Allahabad High court with PM modi and President of India 
ಸುದ್ದಿಗಳು

ಪ್ರಧಾನಿ ಸೇರಿದಂತೆ ಸಾಂವಿಧಾನಿಕ ಗಣ್ಯರನ್ನು ಗೌರವಿಸುವುದು ಪ್ರತಿ ನಾಗರಿಕನ ಬದ್ಧ ಕರ್ತವ್ಯ: ಅಲಾಹಾಬಾದ್ ಹೈಕೋರ್ಟ್

ವಾಟ್ಸಾಪ್‌ನಲ್ಲಿ ಪ್ರಧಾನಿಯವರ ಕೆಲ ಆಕ್ಷೇಪಾರ್ಹ ಛಾಯಾಚಿತ್ರಗಳನ್ನು ಹಂಚಿಕೊಂಡ ಮೊಹಮ್ಮದ್ ಅಫಾಕ್ ಕುರೈಸಿ ಎಂಬುವವರ ಜಾಮೀನು ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

Bar & Bench

ಈ ಮಹಾನ್‌ ದೇಶದ ರಾಷ್ಟ್ರದ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಸಾಂವಿಧಾನಿಕ ಗಣ್ಯರನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಬದ್ಧ ಕರ್ತವ್ಯವಾಗಿದೆ ಎಂದು ಅಲಾಹಾಬಾದ್‌ ಹೈಕೋರ್ಟ್‌ ಹೇಳಿದೆ. ವಾಟ್ಸಾಪ್‌ನಲ್ಲಿ ಪ್ರಧಾನಿಯವರ ಕೆಲವು ಆಕ್ಷೇಪಾರ್ಹ ಛಾಯಾಚಿತ್ರಗಳನ್ನು ಹಂಚಿಕೊಂಡ ಮೊಹಮ್ಮದ್ ಅಫಾಕ್ ಕುರೈಸಿ ಎಂಬಾತನ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ತೀರ್ಪು ನೀಡಿದೆ.

ಪ್ರಧಾನಿ ಇಲ್ಲವೇ ಯಾವುದೇ ಸಾಂವಿಧಾನಿಕ ಗಣ್ಯರನ್ನು ನಿರ್ದಿಷ್ಟ ವರ್ಗ ಅಥವಾ ಧರ್ಮಕ್ಕೆ ಸೀಮಿತಗೊಳಿಸಲಾಗದು. ಏಕೆಂದರೆ ಅವರು ದೇಶದ ಪ್ರತಿಯೊಬ್ಬ ನಾಗರಿಕರನ್ನು ಪ್ರತಿನಿಧಿಸುತ್ತಾರೆ ಎಂದು ನ್ಯಾಯಮೂರ್ತಿ ಮೊಹಮದ್ ಫೈಜ್ ಆಲಂ ಖಾನ್ ಅವರಿದ್ದ ಏಕಸದಸ್ಯ ಪೀಠ ಹೇಳಿತು.

ತಂತ್ರಜ್ಞಾನದೊಂದಿಗೆ ಡಿಜಿಟಲ್‌ ಕ್ರಾಂತಿ ಬೆಳೆದಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇದನ್ನು ಸದುದ್ದೇಶಕ್ಕೆ ಬಳಕೆಯಾಗಿರುವಂತೆಯೇ ಕಿಡಿಗೇಡಿಗಳಿಂದ ದುಷ್ಕೃತ್ಯಕ್ಕೆ ದುರ್ಬಳಕೆಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 295-ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು), 505 (ಸಮುದಾಯಗಳ ನಡುವೆ ದ್ವೇಷ ಅಥವಾ ದುರುದ್ದೇಶಪೂರ್ವಕ ಹೇಳಿಕೆ ನೀಡುವುದು) ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66ರ ಅಡಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದ ಒಟ್ಟಾರೆ ಅಂಶ ಮತ್ತು ಸನ್ನಿವೇಶಗಳನ್ನು ಪರಿಗಣಿಸಿ ಹಾಗೂ ಅರ್ಜಿದಾರ ಬೇಷರತ್ ಕ್ಷಮೆ ಯಾಚಿಸಿರುವುದನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯ ಆತನಿಗೆ ಜಾಮೀನು ನೀಡಿದೆ. ನ್ಯಾಯಾಲಯ ಜಾಮೀನು ನೀಡುವಾಗ ಅರ್ಜಿದಾರ ಸೆಪ್ಟೆಂಬರ್ 18, 2021ರಿಂದ ಜೈಲಿನಲ್ಲಿದ್ದರು ಹಾಗೂ ಅವರಿಗೆ ಯಾವುದೇ ಕ್ರಿಮಿನಲ್‌ ಹಿನ್ನೆಲೆ ಇರಲಿಲ್ಲ ಎಂಬ ಅಂಶಗಳನ್ನು ಗಣನೆಗೆ ತೆಗೆದುಕೊಂಡಿತು.

ಅರ್ಜಿದಾರ ಫೋಟೊ ಹಂಚಿಕೊಂಡಿರಲಿಲ್ಲ. ಅಲ್ಲದೆ ಅವರ ಫೋನ್‌ ಅನ್ನು ಬೇರೆಯವರು ಬಳಸಿದ್ದು ಅವರು ಫೋಟೊ ಹಂಚಿಕೊಂಡು ತಮ್ಮ ಕಕ್ಷೀದಾರನ ವಿರುದ್ಧ ದ್ವೇಷ ಸಾಧಿಸಲು ಮುಂದಾಗಿದ್ದರು. ತಮ್ಮ ಕಕ್ಷೀದಾರನ ಶೈಕ್ಷಣಿಕ ಅರ್ಹತೆ ಗಮನಿಸಿದರೆ ಆತ ಛಾಯಾಚಿತ್ರವನ್ನು ತಿರುಚಲು ಸಾಧ್ಯವಿಲ್ಲ. ಎಂದು ಅರ್ಜಿದಾರರ ಪರ ವಕೀಲ ವಾದ ಮಂಡಿಸಿದರು.

ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ವಕೀಲರು “ಛಾಯಾಚಿತ್ರ ತಿರುಚುವ ಮೂಲಕ ದೇಶದ ಪ್ರಧಾನಿಯನ್ನು ಆರೋಪಿ ಅವಮಾನಿಸಿದ್ದಾರೆ. ಇದೊಂದು ಗುರುತರವಾದ ಸಂಗತಿ ಎಂದು ಬಗೆದು ಅವರು ಜಾಮೀನಿಗೆ ಅರ್ಹರಲ್ಲ ಎಂದು ಪರಿಗಣಿಸುವಂತೆ ನ್ಯಾಯಾಲಯವನ್ನು ಕೋರಿದರು.