಸಂಸ್ಥೆಯಾದ ಟಿವಿ ಟುಡೇ ಹೈಕೋರ್ಟ್ ಮೆಟ್ಟಿಲೇರಿದೆ. ತನ್ನ ವಿರುದ್ಧ ಬಾರ್ಕ್ ತೆಗೆದುಕೊಳ್ಳಬಹುದಾದ ಒತ್ತಾಯದ ಕ್ರಮಗಳಿಂದ ತನಗೆ ಮಧ್ಯಂತರ ಭದ್ರತೆ ಒದಗಿಸುವಂತೆ ನ್ಯಾಯಾಲಯಕ್ಕೆ ಸಂಸ್ಥೆಯು ಮನವಿ ಮಾಡಿದೆ.
“ಪ್ಯಾನೆಲ್ ಹೊಂದಿರುವ ಮನೆಗಳ ಮೇಲೆ ಪ್ರಭಾವ ಬೀರಿರುವುದರಿಂದ ಟಿವಿ ಟುಡೇ ಚಾನೆಲ್‌ಗಳ ದೈನಂದಿನ ಸರಾಸರಿ ರೀಚ್‌ನಲ್ಲಿ ಅಸಹಜ ಜಿಗಿತವಾದಂತಿದೆ. ವೀಕ್ಷಕತ್ವ ಹೆಚ್ಚಳವಾಗಿಸಲು ದುರುದ್ದೇಶಿತ ದಾರಿ ಹಿಡಿಯುವುದು ನೀತಿ ಸಂಹಿತೆಯ ಅಡಿ ನಿಷೇಧಿಸಲಾಗಿದೆ” ಎಂದು ಬಾರ್ಕ್ ಆರೋಪಿಸಿದೆ.
ಟಿವಿ ಸಮೂಹದ ವಿರುದ್ಧದ ಆರೋಪ ಸಾಬೀತುಪಡಿಸಲು ಯಾವುದೇ ಸಾಕ್ಷಿ ತೋರಲು ವಿಫಲವಾಗಿರುವ ಬಾರ್ಕ್, ಕಾರಣಗಳಿಲ್ಲದೆ ಆದೇಶ ಹೊರಡಿಸಿದೆ. ವೀಕ್ಷಕತ್ವ ತಿರುಚಿರುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಮಾರ್ಗಸೂಚಿಯ ಅನ್ವಯ ಯಾವುದೇ ತೆರನಾದ ಸ್ವತಂತ್ರ ಆಡಿಟ್ ವರದಿಯನ್ನು ಅಪ್‌ಲೋಡ್ ಮಾಡಲಾಗಿಲ್ಲ ಎಂದು ಮನವಿಯಲ್ಲಿ ಬಾರ್ಕ್ ಆದೇಶವನ್ನು ಟಿವಿ ಟುಡೇ ಪ್ರಶ್ನಿಸಿದೆ.
ವಿಚಾರಣೆಯನ್ನು ನ್ಯಾಯಾಲಯವು ನವೆಂಬರ್ 5ಕ್ಕೆ ಮುಂದೂಡಿದೆ. ಬಾರ್ಕ್ ಪರ ವಕೀಲರಾದ ಆಶೀಶ್ ಕಾಮತ್ ಮತ್ತು ಥಾಮಸ್ ಜಾರ್ಜ್ ವಾದಿಸಿದರು. ಹಿರಿಯ ವಕೀಲ ಡಾ. ವೀರೇಂದ್ರ ತುಳಜಾಪುರ್ಕರ್ ಮತ್ತು ಎಬಿಎಚ್ ಲಾ ಜೊತೆ ವಕೀಲ ಡಾ. ಅಭಿನವ್ ಚಂದ್ರಚೂಡ್ ಅವರು ಟಿವಿ ಟುಡೇ ನೆಟ್‌ವರ್ಕ್ ಪ್ರತಿನಿಧಿಸಿದ್ದರು.