ಒಂದೇ ಬಾರಿ ಪಾವತಿಸಿ ಸಾಲ ಇತ್ಯರ್ಥಪಡಿಸಿಕೊಳ್ಳುವ ವ್ಯವಸ್ಥೆಯನ್ನು (ಒಟಿಎಸ್) ಸಾಲಗಾರರು ಹಕ್ಕಾಗಿ ಕೇಳುವಂತಿಲ್ಲ. ಇಂತಹ ಪ್ರಕರಣಗಳ ಬಗ್ಗೆ ನಿರ್ಧರಿಸಲು ತಮ್ಮ ಆಂತರಿಕ ಮಾನದಂಡಗಳನ್ನು ಬಹಿರಂಗಪಡಿಸಬೇಕು ಎಂದು ಬ್ಯಾಂಕ್‌ಗಳನ್ನು ನ್ಯಾಯಾಲಯ ಒತ್ತಾಯಿಸಲಾಗದು ಅಥವಾ ಅಂತಹ ಪ್ರಸ್ತಾಪ ಸ್ವೀಕರಿಸುವಂತೆ ಅವುಗಳಿಗೆ ಸೂಚಿಸಲಾಗದು ಎಂದು ಬಾಂಬೆ ಹೈಕೋರ್ಟ್ ನಾಗಪುರ ಪೀಠ ಹೇಳಿದೆ [ಅರ್ಚನಾ ವನಿ ಮತ್ತು ಬಾಂಕ್ ಆಫ್ ಇಂಡಿಯಾ ನಡುವಣ ಪ್ರಕರಣ].
ಎನ್ ಕುಮಾರ್ ಹೌಸಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕಿ ಮತ್ತು ಷೇರುದಾರರಾದ ಅರ್ಚನಾ ವಾನಿ ಅವರು ಸಲ್ಲಿಸಿದ್ದ ರಿಟ್ ಅರ್ಜಿಯಲ್ಲಿ ಕಂಪನಿಯು ಗ್ಯಾರಂಟಿಯಾಗಿದ್ದ ಕೆಲವು ಸಾಲಗಳನ್ನು ಇತ್ಯರ್ಥಪಡಿಸುವ ತನ್ನ ಒಟಿಎಸ್ ಪ್ರಸ್ತಾವನೆಯನ್ನು ಇಂಡಿಯನ್ ಬ್ಯಾಂಕ್ ತಿರಸ್ಕರಿಸಿತ್ತು ಎಂದಿದ್ದರು. ವಾನಿ ಅವರ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಅನಿಲ್ ಎಸ್ ಕಿಲೋರ್ ಮತ್ತು ರಜನೀಶ್ ಆರ್ ವ್ಯಾಸ್ ಅವರ ವಿಭಾಗೀಯ ಪೀಠ " ಸಾಲಗಾರರು ಒಟಿಎಸ್‌ಗಾಗಿ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಅದನ್ನು ಕಾಲಕಾಲಕ್ಕೆ ಪರಿಗಣನೆಗೆ ತೆಗೆದುಕೊಂಡು ಅದು ಮಾನದಂಡಕ್ಕೆ ಹೊಂದಿಕೆಯಾಗುವುದಿಲ್ಲ ಎಂಬ ಕಾರಣವನ್ನು ನೀಡಿ ತಿರಸ್ಕರಿಸಲಾಗುತ್ತಿದೆ ಎಂಬ ಕಾರಣಕ್ಕಾಗಿ, ಸಾಲಗಾರನ ಪರವಾಗಿ ಹಕ್ಕು ಇದೆ ಎನ್ನಲಾಗದು... ಬ್ಯಾಂಕಿನ ಪರ ವಕೀಲರು ಮಂಡಿಸಿದ ವಾದ ಸೂಕ್ತವಾಗಿದ್ದು, ಸಾರ್ವಜನಿಕ ಹಣಕಾಸಿಗೆ ಸಂಬಂಧಿಸಿದ ಪ್ರಕರಣ ಇದಾಗಿರುವುದರಿಂದ ಒಟಿಎಸ್ ಸ್ವೀಕರಿಸುವ ಮೂಲಕ ಖಾತೆಯನ್ನು ಬರಖಾಸ್ತು ಮಾಡಲು ಕೇಳುವುದು ಸಾರ್ವಜನಿಕ ಹಿತಾಸಕ್ತಿಯಲ್ಲ" ಎಂದಿತು.
ಇಂತಹ ಪ್ರಕರಣಗಳನ್ನು ಬ್ಯಾಂಕುಗಳ ಪರಿಗಣನೆಗೆ ಬಿಡಬೇಕು ಎಂದು ಪೀಠ ತಿಳಿಸಿತು. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ಸಾಲಗಾರನಿಗೆ ಸಾಲ ಮರುಪಾವತಿಸುವ ಸಾಮರ್ಥ್ಯವಿದೆ ಎಂದು ಕಂಡುಕೊಂಡರೆ ಅಥವಾ ಹರಾಜು ಮಾಡುವ ಮೂಲಕ ಸಾಲದ ಸಂಪೂರ್ಣ ಮೊತ್ತವನ್ನು ವಸೂಲಿ ಮಾಡಬಹುದು ಎಂದು ಭಾವಿಸಿದರೆ, ಬ್ಯಾಂಕ್ ಒಟಿಎಸ್ ಸೌಲಭ್ಯ ನೀಡದಿರುವುದು ಯುಕ್ತವಾಗಿದೆ. ಅಂತಿಮವಾಗಿ, ಇಂತಹ ತೀರ್ಮಾನವನ್ನು ಬ್ಯಾಂಕ್‌ನ ವಿವೇಚನೆಗೆ ಬಿಡಬೇಕು. ಸಾರ್ವಜನಿಕ ಹಿತವನ್ನು ಗಮನದಲ್ಲಿಟ್ಟುಕೊಂಡು, ಬ್ಯಾಂಕ್ ಎಚ್ಚರಿಕೆಯ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸದಾ ಭಾವಿಸಬೇಕು; ನ್ಯಾಯಾಲಯ ಮಧ್ಯಸ್ಥಿಕೆ ಮಾಡಬಾರದು ಎಂದು ಅಭಿಪ್ರಾಯಪಟ್ಟಿತು.
ಪೂನಮ್ ರೆಸಾರ್ಟ್ಸ್ ಲಿಮಿಟೆಡ್ ನಾಗಪುರದಲ್ಲಿ ಕ್ಲಬ್ ಹಾಗೂ ರೆಸಾರ್ಟ್ ನಿರ್ಮಿಸುವುದಕ್ಕಾಗಿ ಇಂಡಿಯನ್ ಬ್ಯಾಂಕ್ (ಹಿಂದಿನ ಅಲಹಾಬಾದ್ ಬ್ಯಾಂಕ್) 2011ರಲ್ಲಿ ₹62 ಕೋಟಿ ಸಾಲ ನೀಡಿತ್ತು. ಸಾಲ ಪಡೆಯುವುದಕ್ಕಾಗಿ ಜಾಮೀನುದಾರನಾಗಿ ನಿಂತಿದ್ದ ಎನ್ ಕುಮಾರ್ ಹೌಸಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ತನ್ನ ಆಸ್ತಿ ಅಡಮಾನ ಇಟ್ಟಿತ್ತು.
ಪೂನಮ್ ರೆಸಾರ್ಟ್ಸ್ ಲಿಮಿಟೆಡ್ ಸುಸ್ತಿದಾರನಾದಾಗ ಸಾಲದ ಖಾತೆಯನ್ನು ಮಾರ್ಚ್ 2017 ರಲ್ಲಿ ಕಾರ್ಯನಿರ್ವಹಿಸದ ಆಸ್ತಿ (ಎನ್‌ಪಿಎ) ಎಂದು ಘೋಷಿಸಲಾಯಿತು. ಬ್ಯಾಂಕ್ ಸರ್ಫೇಸಿ ಕಾಯಿದೆಯ ಸೆಕ್ಷನ್ 13(2) ಮತ್ತು 13(4) ರ ಅಡಿಯಲ್ಲಿ ಮುಂದುವರಿಯಿತು ಮತ್ತು ನಂತರ ಮುಂಬೈನ ಎನ್‌ಸಿಎಲ್‌ಟಿ ಎದುರು ದಿವಾಳಿಮತ್ತು ದಿವಾಳಿತನ ಸಂಹಿತೆ, 2016ರ ಸೆಕ್ಷನ್ 7 ರ ಅಡಿಯಲ್ಲಿ ಅರ್ಜಿ ಸಲ್ಲಿಸಿತು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ವಾನಿ ಅವರು ಬ್ಯಾಂಕ್ ಒಟಿಎಸ್ ಕುರಿತಂತೆ ತನ್ನ ಆಂತರಿಕ ಮಾನದಂಡಗಳನ್ನು ಬಹಿರಂಗಪಡಿಸದೆ ಒಟಿಎಸ್ ಪ್ರಸ್ತಾವಗಳನ್ನು ತಿರಸ್ಕರಿಸುತ್ತಿದೆ. ಹೀಗಾಗಿ ಆರ್‌ಬಿಐ ಮೂಲಕ ಸ್ವತಂತ್ರ ತನಿಖೆ ನಡೆಸಬೇಕು ಎಂದು ಕೋರಿದರು.
ವಾದ ಆಲಿಸಿದ ನ್ಯಾಯಾಲಯ ಒಟಿಎಸ್ ನೀತಿ ಆ ವೇಳೆ ಜಾರಿಯಲ್ಲಿರಲಿಲ್ಲ. ಒಟಿಎಸ್ ಕುರಿತು ನಿರ್ಧಾರ ತೆಗೆದುಕೊಳ್ಳುವುದು ಬ್ಯಾಂಕ್‌ನ ವಿವೇಚನೆಗೆ ಬಿಟ್ಟ ವಿಚಾರವಾಗಿದ್ದರಿಂದ ಬ್ಯಾಂಕ್ ಮನಸೋಇಚ್ಛೆಯಿಂದ ನಡೆದುಕೊಂಡಿಲ್ಲ ಎಂದಿತು.
ಪ್ರಕರಣದಲ್ಲಿ ಸಾಲಗಾರನ ಕಾನೂನುಬದ್ಧ ನಿರೀಕ್ಷೆಯನ್ನು ಉಲ್ಲಂಘಿಸಲಾಗಿದೆ ಎಂಬ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು. ಅಂತಹ ಹಕ್ಕನ್ನು ಸಮರ್ಥಿಸಲು ಯಾವುದೇ ಆರ್‌ಬಿಐ-ಆದೇಶಿತ ಒಟಿಎಸ್ ಯೋಜನೆ ಅಸ್ತಿತ್ವದಲ್ಲಿಲ್ಲ ಎಂದಿತು. ಈ ಪ್ರಕರಣದಲ್ಲಿ ರಿಟ್ ನ್ಯಾಯವ್ಯಾಪ್ತಿಯನ್ನು ಚಲಾಯಿಸುವುದು ನ್ಯಾಯದ ಹಿತಾಸಕ್ತಿಗೆ ಅನುಗುಣವಾಗಿರುವುದಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಅರ್ಜಿ ವಜಾಗೊಳಿಸಿತು.