ರಿಪಬ್ಲಿಕ್ ಟಿವಿ ಮತ್ತು ಟೈಮ್ಸ್ ನೌ ವಿರುದ್ಧ ಬಾಲಿವುಡ್ ನಿರ್ಮಾಪಕರು ದಾಖಲಿಸಿರುವ 1,069 ಪುಟದ ದೂರಿನಲ್ಲಿ ಏನೇನಿದೆ?

ದೈತ್ಯ ಸಾಮಾಜಿಕ ಮಾಧ್ಯಮ ಸಂಸ್ಥೆಗಳಾದ ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್ ಮತ್ತು ಗೂಗಲ್ ಅನ್ನೂ ದೂರಿನಲ್ಲಿ ಸೇರಿಸಲಾಗಿದ್ದು, ಅಲ್ಲಿ ಪ್ರಸಾರವಾಗುವ ವಿಷಯಗಳು ಸರಿಪಡಿಸಲಾಗದ ಸಮಸ್ಯೆ ಉಂಟು ಮಾಡಿವೆ ಎಂದು ಸಿನಿಮಾ ನಿರ್ಮಾಣ ಸಂಸ್ಥೆಗಳು ಹೇಳಿವೆ.
Arnab and Navika
Arnab and Navika

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಹಾಗೂ ಆನಂತರದ ಬೆಳವಣಿಗೆಗಳಿಗೆ ಮಾಧ್ಯಮಗಳು ನೀಡಿದ ವ್ಯಾಪಕ ಪ್ರಚಾರವು ಜವಾಬ್ದಾರಿಯುತ ಪತ್ರಿಕೋದ್ಯಮ ಮತ್ತು ವಾಕ್ ಸ್ವಾತಂತ್ರ್ಯದ ಮಿತಿಯ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಸುಶಾಂತ್ ಸಾವಿನ ಪ್ರಕರಣದ ಕುರಿತ ಮಾಧ್ಯಮ ವಿಚಾರಣೆಯ ಕುರಿತು ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು (ಪಿಐಎಲ್) ಬಾಂಬೆ ಹೈಕೋರ್ಟ್ ವಿಚಾರಣೆ ನಡೆಸುತ್ತಿರುವ ನಡುವೆಯೇ ಆಂಗ್ಲ ಸುದ್ದಿ ವಾಹಿನಿಗಳಾದ ರಿಪಬ್ಲಿಕ್ ಟಿವಿ ಮತ್ತು ಟೈಮ್ಸ್ ನೌ ವಿರುದ್ಧ ಪ್ರಖ್ಯಾತ ಬಾಲಿವುಡ್ ಸಿನಿಮಾ ನಿರ್ಮಾಣ ಸಂಸ್ಥೆಗಳು ದೆಹಲಿ ಹೈಕೋರ್ಟ್‌ ನಲ್ಲಿ ಸಿವಿಲ್ ಮಾನಹಾನಿ ಮೊಕದ್ದಮೆ ಹೂಡಿವೆ.

ಸಿನಿಮಾ ನಿರ್ಮಾಣ ಸಂಸ್ಥೆಗಳ 1,069 ಪುಟದ ದೂರಿನ ಪ್ರತಿಯು “ಬಾರ್ ಅಂಡ್ ಬೆಂಚ್”ಗೆ ಲಭ್ಯವಾಗಿದ್ದು, ಸುದ್ದಿ ವಾಹಿನಿಗಳು ಬಾಲಿವುಡ್ ಗುರಿಯಾಗಿಸಿ ಕಳಂಕ ತರುವ ಉದ್ದೇಶದಿಂದ ಅಭಿಯಾನ ಆರಂಭಿಸಿವೆ ಎಂದು ದೂರಲಾಗಿದೆ. ದೂರಿನಲ್ಲಿ 312 ಪುಟಗಳ ಅನುಬಂಧ ಸೇರ್ಪಡೆಗೊಳಿಸಲಾಗಿದ್ದು, ಇದರಲ್ಲಿ ಬಾಲಿವುಡ್ ನಿರ್ಮಾಣ ಸಂಸ್ಥೆಗಳು ಹಾಗೂ ಹಿರಿಯ ನಟ ಅಮಿತಾಭ್‌ ಬಚ್ಚನ್ ಅವರನ್ನು ಬಹಿಷ್ಕರಿಸುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಕರೆ ನೀಡಿದ್ದನ್ನು ಉಲ್ಲೇಖಿಸಲಾಗಿದೆ.

ಬಾಲಿವುಡ್ ಸಿನಿಮಾ ನಿರ್ಮಾಣ ಸಂಸ್ಥೆಗಳನ್ನು ಪ್ರತಿನಿಧಿಸುತ್ತಿರುವ ಡಿಎಸ್‌ಕೆ ಲೀಗಲ್ ಸಂಸ್ಥೆಯು ಬಿಡುಗಡೆ ಮಾಡಿರುವ ಮಾಧ್ಯಮ ಹೇಳಿಕೆಯಲ್ಲಿ “ದೂರು ಕೇವಲ ಮಾಧ್ಯಮದಲ್ಲಿ ಗುರುತಿಸಿಕೊಂಡಿರುವ ಖ್ಯಾತನಾಮರಿಗೆ ಸೀಮಿತವಾಗಿಲ್ಲ. ನ್ಯಾಯಾಲಯ ಹೊರಡಿಸಲಿರುವ ಆದೇಶ ಉಲ್ಲಂಘಿಸಲಿರುವ ಅನಾಮಧೇಯವಾಗಿ ಉಳಿಯುವ ಪ್ರತಿವಾದಿಗಳಿಗೂ ಅದು ಅನ್ವಯಿಸುತ್ತದೆ. ದೂರು ಕೇವಲ ಟಿವಿ ಚಾನೆಲ್ ಗಳು ಅಥವಾ ದೂರಿನಲ್ಲಿ ಉಲ್ಲೇಖಿಸಲಾಗಿರುವ ಸಾಮಾಜಿಕ ಮಾಧ್ಯಮಗಳಿಗೆ ಸೀಮಿತವಾಗಿಲ್ಲ. ಅದು ಜಾನ್ ದಿಯೋ/ ಅಶೋಕ್ ಕುಮಾರ್ ಎಂದು ಪ್ರಸ್ತಾಪಿಸಲಾಗಿರುವ ಎಲ್ಲಾ ಅನಾಮಧೇಯ ಪ್ರತಿವಾದಿಗಳನ್ನು ಒಳಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಫಿರ್ಯಾದುದಾರರ ಪರವಾಗಿ ನ್ಯಾಯಪೀಠ ಹೊರಡಿಸುವ ಆದೇಶವು ಅದನ್ನು ಉಲ್ಲಂಘಿಸುವ ಎಲ್ಲಾ ಟಿವಿ ಚಾನೆಲ್ ಗಳು ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಪ್ರಕಟಿಸಲಾಗುವ ವಿಷಯಗಳಿಗೂ ಅನ್ವಯಿಸುತ್ತದೆ. ಇಂಥ ವಿಷಯ ಪ್ರಕಟಿಸುವ ನಿರ್ದಿಷ್ಟ ಹೆಚ್ಚುವರಿ ಪ್ರತಿವಾದಿಗಳನ್ನು ದೂರಿಗೆ ಸೇರ್ಪಡೆಗೊಳಿಸಲಾಗುವುದು. ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಮಾಧ್ಯಮಗಳು ವರದಿ ಮಾಡದಂತೆ ಆದೇಶ ನೀಡುವಂತೆ ನಮ್ಮ ಕಕ್ಷಿದಾರರು ನ್ಯಾಯಾಲಯವನ್ನು ಕೋರುತ್ತಿಲ್ಲ. ಬದಲಾಗಿ ದುರುದ್ದೇಶಪೂರಿತ ವರದಿಗಾರಿಕೆಯ ಬಗ್ಗೆ ಕ್ರಮವಹಿಸುವಂತೆ ಕೋರಲಾಗಿದೆ” ಎಂದು ವಿವರಿಸಿದ್ದಾರೆ.

ಬಾಲಿವುಡ್ ನಿರ್ಮಾಣ ಸಂಸ್ಥೆಗಳು ಎತ್ತಿರುವ ತಗಾದೆಗಳ ಪ್ರಮುಖ ಅಂಶಗಳು ಇಂತಿವೆ.

1. ಬಾಲಿವುಡ್‌ನಲ್ಲಿ ತೊಡಗಿಸಿಕೊಂಡಿರುವವರಿಗೆ ಪ್ರತಿವಾದಿಗಳಿಂದ ದಂಡನೆ ಮತ್ತು ಕಳಂಕ ಹಚ್ಚುವ ಆಂದೋಲನ ಆರಂಭ

”…ಸುದ್ದಿ ಪ್ರಸಾರ ಮಾಡುವುದಕ್ಕೆ ಬದಲಾಗಿ, ಸಿನಿಮಾ ಕ್ಷೇತ್ರದಲ್ಲಿ ಹುಳುಕುಗಳನ್ನು ಪಟ್ಟು ಹಿಡಿದು ಭೇದಿಸುತ್ತಿದ್ದೇವೆ ಎಂದು ಹೇಳಿಕೊಳ್ಳುವ 1 ರಿಂದ 7ನೇ ಪ್ರತಿವಾದಿಗಳ ಪದಗಳ ಬಳಕೆ, ಹಾವಭಾವಗಳ ಮೂಲಕ ಪ್ರತಿನಿತ್ಯ, ವಾರ, ತಿಂಗಳುಗಟ್ಟಲೇ ಬಾಲಿವುಡ್‌ ಗೆ ಕಳಂಕ ಹಚ್ಚುವ ಕೆಲಸದಲ್ಲಿ ನಿರತರಾಗಿದ್ದಾರೆ. ಬಾಲಿವುಡ್ ನಲ್ಲಿನ ಕ್ರಿಮಿನಲ್ ಚಟುವಟಿಕೆಗಳನ್ನು ಬಯಲು ಮಾಡುತ್ತೇವೆ ಎಂದು ಘೋಷಿಸಿ, ಬಾಲಿವುಡ್ ಖ್ಯಾತನಾಮರ ಜನಪ್ರಿಯತೆಯನ್ನು ಬಂಡವಾಳ ಮಾಡಿಕೊಂಡು ಅಪರಾಧ ಸರಣಿಯ ಮಾದರಿಯಲ್ಲಿ ಅದನ್ನು ಬಿಂಬಿಸುವ ಮೂಲಕ ತಮ್ಮ ಮೇಲಿನ ಪ್ರೇಕ್ಷಕರ ಗಮನ ಅತ್ತಿತ್ತ ಸರಿಯದಂತೆ ನೋಡಿಕೊಳ್ಳುತ್ತಿದ್ದಾರೆ.”

ಬಾಲಿವುಡ್‌ನಲ್ಲಿರುವವರೆಲ್ಲಾ ಕ್ರಿಮಿನಲ್‌ಗಳಾಗಿದ್ದು, ಅವರು ಡ್ರಗ್ ಸಂಸ್ಕೃತಿಯಲ್ಲಿ ಮಿಂದೇಳುತ್ತಿದ್ದಾರೆ ಎನ್ನುವ ರೀತಿಯಲ್ಲಿ ಟಿವಿ ಚಾನೆಲ್‌ಗಳು ಬಿಂಬಿಸುತ್ತಿವೆ. ಬಾಲಿವುಡ್‌ ನಲ್ಲಿ ತೊಡಗಿಸಿಕೊಂಡಿರುವವರೆಲ್ಲರೂ ಡ್ರಗ್ ಬಳಕೆಯಲ್ಲಿ ತೊಡಗಿರುವವರು ಎಂದು ತೋರ್ಪಡಿಸಲಾಗುತ್ತಿದೆ. ಎಲ್ಲಾ ರೀತಿಯಲ್ಲೂ ಬಾಲಿವುಡ್ ಅನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಬಿಂಬಿಸಲಾಗುತ್ತಿದೆ ಎಂದು ಫಿರ್ಯಾದುದಾರರು ದೂರಿದ್ದಾರೆ. ವಿವಿಧ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಇದು ಮಾನಹಾನಿಗೆ ಸಮ ಎಂದು ವಿವರಿಸಿದ್ದಾರೆ.

2. ಫಿರ್ಯಾದುದಾರರ ಭದ್ರತೆಯನ್ನು ಇಕ್ಕಟ್ಟಿಗೆ ಸಿಲುಕಿಸಿರುವ ಪ್ರತಿವಾದಿಗಳು

ಬಾಲಿವುಡ್ ನಲ್ಲಿ ತೊಡಗಿಕೊಂಡಿರುವವರ ವಿರುದ್ಧ ಸಾಮಾನ್ಯ ಜನರು ಕೋಪೋದ್ರಿಕ್ತರಾಗುವಂತೆ, ಅಸಹನೆಗೊಳ್ಳುವ ಕೆಲಸವನ್ನು ಉದ್ದೇಶಪೂರ್ವಕವಾಗಿ ಟಿವಿ ಚಾನೆಲ್ ಗಳು ಮಾಡುತ್ತಿವೆ. ಹೆಚ್ಚುವರಿಯಾಗಿ ಬಾಲಿವುಡ್ ಜೊತೆ ಗುರುತಿಸಿಕೊಂಡಿರುವವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ವರದಿಗಾರರು ಕಿರುಕುಳ ನೀಡುತ್ತಿದ್ದಾರೆ.

”1 ರಿಂದ 7ನೇ ಪ್ರತಿವಾದಿಗಳ ವರದಿಗಾರರು ಮತ್ತು ಇತರರು ಬಾಲಿವುಡ್ ಖ್ಯಾತನಾಮರನ್ನು ಸಾರ್ವಜನಿಕ ಸ್ಥಳಗಳಾದ ವಿಮಾನ ನಿಲ್ದಾಣ, ಅವರ ಮನೆ, ತನಿಖಾ ಸಂಸ್ಥೆಗಳ ಹೊರಗೆ ಹಾಗೂ ಕೆಲವು ಕಡೆ ಬಾಲಿವುಡ್ ಖ್ಯಾತನಾಮರನ್ನು ಉದ್ರಿಕ್ತ ಗುಂಪು ಸುತ್ತುವರಿಯುವ ರೀತಿಯಲ್ಲಿ ವರದಿಗಾರರು ಸುತ್ತುವರಿಯುವ ಬೆಳವಣಿಗೆಗಳು ನಡೆದಿವೆ..” ಇದಕ್ಕೆ ಉದಾಹರಣೆಯಾಗಿ ನಟಿ ರಿಯಾ ಚಕ್ರವರ್ತಿಗೆ ವರದಿಗಾರರು ನೀಡಲಾಗಿರುವ ಕಿರುಕುಳವನ್ನು ಉಲ್ಲೇಖಿಸಲಾಗಿದೆ.

3. ಜೀವನೋಪಾಯಕ್ಕೆ ಹೊಡೆತ

ಕಲ್ಪಿತ ಸುದ್ದಿಗಳನ್ನು ಪ್ರಸಾರ/ಪ್ರಕಟ ಮಾಡುವುದರಿಂದ ಜೀವನೋಪಾಯಕ್ಕೆ ಹೊಡೆತ ಬಿದ್ದಿದೆ ಎಂದೂ ವಿವರಿಸಲಾಗಿದೆ.

4. ಬೇಜವಾಬ್ದಾರಿಯುತ ವರದಿಗಾರಿಕೆ ಇತಿಹಾಸ ಹೊಂದಿರುವ ಪ್ರತಿವಾದಿಗಳು

ಹಿಂದೆ ಹಲವು ಸಂದರ್ಭಗಳಲ್ಲಿ ರಿಪಬ್ಲಿಕ್ ಟಿ ವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರಿಗೆ ದಂಡ ವಿಧಿಸುವ, ಖಂಡನೆ ವ್ಯಕ್ತಪಡಿಸಿರುವ, ಅವರ ವಿರುದ್ಧ ನ್ಯಾಯಾಲಯ ಆದೇಶ ಹೊರಡಿಸುವ ಘಟನೆಗಳು ನಡೆದಿವೆ.

ರಿಪಬ್ಲಿಕ್ ಟಿವಿ ಮತ್ತು ಟೈಮ್ಸ್ ನೌ ಸುದ್ದಿ ವಾಹಿನಿಗಳ ವಿರುದ್ಧ ಬೇಜವಾಬ್ದಾರಿಯುತ ವರದಿಗಾರಿಕೆಯ ಇತಿಹಾಸದ ಆರೋಪವಿದೆ. ಬಾಲಿವುಡ್ ನಟರ ಖಾಸಗಿ ವಾಟ್ಸ್ ಅಪ್ ಸಂದೇಶಗಳನ್ನು ಪ್ರಕಟಿಸುವ ಮೂಲಕ 5ನೇ ಪ್ರತಿವಾದಿಯಾದ ಟೈಮ್ಸ್ ನೌ ಖಾಸಗಿ ದತ್ತಾಂಶ ಚರ್ಚೆ ಹುಟ್ಟು ಹಾಕಿತ್ತು, ಅಲ್ಲದೇ ವ್ಯಾಪಕವಾಗಿ ಸಾರ್ವಜನಿಕ ಟೀಕೆ ಎದುರಿಸಿತ್ತು ಎಂದು ವಿವರಿಸಲಾಗಿದೆ.

Also Read
ಟಿಆರ್‌ಪಿ ಹಗರಣ: ಮುಂಬೈ ಪೊಲೀಸ್ ಸಮನ್ಸ್ ಪ್ರಶ್ನಿಸಿ ‘ಸುಪ್ರೀಂ’ ಮೊರೆಹೋದ ರಿಪಬ್ಲಿಕ್ ಟಿವಿ

5. ಖಾಸಗಿತನದ ಉಲ್ಲಂಘನೆ

ಬಾಲಿವುಡ್ ಖ್ಯಾತನಾಮರ ಖಾಸಗಿ ವಿಚಾರಗಳನ್ನು ಅವರ ಅನುಮತಿ ಪಡೆಯದೇ ಪ್ರತಿವಾದಿಗಳು ಸಾರ್ವಜನಿಕಗೊಳಿಸುವುದು ಮತ್ತು ವಾಟ್ಸ್ ಅಪ್ ಸಂಭಾಷಣೆ ಸೇರಿದಂತೆ ಅವರ ಖಾಸಗಿ ಮಾತುಕತೆಯನ್ನು ಅಕ್ರಮವಾಗಿ ಪಡೆದು ಪ್ರಕಟಿಸಿದ್ದಾರೆ ಎಂದು ದೂರಲಾಗಿದೆ.

Extracts of the suit
Extracts of the suit

6. ಮಾಧ್ಯಮ ವರದಿಗಾರಿಕೆಯಿಂದ ನ್ಯಾಯಸಮ್ಮತ ವಿಚಾರಣೆ ಹಕ್ಕಿಗೆ ಧಕ್ಕೆ

ತನಿಖಾ ಸಂಸ್ಥೆಗಳು ಮತ್ತು ನ್ಯಾಯಮೂರ್ತಿಗಳು ಸಾರ್ವತ್ರಿಕ ಅಭಿಪ್ರಾಯದಿಂದ ಪ್ರಭಾವಿತರಾಗಬಹುದು ಎಂಬುದಕ್ಕೆ ನ್ಯಾಯಾಲಯಗಳು ಸಮ್ಮತಿ ಸೂಚಿಸಿವೆ ಎಂದು ಫಿರ್ಯಾದುದಾರರು ಉಲ್ಲೇಖಿಸಿದ್ದಾರೆ.

7. ಕಾರ್ಯಕ್ರಮ ಸಂಹಿತೆ ಉಲ್ಲಂಘನೆ

ಪತ್ರಿಕೋದ್ಯಮದ ಧರ್ಮ ಮತ್ತು ನಿಯಮಗಳನ್ನು ಗಾಳಿಗೆ ತೂರಿರುವ ಟಿವಿ ಚಾನೆಲ್ ಗಳು ಕೇಬಲ್ ಟೆಲಿವಿಷನ್ ನೆಟ್ ವರ್ಕ್ ನಿಯಮಗಳನ್ನೂ ಉಲ್ಲಂಘಿಸಿವೆ ಎಂದು ಆರೋಪಿಸಲಾಗಿದೆ.

8. ದೂಷಣಾ ಪರಂಪರೆಯನ್ನು ಸಮರ್ಥಿಸದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ

ಸಿನಿಮಾ ಕ್ಷೇತ್ರದ ಸದಸ್ಯರ ವಿರುದ್ಧದ ದೂಷಣಾ ಪರಂಪರೆಯನ್ನು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಪ್ರತಿವಾದಿಗಳು ಸಮರ್ಥಸಲಾಗದು ಎಂದು ಹೇಳಲಾಗಿದೆ.

9. ಸಾಮಾಜಿಕ ಮಾಧ್ಯಮದಲ್ಲಿ ಕಟು ಟೀಕೆ

ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್ ಮತ್ತು ಗೂಗಲ್ ಗಳನ್ನು ದೂರಿನಲ್ಲಿ ಸೇರ್ಪಡೆಗೊಳಿಸಿರುವ ಫಿರ್ಯಾದುದಾರರು, ಈ ತಾಣಗಳಲ್ಲಿ ಪ್ರಚಾರ ಮಾಡಲಾಗುತ್ತಿರುವ ಮಾನಹಾನಿ ವಿಚಾರಗಳು ಸರಿಪಡಿಸಲಾಗದ ಘೋರ ಸಮಸ್ಯೆ ಉಂಟು ಮಾಡಿವೆ. ಇಂಥ ವಿಚಾರಗಳಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಫಿರ್ಯಾದುದಾರರು ಮತ್ತು ಅವರ ಕುಟುಂಬ ಸದಸ್ಯರು, ಷೇರುದಾರರು, ನಿರ್ದೇಶಕರು, ಜೊತೆಗಾರರು ಮತ್ತು ವ್ಯವಸ್ಥಾಪಕರನ್ನು ಉಲ್ಲೇಖಿಸಿ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ ಎಂದು ಹೇಳಲಾಗಿದೆ.

10. ಮಾಧ್ಯಮ ವರದಿಗಾರಿಕೆ ನಿಷೇಧ ಕೋರಿಕೆಯಲ್ಲ

ಸುಶಾಂತ್ ಸಿಂಗ್ ಅಥವಾ ಇನ್ನಾವುದೇ ಪ್ರಕರಣದ ಕುರಿತು ವರದಿ ಮಾಡದಂತೆ ಆದೇಶ ನೀಡುವಂತೆ ಕೋರುತ್ತಿಲ್ಲ ಎಂದು ಫಿರ್ಯಾದಾರರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

Also Read
ಒಂದು ತಿಂಗಳ ಚರ್ಚೆಯಲ್ಲಿ ಸುಶಾಂತ್ ಪ್ರಕರಣಕ್ಕಾಗಿ ಅರ್ನಾಬ್ ರಿಂದ ಶೇ.65, ನಾವಿಕಾರಿಂದ ಶೇ.69 ಸಮಯ ಮೀಸಲು!

ಕೆಳಗಿನ ವಿಚಾರಗಳಿಗೆ ಸಂಬಂಧಿಸಿದಂತೆ ಕಡ್ಡಾಯ ಮತ್ತು ಶಾಶ್ವತ ತಡೆಯಾಜ್ಞೆ ನೀಡುವಂತೆ ಕೋರಲಾಗಿದ್ದು, ಪ್ರತಿವಾದಿಗಳಿಗೆ ಕೆಳಗಿನಂತೆ ಸೂಚಿಸಬೇಕು ಎಂದು ಮನವಿ ಮಾಡಲಾಗಿದೆ.

  • ಬಾಲಿವುಡ್ ಜೊತೆ ಗುರುತಿಸಿಕೊಂಡಿರುವವರ ವಿರುದ್ಧ ಬೇಜವಾಬ್ದಾರಿಯುತ, ಮಾನಹಾನಿಯಾಗುವಂತ ವಿಚಾರ ಪ್ರಚಾರ/ಪ್ರಸಾರ ಮಾಡಬಾರದು.

  • ಮಾಧ್ಯಮ ವಿಚಾರಣೆಯಿಂದ ಮುಕ್ತಿ.

  • ವ್ಯಕ್ತಿಯ ಖಾಸಗಿ ಹಕ್ಕಿನಲ್ಲಿ ಮೂಗು ತೂರಿಸಬಾರದು.

  • ಕಾರ್ಯಕ್ರಮ ಸಂಹಿತೆಯ ಅನುಸಾರ ಕಾರ್ಯನಿರ್ವಹಿಸಬೇಕು.

ಮಾನಹಾನಿಯಾಗುವಂಥ ವಿಚಾರಗಳನ್ನು ಪ್ರಚಾರ/ಪ್ರಸಾರ ಮಾಡಿರುವುದನ್ನು ಹಿಂಪಡೆಯಬೇಕು ಅಥವಾ ತಡೆ ಹಿಡಿಯಬೇಕು ಅಥವಾ ನಿರ್ಬಂಧಿಸುವಂತೆ ನ್ಯಾಯಾಲಯವನ್ನು ಬಾಲಿವುಡ್ ಸಿನಿಮಾ ನಿರ್ಮಾಣ ಸಂಸ್ಥೆಗಳು ಕೋರಿವೆ.

Related Stories

No stories found.
Kannada Bar & Bench
kannada.barandbench.com