ಸ್ತ್ರೀತನದ ಬಗ್ಗೆ ಅಪಾರ ಗೌರವ ಹೊಂದಿದ್ದೇವೆ: ಸಂತ್ರಸ್ತೆ ವಿವಾಹವಾಗುವಂತೆ ಅತ್ಯಾಚಾರಿಗೆ ಹೇಳಿಲ್ಲ ಎಂದ ಸಿಜೆಐ

“ಮಹಿಳಾ ಸಮುದಾಯಕ್ಕೆ ನಾವು ಅಪಾರವಾದ ಗೌರವ ನೀಡಿದ್ದೇವೆ. ನೀವು ಸಂತ್ರಸ್ಥೆಯನ್ನು ವಿವಾಹವಾಗಲು ಬಯಸುತ್ತೀರಾ? ಎಂದು ಕೇಳಿದ್ದೇವೆಯೇ ವಿನಾ ಅತ್ಯಾಚಾರಿಗೆ ವಿವಾಹವಾಗುವಂತೆ ನಾವು ಆದೇಶಿಸಿಲ್ಲ ಎಂದು ಸಿಜೆಐ ಹೇಳಿದ್ದಾರೆ.
ಸ್ತ್ರೀತನದ ಬಗ್ಗೆ ಅಪಾರ ಗೌರವ ಹೊಂದಿದ್ದೇವೆ: ಸಂತ್ರಸ್ತೆ ವಿವಾಹವಾಗುವಂತೆ ಅತ್ಯಾಚಾರಿಗೆ ಹೇಳಿಲ್ಲ ಎಂದ ಸಿಜೆಐ
Justice AS Bopanna, CJI Bobde and Justice V Ramasubramanian

ಕಳೆದ ವಾರ ಅತ್ಯಾಚಾರ ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ಸಂತ್ರಸ್ತೆಯನ್ನು ವಿವಾಹವಾಗುತ್ತೀರಾ ಎಂದು ಅತ್ಯಾಚಾರ ಆರೋಪಿಯನ್ನು ಸುಪ್ರೀಂ ಕೋರ್ಟ್‌ ಕೇಳಿತ್ತೆನ್ನಲಾದ ಘಟನೆಯನ್ನು “ಸಂಪೂರ್ಣವಾಗಿ ತಪ್ಪು ವರದಿ ಮಾಡಲಾಗಿದೆ" ಎಂದು ಸೋಮವಾರ ಸುಪ್ರೀಂ ಕೋರ್ಟ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.

ಅತ್ಯಾಚಾರಕ್ಕೆ ಒಳಗಾದ ಹದಿನಾಲ್ಕು ವರ್ಷದ ಅಪ್ರಾಪ್ತ ಸಂತ್ರಸ್ತೆಯು ಗರ್ಭಪಾತಕ್ಕೆ ಕೋರಿ ಸಲ್ಲಿಸಿದ್ದ ಮನವಿಯ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್‌ ಅವರಿದ್ದ ತ್ರಿಸದಸ್ಯ ಪೀಠವು ಸ್ಪಷ್ಟೀಕರಣ ನೀಡಿದೆ.

“ಮಹಿಳಾ ಸಮುದಾಯಕ್ಕೆ ನಾವು ಅಪಾರ ಗೌರವ ನೀಡಿದ್ದೇವೆ. ನೀವು ವಿವಾಹವಾಗುತ್ತೀರಾ ಎಂದು ಪ್ರಶ್ನಿಸಿದ್ದೇವೆಯೇ ಹೊರತು ವಿವಾಹವಾಗುವಂತೆ ನಾವು ಆದೇಶ (ಆರೋಪಿಗೆ) ಮಾಡಿಲ್ಲ” ಎಂದು ವಿಚಾರಣೆಯ ಆರಂಭದಲ್ಲಿ ಸಿಜೆ ಹೇಳಿದರು. ಮುಖ್ಯ ನ್ಯಾಯಮೂರ್ತಿ ಅಭಿಪ್ರಾಯಕ್ಕೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಬೆಂಬಲ ಸೂಚಿಸಿದರು.

“ವಿಭಿನ್ನ ರೀತಿಯಲ್ಲಿ ನೀವು ಪ್ರಶ್ನಿಸಿದಿರಿ. ಆದರೆ, ನಿಮ್ಮ ಹೇಳಿಕೆಯನ್ನು ಸಂದರ್ಭದಾಚೆಗಿರಿಸಿ ತಪ್ಪಾಗಿ ಅರ್ಥೈಸಲಾಗಿದೆ” ಎಂದು ಮೆಹ್ತಾ ಹೇಳಿದರು.

ದೇಶದ ಸರ್ವೋನ್ನತ ನ್ಯಾಯಾಲಯದ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ತಪ್ಪಾಗಿ ವರದಿ ಮಾಡಲಾಗಿದೆ ಎಂದು ವಕೀಲ ಬಿಜು ಆರೋಪಿಸಿದ ಬಳಿಕ ಸಿಜೆಐ ಬೊಬ್ಡೆ ಅವರು ಭಾರತೀಯ ಸಾಕ್ಷ್ಯ ಕಾಯಿದೆಯ ಸೆಕ್ಷನ್‌ 165 ಅನ್ನು ಓದುವಂತೆ ತುಷಾರ್‌ ಮೆಹ್ತಾ ಅವರಿಗೆ ಸೂಚಿಸಿದರು.

Also Read
ನೀವು ಆಕೆಯನ್ನು ವಿವಾಹವಾಗುತ್ತೀರಾ? ಅಪ್ರಾಪ್ತೆಯ ಮೇಲೆ ಪದೇಪದೇ ಅತ್ಯಾಚಾರಗೈದ ಸರ್ಕಾರಿ ಉದ್ಯೋಗಿಗೆ ಸುಪ್ರೀಂ ಪ್ರಶ್ನೆ!

ಸಾಕ್ಷ್ಯ ಕಾಯಿದೆಯ ಅನ್ವಯ, ಸೂಕ್ತ ಸಾಕ್ಷ್ಯಾಧಾರಗಳನ್ನು ಪತ್ತೆ ಹಚ್ಚುವ ಉದ್ದೇಶದಿಂದ ನ್ಯಾಯಾಧೀಶರು ತಮಗೆ ಸೂಕ್ತವೆನಿಸಿದ ಯಾವುದೇ ಸಂಬಂಧಪಟ್ಟ ಅಥವಾ ಸಂಬಂಧಿಸದ ವಿಷಯದ ಬಗೆಗಿನ ಪ್ರಶ್ನೆಗಳನ್ನು, ಯಾವುದೇ ವಿಧಾನದಲ್ಲಿ, ಯಾವುದೇ ವೇಳೆ, ಯಾವುದೇ ಸಾಕ್ಷಿ, ಪಕ್ಷಕಾರರನ್ನು ಕೇಳಬಹುದಾಗಿದೆ; ಅಲ್ಲದೆ, ಯಾವುದೇ ದಾಖಲೆ ಅಥವಾ ವಸ್ತುವನ್ನು ಸಲ್ಲಿಸುವಂತೆ ಕೇಳಬಹುದಾಗಿದೆ; ಅಂತಹ ಯಾವುದೇ ಪ್ರಶ್ನೆ, ಆದೇಶಗಳಿಗೆ ಪಕ್ಷಕಾರರಾಗಲಿ ಅಥವಾ ಅವರ ಪ್ರತಿನಿಧಿಗಳಾಗಲಿ ಯಾವುದೇ ತಕರಾರು ಎತ್ತುವ ಹಾಗಿಲ್ಲ ಹಾಗೂ ನ್ಯಾಯಾಲಯದ ಒಪ್ಪಿಗೆ ಇಲ್ಲದೆ ಯಾವುದೇ ಪ್ರಶ್ನೆಗೆ ಸಾಕ್ಷಿಯು ನೀಡಿದ ಯಾವುದೇ ಉತ್ತರವನ್ನು ಪಾಟಿ ಸವಾಲಿಗೆ ಒಳಪಡಿಸುವಂತಿಲ್ಲ.

ಸಿಜೆಐ ಅವರು ಸೆಕ್ಷನ್‌ 165 ಅನ್ನು ಓದಿ ಎಂದಿದ್ದಕ್ಕೆ ಪ್ರತಿಕ್ರಿಯಿಸಿದ ಮೆಹ್ತಾ ಅವರು, “ನೀವು ಭಾರತೀಯ ಸಾಕ್ಷ್ಯ ಕಾಯಿದೆಯ ಸೆಕ್ಷನ್‌ 165ಕ್ಕೆ ತಕ್ಕಂತೆ ಕೆಲಸ ಮಾಡಿದ್ದೀರಿ” ಎಂದು ಹೇಳಿದರು.

ನ್ಯಾಯಾಲಯದ ಘನತೆಗೆ ಧಕ್ಕೆ ತರುವುದನ್ನು ನಿಯಂತ್ರಿಸುವುದಕ್ಕೆ ಒಂದು ವಿಧಾನ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಇದೇ ವೇಳೆ ವಕೀಲ ಬಿಜು ಹೇಳಿದರು. ಇದಕ್ಕೆ ಸಿಜೆಐ ಬೊಬ್ಡೆ ಅವರು “ನಮ್ಮ ಘನತೆಯು ಯಾವಾಗಲೂ ವಕೀಲ ಸಮುದಾಯದ ಕೈಯಲ್ಲಿದೆ” ಎಂದರು.

ಪ್ರಕರಣದ ಸಂಬಂಧ ಬಾಲಕಿಯ ಪೋಷಕರ ಜೊತೆ ಮಾತನಾಡುವ ಇಂಗಿತ ವ್ಯಕ್ತಪಡಿಸಿದ ಪೀಠವು ವಿಚಾರಣೆಯನ್ನು ಮಾರ್ಚ್‌ 12ಕ್ಕೆ ಮುಂದೂಡಿತು. ಆರೋಪಿತ ಸರ್ಕಾರಿ ಉದ್ಯೋಗಿಯು ಅಪ್ರಾಪ್ತೆಯನ್ನು ನಿರಂತರವಾಗಿ ಅತ್ಯಾಚಾರ ಮಾಡಿದ್ದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸಿಜೆಐ ಪ್ರತಿಕ್ರಿಯೆಯ ಬಗ್ಗೆ ನಕಾರಾತ್ಮಕ ವರದಿಗಳು ಪ್ರಕಟವಾಗಿದ್ದವು, ಸಾರ್ವಜನಿಕವಾಗಿಯೂ ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

No stories found.
Kannada Bar & Bench
kannada.barandbench.com